ಮುಂಬೈ: ಭಾಷೆ, ಸಂಸ್ಕೃತಿ, ಸಂಸ್ಕಾರಗಳಿಂದ ಮಕ್ಕಳು ದೂರವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮುಂಬೈಯಂತಹ ಮಹಾನಗರಿಯಲ್ಲಿ ಆಧುನಿಕತೆಯ ಸ್ಪರ್ಶದ ಮಧ್ಯೆಯೂ ಸಂಸ್ಕೃತಿಯ ಅಪ್ಪುಗೆ ಸ್ವಾಗತಾರ್ಹ ಮತ್ತು ಸ್ತುತ್ಯಾರ್ಹವಾಗಿದೆ. ಭವಿಷ್ಯದ ಭಾರತ ನಿರ್ಮಾಣಕ್ಕೆ ಚಿಣ್ಣರ ಬಿಂಬದ ಈ ಕಾರ್ಯ ಮಾದರಿಯಾಗಿದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಚಿಣ್ಣರ ಬಿಂಬ ಮುಂಬೈ ಆಯೋಜಿಸಿದ್ದ 17ನೇ ವಾರ್ಷಿಕ ಮಕ್ಕಳ ಸಾಂಸ್ಕೃತಿಕ ಉತ್ಸವ ಉದ್ಘಾ ಟಿಸಿ ಅವರು ಮಾತನಾಡಿದರು. ಚಿಣ್ಣರ ಬಿಂಬದ ಈ ಕಾರ್ಯಕ್ರಮ ಮಕ್ಕಳಲ್ಲಿ ಆತ್ಮ ವಿಶ್ವಾಸ, ಮೌಲ್ಯ, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ಸೇವೆ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ, ಇಂದು ನಮ್ಮ ಮಕ್ಕಳು ಹಾಳಾಗುತ್ತಾರೆ ಎನ್ನುವ ಅಳುಕನ್ನು ದೂರ ಮಾಡಿ, ಅವರ ಬದುಕನ್ನು ಭವ್ಯವಾಗಿ ರೂಪಿಸುವಲ್ಲಿ ಚಿಣ್ಣರ ಬಿಂಬ ಯಶ ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟರ ಸಂಘ ಮುಂಬೈ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಉದ್ಯಮಿಗಳಾದ ಕರುಣಾಕರ ಎಂ.ಶೆಟ್ಟಿ, ಜೆ.ಪಿ.ಶೆಟ್ಟಿ, ದೇವದಾಸ್ ಸುವರ್ಣ, ಚಿಣ್ಣರ ಬಿಂಬದ ವಿಶ್ವಸ್ಥ ಸದಸ್ಯ ಡಾ| ಸುರೇಂದ್ರ ಕುಮಾರ್ ಹೆಗ್ಡೆ,
ಬಂಟ್ಸ್ ಸಂಘ ಮುಂಬೈ ಮಹಿಳಾ ವಿಭಾಗದ ಅಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಚಿಣ್ಣರ ಬಿಂಬದ ರೂವಾರಿ, ಪ್ರವರ್ತಕ ಪ್ರಕಾಶ್ ಬಿ.ಭಂಡಾರಿ, ಟ್ರಸ್ಟಿ ರೇಣುಕಾ ಪಿ.ಭಂಡಾರಿ, ಚಿಣ್ಣರ ಬಿಂಬದ ಸ್ಥಾಪಕ ಕಾರ್ಯಾಧ್ಯಕ್ಷೆ ಪೂಜಾ ಪಿ.ಭಂಡಾರಿ, ಕಾರ್ಯಾಧ್ಯಕ್ಷೆ ನೈನಾ ಪಿ.ಭಂಡಾರಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ನೆರವೇರಿತು.