Advertisement

ಕಾಮಗಾರಿ ಮುಗಿಸಲು ತಾಕೀತು

06:23 AM Jun 04, 2019 | Lakshmi GovindaRaj |

ಬೆಂಗಳೂರು: ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಕೈಗೆತ್ತಿಕೊಂಡಿರುವ ಟೆಂಡರ್‌ಶ್ಯೂರ್‌ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮೇಯರ್‌ ಗಂಗಾಂಬಿಕೆ ತಾಕೀತು ಮಾಡಿದ್ದಾರೆ.

Advertisement

ಮೆಜೆಸ್ಟಿಕ್‌ ಬಳಿಯ ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಟೆಂಡರ್‌ಶ್ಯೂರ್‌ ಕಾಮಗಾರಿ ನಡೆಯುತ್ತಿದ್ದು, ಸಮರ್ಪಕವಾಗಿ ಪೈಪ್‌ಲೈನ್‌ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಮೇಯರ್‌ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಕಾಮಗಾರಿಯಿಂದಾಗಿ ಕಳೆದ ನಾಲ್ಕು ತಿಂಗಳಿಂದ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ವ್ಯಾಪಾರಿಗಳು ದೂರಿದರೆ, ಮನೆಗಳ ಮುಂದೆ ಕೊಳಚೆ ನೀರು ಹರಿಯುತ್ತಿರುವುದರಿಂದ ದುರ್ವಾಸನೆಗೆ ಮನೆಯಲ್ಲಿರುವುದು ಕಷ್ಟವಾಗಿದೆ ಎಂದು ಸಾರ್ವಜನಿಕರು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್‌ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಟನ್‌ಪೇಟೆ ನಗರದ ಕೇಂದ್ರ ಭಾಗದಲ್ಲಿರುವುದರಿಂದ ಅತಿ ಹೆಚ್ಚು ಜನಸಂಖ್ಯೆ ಹಾಗೂ ವಾಹನ ದಟ್ಟಣೆ ಹೊಂದಿರುವ ಪ್ರದೇಶವಾಗಿದೆ. ಸಣ್ಣ-ಸಣ್ಣ ರಸ್ತೆಗಳಿರುವುದರಿಂದ ಹೆಚ್ಚು ಸಂಚಾರ ದಟ್ಟಣೆಯಾಗುತ್ತದೆ. ಹಾಗಾಗಿ, 10 ಕೋಟಿ ರೂ. ವೆಚ್ಚದಲ್ಲಿ 1.75 ಕಿ.ಮೀ ರಸ್ತೆಯನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಈ ಪೈಕಿ ಜಲ ಮಂಡಳಿಯ ಪೈಪ್‌ಲೈನ್‌ ಅಳವಡಿಕೆ ಹಾಗೂ ರಾಜಕಾಲುವೆ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.

ಸಂಚಾರಿ ಪೊಲೀಸ್‌ ಇಲಾಖೆ, ಜಲಮಂಡಳಿ, ಬೆಸ್ಕಾಂ ಹಾಗೂ ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಮನ್ವತೆಯಿಂದ ಕಾರ್ಯ ನಡೆಸಿದರೆ ಮಾತ್ರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಲಿದೆ. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಸಾಧ್ಯವಾದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

Advertisement

ಪರಿಶೀಲನೆ ನಡೆಸುವ ವೇಳೆ ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌, ಕಾರ್ಪೋರೇಟರ್‌ ಲತಾ ಕುವರ್‌ ರಾಥೋಡ್‌ ಹಾಗೂ ಇತರರು ಉಪಸ್ಥಿತರಿದ್ದರು.

ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಿ: ಮೆಜೆಸ್ಟಿಕ್‌ ಸುತ್ತಮುತ್ತ ಪ್ರದೇಶಗಳಲ್ಲಿ ನಡೆಯುತ್ತಿರುವ ಟೆಂಡರ್‌ ಶ್ಯೂರ್‌ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುವ ವೇಳೆ, ಧನ್ವಂತರಿ ರಸ್ತೆಯ ಖಾಲಿ ನಿವೇಶನದಲ್ಲಿ ಕಸ ಹಾಕಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ರಸ್ತೆಗೆ ಕೊಳಚೆ ನೀರು ಹರಿಬಿಡುವ ಕಟ್ಟಡ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

“ಉದಯವಾಣಿ’ ಇಂಪ್ಯಾಕ್ಟ್: ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆ ಹಾಗೂ ಬಡಾವಣೆಗಳಿಗೆ ಹರಿದು ತೊಂದರೆ ಅನುಭವಿಸುತ್ತಿರುವ ಬಗ್ಗೆ ಉದಯವಾಣಿ ಮೆಟ್ರೋ ಫೋಕಸ್‌ ಕಾಲಂನಲ್ಲಿ ಮೇ 17ರಂದು “ಹೃದಯ ಭಾಗದೆಲ್ಲೆಡೆ ಹರಡಿದೆ ದುರ್ವಾಸನೆ’ ಶೀರ್ಷಿಕೆಯಡಿಯಲ್ಲಿ ವಿವರವಾದ ವರದಿ ಪ್ರಕಟಿಸುವ ಮೂಲಕ ಪಾಲಿಕೆಯ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಮೇಯರ್‌ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ನಿವಾರಿಸುವಂತೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next