Advertisement
ಪಕ್ಕದ ಕ್ರಾಸ್‌ನಲ್ಲಿ ಅವಳಿದ್ದಾಳೆ!ಝಗಮಗಿಸುವ ಕಾರ್ಪೋರೆಟ್ ಆಫೀಸಿನ ಎದುರಿಗಿದ್ದ ಫುಟ್‌ಪಾತ್‌ನ ಮೇಲೆಯೇ ಆ ಭಿಕ್ಷುಕಿ ದಿನವೂ ಮಲಗುತ್ತಿದ್ದಳು. ಗಬ್ಬುನಾಥ ಬೀರುತ್ತಿದ್ದ ಅವಳ ಮೈ ಹಾಗೂ ಬಟ್ಟೆಗಳು, ಮಾರು ದೂರದಿಂದಲೇ ಅವಳ ಇರುವಿಕೆಯನ್ನು ಸಾರುತ್ತಿದ್ದವು. ಅವಳಿದ್ದ ಜಾಗದ ಬಳಿ ಬಂದಾಕ್ಷಣ, ಎಲ್ಲರೂ ಮೂಗು ಮುಚ್ಚಿಕೊಂಡು ತಿರುಗುತ್ತಿದ್ದರು. ಅವಳತ್ತ ತಿರಸ್ಕಾರದಿಂದ ನೋಡಿ- “ಹಾಳು ಮುದುಕಿ, ವಾಕರಿಕೆ ಬರುವಷ್ಟು ಕೊಳಕಾಗಿದ್ದಾಳೆ. ಇವಳು ಸ್ನಾನ ಮಾಡಿ ಎಷ್ಟು ವರ್ಷ ಆಯಿತೋ ಏನೋ…’ ಎಂದು ಗೊಣಗುತ್ತಿದ್ದರು.
Related Articles
Advertisement
ಕಾರಿಳಿದು, ಆಕೆಯತ್ತ ನಡೆದುಬಂದ ಗುರುದತ್ತ- ಏನೋ ಹೇಳಲು ಹೊರಟವನು, ಅಮ್ಮಾ ಅಂದುಬಿಟ್ಟ. ತತ್‌ಕ್ಷಣವೇ ತನ್ನ ಬಾಯಿಂದ ಅಂಥ ದೊಂದು ಮಾತು ಹೊರಬಿದ್ದುದನ್ನು ಕಂಡು ಅಪ್ರತಿಭನಾದ. ನಾನೇಕೆ ಈಗ “ಅಮ್ಮಾ’ ಎಂದು ಕರೆದೆ ಎಂಬ ಪ್ರಶ್ನೆಗೆ ಅವನೊಳಗೆ ಉತ್ತರವೇ ಇರಲಿಲ್ಲ. ಆತ ಮುಂದುವರಿದು ಹೇಳಿದ: “ಅಮ್ಮಾ, ಇವತ್ತು ಮನೇಲಿ ಪಾರ್ಟಿ ಇತ್ತು. ಈಗಷ್ಟೇ ತಯಾರಿಸಿದ ಅಡುಗೆ ಇದು. ನಾಳೆ ರಾತ್ರಿಯವರೆಗೂ ಕೆಡುವುದಿಲ್ಲ. ತಗೊಳ್ಳಿ…’
ಒಂದಿಡೀ ದಿನ ಆಕೆ ಭಿಕ್ಷೆ ಬೇಡುವುದು ತಪ್ಪಲಿ. ರುಚಿರುಚಿಯಾದ ಊಟ ಮಾಡಿದ, ತಿಂಡಿ ತಿಂದ ಖುಷಿ ಆಕೆಯ ಜತೆಯಾಗಲಿ ಎಂಬ ಉದ್ದೇಶದಿಂದಲೇ ಗುರುದತ್ತ ಹೀಗೆ ಮಾತಾಡಿದ್ದ.
