ಕಲಬುರಗಿ: 1970ರ ದಶಕದಲ್ಲಿ ನಗರದಲ್ಲಿ ಶೂನ್ಯಸ್ಥಿತಿಯಲ್ಲಿದ್ದ ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರೋತ್ಸಾಹದ ಸಿಂಚನ ಮಾಡಿ, ಇಲ್ಲಿ ರಂಗ ಮಾಧ್ಯಮ ಹುಟ್ಟು ಹಾಕಿದ ಕೀರ್ತಿ ಖ್ಯಾತ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ| ಸ್ವಾಮಿರಾವ್ ಕುಲಕರ್ಣಿ ಹೇಳಿದರು.
ನಗರದ ಸಿದ್ಧಲಿಂಗೇಶ್ವರ ಬುಕ್‌ಮಾಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ದಿವಂಗತ ಗಿರಡ್ಡಿ ಗೋವಿಂದರಾಜ ಅವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದ ಅವರು, ಗುಲ್ಬರ್ಗ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯ,ಸಂಗೀತ, ನಾಟಕ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಡಾ|
ಗಿರಡ್ಡಿ ಸ್ಥಳೀಯವಾಗಿ ಅನೇಕ ಪ್ರತಿಭೆಗಳನ್ನು ಬೆಳೆಸಿದ್ದರಿಂದ ಇಂದಿಗೂ ರಂಗಮಾಧ್ಯಮ ಕ್ರಿಯಾಶೀಲವಾಗಿದೆ ಎಂದರು.
ಲೇಖಕ ಡಾ| ಶ್ರೀಶೈಲ ನಾಗರಾಳ ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಗೆ ವಿಶಿಷ್ಟ ಗೌರವ ತಂದುಕೊಟ್ಟವರಲ್ಲಿ ಗಿರಡ್ಡಿ ಅವರ ಪಾತ್ರ ಪ್ರಮುಖವಾಗಿದೆ. ಕಲಬುರಗಿಯ ಸಾಂಸ್ಕೃತಿಕ ಲೋಕದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ ಅವರ ಅಕಾಲಿಕ ನಿಧನದಿಂದ ಸಾಹಿತ್ಯಕ ಲೋಕಕ್ಕೆ ನಷ್ಟವುಂಟಾಗಿದೆ ಎಂದರು.
ಹಿರಿಯ ಸಾಹಿತಿ ಪ.ಮಾನು ಸಗರ, ಸಿದ್ಧಲಿಂಗೇಶ್ವರ ಬುಕ್‌ಡಿಪೋ ನಿರ್ಮಾಪಕ ಬಸವರಾಜ ಕೊನೇಕ, ಸಾಹಿತಿ ಸುಬ್ರಾವ ಕುಲಕರ್ಣಿ ಪ್ರೊ| ಕಲ್ಯಾಣರಾವ ಪಾಟೀಲ, ಡಾ| ಸೂರ್ಯಕಾಂತ ಸುಜ್ಯಾತ, ವಿಶ್ರಾಂತ ಕುಲಸಚಿವ ಕಾಶೀನಾಥ ಪೂಜಾರಿ, ಡಾ| ಚಿ.ಸಿ.ನಿಂಗಣ್ಣ, ಸಿ.ಎಸ್.ಮಾಲಿಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಅವರು ಗಿರಡ್ಡಿ ಗೋವಿಂದರಾಜರೊಂದಿಗೆ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ಪ್ರೊ| ಶಿವರಾಜ ಪಾಟೀಲ ನಿರೂಪಿಸಿದರು