ಬೆಂಗಳೂರು: ಸಂಸ್ಕೃತದಿಂದ ಏಕಕಾಲದಲ್ಲಿ ಏಳು ಭಾಷೆಗಳಿಗೆ ಅನುವಾದಗೊಂಡು ಬಿಡುಗಡೆಯಾದ ಶ್ರೇಯಸ್ಸಿಗೆ ಪ್ರೊ.ಕೆ.ಇ.ರಾಧಾಕೃಷ್ಣ ಅವರ “ಗೋಪಿಕೋನ್ಮಾದ’ ಕೃತಿ ಭಾಜನವಾಗಿದೆ. ಈ ಕೃತಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಆಶಯ ವ್ಯಕ್ತಪಡಿಸಿದರು.
ಭಾನುವಾರ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕೃತದಿಂದ ಕನ್ನಡ ಸೇರಿ ದೇಶದ ಏಳು ಭಾಷೆಗಳಿಗೆ ಅನುವಾದಗೊಂಡ “ಗೋಪಿಕೋನ್ಮಾದ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಧಾಕೃಷ್ಣ ಅವರು ರಾಜ್ಯದ ಸೃಜನಶೀಲ ಪ್ರತಿಭೆಯಾಗಿದ್ದು, ಅವರಿಂದ ಹಲವಾರು ಉತ್ತಮವಾದ ಕೃತಿಗಳು ಹೊರಬಂದಿವೆ. ಅವರ “ಕಣ್ಣಕಾಡು’ ಕೃತಿಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬರಲಿ. ಜತೆಗೆ ಅವರ ಗೋಪಿಕೋನ್ಮಾದ ಕೃತಿಯೂ ಸಹ ಸತ್ವಯುವಾಗಿದ್ದು, ಅದಕ್ಕೂ ಪ್ರಶಸ್ತಿಗಳು ಸಿಗಲಿ ಎಂದು ಆಶಿಸಿದರು.
ಗೋಪಿಕೋನ್ಮಾದ ಕೃತಿಯನ್ನು ಸಂಸ್ಕೃತದಿಂದ ಕನ್ನಡ ಮತ್ತು ತುಳು ಭಾಷೆಗೆ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಅನುವಾದ ಮಾಡಿದ್ದಾರೆ. ಉಳಿದಂತೆ ಡಾ.ಪಾರ್ವತಿ ಐತಾಳ ಅವರು ಮಲಯಾಳಂ, ಡಾ.ರಾಜೇಶ್ವರಿ ದಿವಾಕರ ಅವರು ತೆಲುಗು, ಡಾ.ಜ್ಯೋತಿರ್ಮಯಿ ಚೌಧರಿ ಬಂಗಾಳಿಗೆ, ಡಾ.ಎನ್.ಲಕ್ಷ್ಮಿ ಹಿಂದಿಗೆ ಹಾಗೂ ಅರವಿಂದ ಹೆಬ್ಟಾರ ಮರಾಠಿ ಭಾಷೆಗೆ ಅನುವಾದ ಮಾಡಿದ್ದಾರೆ.
ಉಡುಪಿಯ ಯಕ್ಷ ಸಂಗೀತ ಗಾನ ವೈಭವಂ ತಂಡ ಗೋಪಿಕೋನ್ಮಾದವನ್ನು ಯಕ್ಷಗಾನ ರೂಪಕದಲ್ಲಿ ಕಟ್ಟಿಕೊಟ್ಟರು. ಜತೆಗೆ ಗೋಪಿಕೋನ್ಮಾದ ಆನ್‌ಲೈನ್ ಬಹುಭಾಷಾ ಧ್ವನಿ ಸುರುಳಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಅವರ ಪತ್ನಿ ಕನ್ನಿಕಾ ಪರಮೇಶ್ವರ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಯದುಗಿರಿ ಯತಿರಾಜ ಮಠದ ಯತಿರಾಜ ಜೀಯರ್ ಸ್ವಾಮೀಜಿ, ನಿವೃತ್ತ ಪೊಲೀಸ್ ಅಧಿಕಾರಿ ಅಜಯ್‌ಕುಮಾರ್ ಸಿಂಗ್, ಲೇಖಕ ಉದಯ್ ಧರ್ಮಸ್ಥಳ, ಮಾಜಿ ಸಚಿವ ಎ.ಬಿ.ಪಾಟೀಲ ಸೇರಿ ಪ್ರಮುಖರು ಹಾಜರಿದ್ದರು.