ಮಂಗಳೂರು: ಪೊಲೀಸರು ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ. ತುರ್ತು ರಕ್ಷಣೆ, ಸೇವೆ ಪೊಲೀಸರ ಜವಾಬ್ದಾರಿ ಆಗಿದ್ದು, ಮುಂಜಾಗ್ರತೆ ವಹಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು.
ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ದ.ಕ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪೊಲೀಸರು ಕಳೆದ ಏಳು ತಿಂಗಳುಗಳಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ಪೊಲೀಸರು ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ. ದೈಹಿಕ ವ್ಯಾಯಾಮ, ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಕಾಯ್ದುಕೊಂಡು ಸಮಾಜದ ರಕ್ಷಣೆಗೆ ಮುಂದಾಗಬೇಕು ಎಂದರು.
ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್, ಕೋಸ್ಟ್‌ಗಾರ್ಡ್ ಡಿಐಜಿ ಎಸ್.ಬಿ. ವೆಂಕಟೇಶ್, ಡಿಸಿಪಿ ವಿನಯ ಗಾಂವ್‌ಕರ್, ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ| ಮುರಲೀ ಮೋಹನ್ ಚೂಂತಾರು ಮೊದಲಾದವರು ಹುತಾತ್ಮರಿಗೆ ಗೌರವ ಸೂಚಿಸಿ, ಮೌನ ಪ್ರಾರ್ಥನೆಗೈದು ಅವರ ಆತ್ಮಕ್ಕೆ ಶಾಂತಿ ಕೋರಿದರು.
ದೇಶದಲ್ಲಿ ಈ ವರ್ಷ 264 ಪೊಲೀಸರು ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟಿದ್ದಾರೆ. ಈ ಪೈಕಿ 17 ಮಂದಿ ಕರ್ನಾಟಕದವರು. ಮೃತರ ಎಲ್ಲ ಹೆಸರುಗಳನ್ನು ಲಕ್ಷ್ಮೀಪ್ರಸಾದ್ ವಾಚಿಸಿದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿ ರೋಹನ್ ಜಗದೀಶ್ ಅವರು ಹುತಾತ್ಮ ದಿನದ ಪರೇಡ್ ನೇತೃತ್ವ ವಹಿಸಿದ್ದರು.