ಆಕೆ, ನಿಧಾನವಾಗಿ ಗುರುದತ್ತನ ಕಡೆಗೆ ತಿರುಗಿದಳು. ಅವಳ ಮುಖದಲ್ಲಿ ಸಂತೃಪ್ತಿಯಿತ್ತು. ಆಕೆ ಹೀಗೆಂದಳು: “ಈ ಭಿಕ್ಷುಕಿಗೆ ಊಟ ಕೊಡಬೇಕೂಂತ, ಇಷ್ಟು ಹೊತ್ತಲ್ಲಿ ಬಂದುಬಿಟ್ರಲ್ಲ ಸ್ವಾಮೀ, ನಿಮಗೆ ದೇವರು ಒಳ್ಳೇದು ಮಾಡಲಿ. ಆದ್ರೆ ಸ್ವಾಮೀ, ನನಗೀಗ ಹೊಟ್ಟೆ ತುಂಬಿಬಿಟ್ಟಿದೆ. ಪಕ್ಕದ ಕ್ರಾಸ್‌ನಲ್ಲಿ, ನನಗಿಂತಾ ಚಿಕ್ಕವಯಸ್ಸಿನ ಒಬ್ಬಳು ಭಿಕ್ಷೆಗೆ ಕೂತಿದ್ದಾಳೆ. ಆಕೆಗೆ ಮೂರು ಮಕ್ಕಳಿವೆ. ಈ ಊಟವನ್ನು ಅವಳಿಗೆ ಕೊಟ್ಟುಬಿಡಿ ಸ್ವಾಮಿ. ಹಾಗೆ ಮಾಡಿದ್ರೆ ಆ ಮಕ್ಕಳ ಹಸಿವು ತೀರುತ್ತೆ. ನಾನು, ನಾಳೆ ಬೆಳಗ್ಗೆ ಹೇಗಿದ್ರೂ ಮತ್ತೆ ಭಿಕ್ಷೆಗೆ ಕೂತ್ಕೊತೇನಲ್ಲ… ನಾಳೆಯ ಬದುಕು ಹೇಗೋ ನಡೆಯುತ್ತೆ…
ಪ್ರೀತಿ ಇರಲಿಲ್ಲ; ಹೂವು ಅರಳಲಿಲ್ಲ!ಅವರಿಬ್ಬರೂ ಜೀವದ ಗೆಳೆಯರು. ಮೊದಲು ಒಂದೇ ರೂಂನಲ್ಲಿದ್ದರು. ಅನಂತರ ಉದ್ಯೋಗ ನಿಮಿತ್ತ ಏರಿಯಾ ಬದಲಾಯಿತು. ರೂಮುಗಳೂ ಬದಲಾದವು. ಆದರೆ ಇಬ್ಬರ ಬಳಿಯೂ ಮೊಬೈಲ್ ಇತ್ತಲ್ಲ; ದಿನವೂ ಅವನು ಇವನಿಗೆ, ಇವನು ಅವನಿಗೆ ಫೋನ್ ಮಾಡುತ್ತಿದ್ದರು. ಗೆಳೆತನದ ತಂತು ಹಾಗೇ ಇತ್ತು. ಹೀಗಿದ್ದಾಗಲೇ ಒಂದು ದಿನ ಗೆಳೆಯನಿಗೆ ಫೋನ್ ಮಾಡಬೇಕು ಎಂದುಕೊಂಡ ಇವನು, ಮರುಗಳಿಗೆಯೇ – “ಅವನು ಬೇರೆ ಏನೋ ಕೆಲಸದಲ್ಲಿ ಬ್ಯುಸಿ ಇರ್ತಾನೆ. ಸುಮ್ಮನೆ ಯಾಕೆ ಅವನಿಗೆ ತೊಂದರೆ ಕೊಡಲಿ? ನಾಳೆಯೋ ನಾಡಿಧ್ದೋ ಫೋನ್ ಮಾಡಿದ್ರೆ ಆಯ್ತು. ಇವತ್ತು ಮಾತಾಡಲು ಅಂಥಾ ಮುಖ್ಯ ವಿಷಯವೂ ಇಲ್ಲ’ ಅಂದುಕೊಂಡು