Advertisement

ಶ್ರಮಜೀವಿ ದೀಪಾ ಕಾರ್ಯ ಶ್ಲಾಘನೀಯ

01:23 PM Jul 01, 2020 | Suhan S |

ಹುಬ್ಬಳ್ಳಿ: ಎರಡು ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ದೀಪಾ ಚೋಳನ್‌ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ದರ್ಪಣ ಜೈನ್‌ ನಂತರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಇವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆಯ ಜನತೆ ಪರವಾಗಿ ಸನ್ಮಾನಿಸಿ ಮಾತನಾಡಿದರು. ದೀಪಾ ಅವರು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಕೂಡಲೇ ಸಮಸ್ಯೆಗೆ ಸ್ಪಂದಿಸುವ ಅಧಿಕಾರಿಯಾಗಿದ್ದಾರೆ. ಜಿಲ್ಲೆಯಲ್ಲಿನ ನೆರೆ, ಕಟ್ಟಡ ದುರಂತ ಸೇರಿದಂತೆ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಧಾರವಾಡದಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಾಕಷ್ಟು ಪರಿಶ್ರಮ ಹಾಕಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಹರಡುವಿಕೆ ಪ್ರಮಾಣ ಕೂಡ ಕಡಿಮೆಯಾಗಿತ್ತು. ಯಾವುದೇ ಸೂಚನೆಗೆ ನೀಡಿದರೆ ಖುದ್ದಾಗಿ ತಾವೇ ಮುಂದೆ ನಿಂತು ಕೆಲಸ ಮಾಡುತ್ತಿದ್ದರು. ಆಡಳಿತ ನಿರ್ವಹಣೆಯೂ ಉತ್ತಮವಾಗಿತ್ತು. ರಾಜ್ಯಮಟ್ಟದ ಅಧಿಕಾರಿಯಾಗಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಭವಿಷ್ಯದ ಜೀವನದಲ್ಲಿ ಉತ್ತಮ ಸೇವೆ ನೀಡಲು ಇನ್ನಷ್ಟು ಅವಕಾಶಗಳು ದೊರೆಯಲಿ ಎಂದು ಹಾರೈಸಿದರು.

ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್‌ ಮಾತನಾಡಿ, ನನ್ನ ತಂದೆ-ತಾಯಿ, ಪತಿ ಹಾಗೂ ಮಗುವಿನ ನಂತರ ಪ್ರೀತಿ ಮತ್ತು ವಾತ್ಸಲ್ಯ ನೀಡಿದ್ದು ಧಾರವಾಡದ ಜನ. ಎರಡು ವರ್ಷಗಳ ಕಾಲ ಇಲ್ಲಿನ ಸೇವೆ ಒಳ್ಳೆಯ ಅನುಭವ ನೀಡಿದೆ. ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಿದ ಪರಿಣಾಮ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next