ರಾಮದುರ್ಗ: ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ ಫಲವಾಗಿ ತಾಲೂಕಿನಲ್ಲಿ ಕೋವಿಡ್ 19 ಸೊಂಕು ತಡೆಯಲು ಸಾಧ್ಯವಾಗಿದ್ದು, ಇದಕ್ಕೆ ಶ್ರಮಿಸಿದ ಎಲ್ಲ ನೌಕರರಿಗೂ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಸ್ಥಳೀಯ ತಾಲೂಕ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಒಂದುವರೆ ತಿಂಗಳಿಂದ ವಿವಿಧ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಹಾಗೂ ಅಂಗನವಾಡಿ, ಆಶಾ, ಪುರಸಭೆ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಕುಟುಂವನ್ನು ದೂರವಿಟ್ಟು ಜನರ ರಕ್ಷಣೆಗಾಗಿ ಶ್ರಮಿಸಿದ್ದಾರೆ. ಮುಂದೆಯೂ ಹೆಚ್ಚಿನ ಜಾಗೃತಿ ವಹಿಸಿ ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮೀಣ ಮಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರು ತಮ್ಮ ಸಿಬ್ಬಂದಿ ಹಾಗೂ ಶಿಕ್ಷಕ, ಅಂಗನವಾಡಿ, ಆಶಾ ಅವರನ್ನು ಸೇರಿಸಿಕೊಂಡು ಗ್ರಾಮದಲ್ಲಿನ ಪ್ರತಿ ಮನೆಗೆ ಭೇಟಿ ಕೊಟ್ಟು ಕುಟುಂಬದ ಎಲ್ಲರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.
ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಹಾಗೂ ತಹಶೀಲ್ದಾರ ಗಿರೀಶ ಸ್ವಾದಿ ಮಾತನಾಡಿ, ಈಗಾಗಲೇ ಸರಕಾರದ ಆದೇಶನ್ವಯ ಕೊರೊನಾ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯದಿಂದ ಬಂದವರ ತಪಾಸಣೆ ನಡೆಸಿ ಕ್ವಾರಂಟೆ„ನ್ ಮಾಡಲಾಗಿದ್ದು, ಅದರಲ್ಲಿ ಸಾಕಷ್ಟು ಜನರ ಕ್ವಾರಂಟೆ„ನ್ ಅವಧಿ ಮುಗಿದಿದ್ದು ಅವರ ತಪಾಸಣೆ ನಡೆಸಿ ಮನೆಗೆ ಕಳಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ ಇಒ ಮುರಳಿಧರ ದೇಶಪಾಂಡೆ, ಡಿವೈಎಸ್‌ಪಿ ಶಂಕರಗೌಡ ಪಾಟೀಲ ಇತರರು ಇದ್ದರು.