ಸುಮ್ಮನಾದ. ಕಾಕತಾಳೀಯ ಎಂಬಂತೆ, ಇದೇ ಸಮಯದಲ್ಲಿ ಆ ತುದಿಯಲ್ಲಿದ್ದ ಅವನೂ ಹಾಗೆಯೇ ಯೋಚಿಸಿದ. ಹೀಗೇ ಕೆಲವು ದಿನ ಕಳೆಯಿತು. ಒಂದು ಕಾಲದಲ್ಲಿ ಒಂದೇ ಜೀವ ಎರಡು ದೇಹ ಎಂಬಂತಿದ್ದವರು, ಒಂದಿಡೀ ತಿಂಗಳು ಮಾತೇ ಆಡದೆ ಕಳೆದುಬಿಟ್ಟಿದ್ದರು. ಇವನು ಹಮ್ಮಿನಿಂದ -“ಅವನಾಗಿಯೇ ಬಂದು ಮಾತಾಡಿಸಲಿ, ಇಲ್ಲದಿದ್ದರೆ ಫೋನ್ ಮಾಡಲಿ’ ಎಂದುಕೊಂಡು ಸುಮ್ಮನಾದ. ಆ ಕಡೆ ಅವನೂ ಹೀಗೆ ಯೋಚಿಸಿ- “ನಾನಾಗಿಯೇ ಹೋಗಿ ಮಾತಾಡಿಸಲು ಅವನೇನು ಮೈಸೂರು ಮಹಾರಾಜನೇ’ ಎಂದು ಗುಟುರು ಹಾಕಿದ. ಪರಿಣಾಮ, ಅದುವರೆಗೂ ಪ್ರೀತಿ ಇದ್ದ ಜಾಗದಲ್ಲಿ ದ್ವೇಷ ಬಂದು ಕುಳಿತಿತು. ಒಬ್ಬ ಇನ್ನೊಬ್ಬನ ಮೇಲೆ ಕತ್ತಿ ಮಸೆದ. ಇಬ್ಬರೂ ಪರಸ್ಪರರ ಹುಳುಕುಗಳನ್ನು ಮೂರನೇಯವರೊಂದಿಗೆ ಹೇಳಿಕೊಂಡರು. ಕಡೆಗೊಂದು ದಿನ ಇಬ್ಬರೂ ಯಾವುದೋ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಮುಖಾಮುಖೀ ಆಗಿಯೇಬಿಟ್ಟರು. ಆಗ ಮತ್ತೂಮ್ಮೆ ಪರಸ್ಪರರು ಕೆಸರು ಎರಚಿಕೊಂಡಿದ್ದೂ ಆಯಿತು. ಈ ಘಟನೆಯ ಬಳಿಕ, ಅವರ ಮಧುರ ಗೆಳೆತನ ಶಾಶ್ವತವಾಗಿ ಸತ್ತೇ ಹೋಯಿತು! ಮನದ ಕಸವನ್ನೂ ತೊಳೆಯೋಣ…
ಆ ಮನೆಯಲ್ಲಿದ್ದವರು ಇಬ್ಬರೇ- ಅಮ್ಮ ಮತ್ತು ಮಗ. ಅಸಹಾಯಕರು, ಅನಾಥರು ಹಾಗೂ ನಿರ್ಗತಿಕರ ಸೇವೆ ಮಾಡಬೇಕು ಎಂಬುದು ಆ ತಾಯಿಯ ಆಸೆಯಾಗಿತ್ತು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಆಕೆ ನೂರಾರು ಮಂದಿಯನ್ನು ಸಾಕುತ್ತಿದ್ದಳು. ಈ ಅಮ್ಮನ ಮನೆಗೆ ಹೋದರೆ ಸಾಕು; ನೆಮ್ಮದಿಯ ಬದುಕಿಗೆ ದಾರಿಯಾಗುತ್ತದೆ ಎಂಬ ನಂಬಿಕೆ ಅಶಕ್ತರಿಗೆಲ್ಲ ಇತ್ತು. ಅವರು, ಎರಡನೇ ಯೋಚನೆಯನ್ನೇ ಮಾಡದೆ ಈ ಅಮ್ಮನ ಮನೆಗೆ ಬಂದುಬಿಡುತ್ತಿದ್ದರು. “ಅಮ್ಮಾ, ಹಸಿವಾಗುತ್ತಿದೆ. ಅಮ್ಮಾ ಆಶ್ರಯ ಬೇಕು’ ಎಂಬ ಆದ್ರ ದನಿ ಕೇಳುತ್ತಿದ್ದಂತೆ, ಈ ಮಮತಾಮಯಿ ದಡಬಡಿಸಿ ಹೊರಬಂದು- “ನಿನ್ನ ನಿರೀಕ್ಷೆಯಲ್ಲಿಯೇ ನಾನಿದ್ದೆ. ಬಾ ಮಗೂ. ಇರುವುದನ್ನೇ ಹಂಚಿಕೊಂಡು ಬದುಕೋಣ’ ಎನ್ನುತ್ತಿದ್ದಳು. ತತ#ಲವಾಗಿ, ಆಶ್ರಯ ಕೋರಿ ಬಂದವರೆಲ್ಲ ಆಕೆಯನ್ನು “ಅಮ್ಮಾ’ ಎಂದೇ ಕರೆದರು. ಯಾವ್ಯಾವುದೋ ಊರಿನಿಂದ ಬಂದವರು, ಯಕಃಶ್ಚಿತ್ ಒಬ್ಬಳು ವಿಧವೆಗೆ ಹೆಚ್ಚು ಮರ್ಯಾದೆ ಕೊಡುವುದನ್ನು ಕಂಡು ಅದೇ ಊರಲ್ಲಿದ್ದ ನೂರಾರು ಮಂದಿಗೆ ಹೊಟ್ಟೆ ಉರಿಯಿತು. ಆ ವಿಧವೆಯನ್ನು ಅವರೆಲ್ಲ ಬಿನ್ನಾಣಗಿತ್ತಿ ಎಂದು ಕರೆದರು. ಮಾಟಗಾತಿ ಎಂದೂ ಜರಿದರು. ಇಂಥ ಮಾತುಗಳಿಗೆಲ್ಲ ಆ ಮಮತೆಯ ತಾಯಿ ಲಕ್ಷ್ಯ ಕೊಡಲಿಲ್ಲ. ಇದರಿಂದ ಕೆರಳಿದ ಊರ ಜನ-ರಾತೋರಾತ್ರಿ, ತಮ್ಮ ಮನೆಯಲ್ಲಿದ್ದ ಕಸವನ್ನೆಲ್ಲ ತಂದು ವಿಧವೆಯ ಮನೆಯ ಮುಂದೆ ಸುರಿದು ಹೋಗಿಬಿಟ್ಟರು. ಆ ವಿಧವೆಗೆ ಬಗೆಬಗೆಯಲ್ಲಿ ಕಿರುಕುಳ ಕೊಡುವುದು, ಆಕೆಯ ಮನಃಶಾಂತಿಯನ್ನು ಹಾಳು ಮಾಡುವುದು ಊರ ಜನರ ಉದ್ದೇಶವಾಗಿತ್ತು. ಉಹುಂ, ಆ ತಾಯಿ ಸಹನೆ ಕಳೆದುಕೊಳ್ಳಲಿಲ್ಲ. ನನ್ನ ಮನೆಯ ಎದುರು ಕಸ ಹಾಕಿದವರು ಯಾರು? ಎಂದು ಯಾರಿಗೂ ಪ್ರಶ್ನೆ ಕೇಳಲಿಲ್ಲ. ಬದಲಿಗೆ, ತುಂಬ ಸಹನೆಯಿಂದ ಎಲ್ಲ ಕಸವನ್ನೂ ಎತ್ತಿ ಹಾಕಿದರು. ಆಗ, ಊರಲ್ಲಿದ್ದ ಕೆಲವು ಪುಂಡರು ಹಠಕ್ಕೆ ಬಿದ್ದವರಂತೆ, ದಿನವೂ ರಾತ್ರಿ ಕಸ ತಂದು ಸುರಿಯತೊಡಗಿದರು. ಈ ಅಮ್ಮ, ಆಗಲೂ ಸಹನೆ ಕಳೆದುಕೊಳ್ಳಲಿಲ್ಲ. ಮನೆಯ ಎದುರು ರಾಶಿ ಬಿದ್ದಿರುತ್ತಿದ್ದ ಕಸವನ್ನು ಎತ್ತಿ ಹಾಕುವುದು ಆಕೆಯ ನಿತ್ಯದ ಕೆಲಸವೇ ಆಗಿಹೋಯ್ತು. ಕಡೆಗೆ, ಪುಂಡರೆಲ್ಲ ಸೇರಿಕೊಂಡು ಇನ್ನೊಂದು ಪ್ಲಾನ್ ಮಾಡಿದರು. ಕಸದ ಬದಲಿಗೆ ಸತ್ತುಹೋದ ಪ್ರಾಣಿಗಳ ಕಳೇಬರವನ್ನು ತಂದು ಆ ವಿಧವೆಯ ಮನೆಯ ಎದುರು ಹಾಕತೊಡಗಿದರು. ಉಹುಂ, ಆಗ ಕೂಡ ಆ ಹೆಂಗಸು ತಾಳ್ಮೆ ಕಳೆದುಕೊಳ್ಳಲಿಲ್ಲ. ಕಳೇಬರದಿಂದ ಹೊರಬಂದ ಗಬ್ಬುನಾತಕ್ಕೆ ಹೆದರಿ ಓಡಿಹೋಗಲಿಲ್ಲ. ಬದಲಾಗಿ, ಮೂಗಿಗೆ ಕರವಸ್ತ್ರ ಕಟ್ಟಿಕೊಂಡು, ಕಸವನ್ನು ಎತ್ತಿ ಹಾಕಿದಷ್ಟೇ ಶ್ರದ್ಧೆಯಿಂದ ಪ್ರಾಣಿಗಳ ಕಳೇಬರವನ್ನೂ ಎತ್ತಿಹಾಕಲು ಆರಂಭಿಸಿದಳು. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆಕೆಯ ಮಗ, ಅದೊಂದು ದಿನ ಕೇಳಿದ: “ಅಮ್ಮಾ, ಈ ದುಷ್ಟ ಜನರ ಕಿರಿಕಿರಿಯನ್ನು ಇನ್ನೂ ಎಷ್ಟು ದಿನ ಸಹಿಸಿಕೊಳ್ತೀಯ?’ “ನಮ್ಮ ಮನೆಯ ಮುಂದೆ ಬಂದು ಬೀಳ್ತಾ ಇರೋದು ಬರೀ ಕಸವಲ್ಲ. ಅದು ಮನುಷ್ಯರ ಮನಸ್ಸಿನಲ್ಲಿ ತುಂಬಿರುವ ಕೊಳೆ. ಇವತ್ತಲ್ಲ ನಾಳೆ ಮನಸ್ಸಿನ ಕೊಳೆಯೆಲ್ಲ ನಾಶವಾಗಿ ಜನ ಪರಿಶುದ್ಧರಾಗುವ ಸಮಯ ಬಂದೇ ಬರುತ್ತೆ ಮಗೂ. ಅಂಥದೊಂದು ದಿನಕ್ಕಾಗಿ ಕಾಯುತ್ತಾ ಇದ್ದೇನೆ’ ಅಂದಳು ಆ ಮಮತಾಮಯಿ. – ಎ.ಆರ್.ಮಣಿಕಾಂತ್