Advertisement

ಶಿಲಾನ್ಯಾಸಕ್ಕೆ ವರ್ಷವಾಗುತ್ತಿದ್ದರೂ ಕಾಮಗಾರಿ ಅಪೂರ್ಣ

07:34 PM Sep 27, 2021 | Team Udayavani |

ಬಂಟ್ವಾಳ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 2 ಕೋ.ರೂ. ವೆಚ್ಚದಲ್ಲಿ ಕಲ್ಲಡ್ಕ ಸಮೀಪದ ಬೊಂಡಾಲದಲ್ಲಿ ನಿರ್ಮಾಣವಾಗಬೇಕಿರುವ ಬಾಲಕಿಯರ ಹಾಸ್ಟೆಲ್‌ ಕಟ್ಟಡಕ್ಕೆ ಶಿಲಾನ್ಯಾಸ ನಡೆದು ಒಂದು ವರ್ಷವಾಗುತ್ತಾ ಬಂದರೂ, ಕಾಮಗಾರಿ ಮಾತ್ರ ಇನ್ನೂ ಕೂಡ ಪಿಲ್ಲರ್‌ಗೆ ಹೊಂಡ ತೆಗೆಯುವ ಹಂತದಲ್ಲಿದೆ.

Advertisement

ಹಾಸ್ಟೆಲ್‌ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಬೊಂಡಾಲದಲ್ಲಿ ಮೀಸಲಿಟ್ಟಿದ್ದ ಒಂದು ಎಕ್ರೆ ನಿವೇಶನವು ಗುಡ್ಡ ಪ್ರದೇಶವಾಗಿರುವ ಜತೆಗೆ ಸಮತಟ್ಟು ಮಾಡುವ ಸಂದರ್ಭದಲ್ಲಿ ಬೃಹತ್‌ ಬಂಡೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಪ್ರಸ್ತುತ ಸಮತಟ್ಟಿನ ತೊಡಕು ನಿವಾರಣೆಯಾಗಿರುವುದರಿಂದ ಮುಂದೆ ಕಾಮಗಾರಿ ವೇಗವಾಗಿ ನಡೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಶಿಲಾನ್ಯಾಸ
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಸರಕಾರ ವಿವಿಧ ಇಲಾಖೆಗಳ ಮೂಲಕ ಹಾಸ್ಟೆಲ್‌ ನಿರ್ಮಿಸಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುತ್ತಿದ್ದು, ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ಬಾಲಕಿಯರ ಹಾಸ್ಟೆಲ್‌ ಕಟ್ಟಡಕ್ಕೆ ಅನುದಾನ ಮಂಜೂರಾಗಿತ್ತು. ಕಳೆದ ವರ್ಷ ಅ. 2ರಂದು ಕಾಮಗಾರಿ ಆರಂಭಕ್ಕೆ ಶಿಲಾನ್ಯಾಸ ಕೂಡ ನಡೆದಿತ್ತು.

ಬಿ.ಸಿ.ರೋಡ್‌ಗೆ ಮಂಜೂರುಗೊಂಡು ಪ್ರಸ್ತುತ ಪಾಣೆಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದೇವರಾಜ ಅರಸು ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ಗೆ ಇಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಹಾಸ್ಟೆಲ್‌ ಕಟ್ಟಡಕ್ಕಾಗಿ 3 ಕೋ.ರೂ.ಗಳಲ್ಲಿ ಪ್ರಸ್ತುತ 2 ಕೋ.ರೂ. ಮಂಜೂರಾಗಿದ್ದು, ಒಂದು ಅಂತಸ್ತಿನ(ಜಿ ಪ್ಲಸ್‌ ವನ್‌) ಒಟ್ಟು ಒಟ್ಟು 7,500 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗಲಿದೆ.

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

Advertisement

ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಕಳೆದ ಹಲವು ತಿಂಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಹಾಸ್ಟೆಲ್‌ಗ‌ಳು ಕೂಡ ಕಾರ್ಯಾಚರಿಸುತ್ತಿರಲಿಲ್ಲ. ಆದರೆ ಪ್ರಸ್ತುತ ಹಾಸ್ಟೆಲ್‌ಗ‌ಳು ಕೂಡ ತೆರೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ನೂತನ ಕಟ್ಟಡದ ಶೀಘ್ರ ನಿರ್ಮಾಣ ಅನಿವಾರ್ಯವಾಗಲಿದೆ. ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌ಗೆ ಪಾಣೆಮಂಗಳೂರಿನಲ್ಲಿ ಸ್ವಂತ ಕಟ್ಟಡ ನಿರ್ಮಾಣ ಗೊಂಡಿದ್ದು, ಅದರಲ್ಲಿ ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ ನಡೆಯು ತ್ತಿತ್ತು. ಮುಂದಿನ ದಿನಗಳಲ್ಲಿ ಬೊಂಡಾಲದಲ್ಲಿ ಹೊಸ ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಳಿಕ ಬಾಲಕರ ಅಥವಾ ಬಾಲಕಿಯರ ಹಾಸ್ಟೆಲ್‌ ಬೊಂಡಾಲಕ್ಕೆ ಸ್ಥಳಾಂತರಗೊಳ್ಳಲಿದೆ.

ಶಿವಮೊಗ್ಗ ಸ್ಫೋಟದಿಂದ ವಿಳಂಬ!
ಕಳೆದ ಜನವರಿಯಲ್ಲಿ ಬೊಂಡಾಲದ ಹಾಸ್ಟೆಲ್‌ ಕಟ್ಟಡದ ನಿರ್ಮಾಣಕ್ಕೆ ನಿವೇಶನ ಸಮತಟ್ಟು ಮಾಡುವ ಸಂದರ್ಭದಲ್ಲಿ ಬೃಹತ್‌ ಬಂಡೆಗಳು ಪತ್ತೆಯಾಗಿದ್ದವು. ಅದೇ ಸಮಯದಲ್ಲಿ ಶಿವಮೊಗ್ಗದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ನಡೆದ ಬೃಹತ್‌ ಸ್ಫೋಟದಿಂದ ಹಲವು ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಬಂಡೆಗಳನ್ನು ಸ್ಫೋಟಿಸುವುದನ್ನು ನಿಲ್ಲಿಸಲಾಯಿತು. ಜತೆಗೆ ಬೊಂಡಾಲದ ಪ್ರದೇಶವು ಜನವಸತಿ ಪ್ರದೇಶವಾದ ಕಾರಣ ಕಾಮಗಾರಿ ನಿರ್ವಹಿಸುವವರು ಕಲ್ಲು ಬಂಡೆಗಳನ್ನು ಒಡೆಯಲು ಹಿಂದೇಟು ಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಗಾರಿ ವೇಗದ ಭರವಸೆ
ಹಾಸ್ಟೆಲ್‌ ನಿವೇಶನವನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ಬೃಹತ್‌ ಬಂಡೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿತ್ತು. ಮುಂದೆ ವೇಗವಾಗಿ ಕಾಮಗಾರಿ ನಡೆಸುವ ಭರವಸೆ ಸಿಕ್ಕಿದೆ. ಆಗಾಗ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿದೆ.
-ಬಿಂದಿಯಾ ನಾಯಕ್‌,
ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಂಟ್ವಾಳ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next