Advertisement

ಮಹಿಳೆಗೆ ಇನ್ನೂ ಸಿಕ್ಕಿಲ್ಲ ಸ್ವಾತಂತ್ರ್ಯ

05:31 AM Feb 09, 2019 | |

ಹರಿಹರ: ದೇಶಕ್ಕೆ 1947ರಲ್ಲಿಯೇ ಸ್ವಾತಂತ್ರ್ಯ ಸಿಕ್ಕಿದ್ದರೂ ಮಹಿಳೆಯರಿಗೆ ಮಾತ್ರ ದೇಶದೊಳಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಶಿಕ್ಷಣ ತಜ್ಞೆ, ನಾಡೋಜ ಪ್ರೊ| ಕಮಲಾ ಹಂಪನಾ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಯಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ವಾಲ್ಮೀಕಿ ಮಹಿಳಾ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಧುನಿಕ ಜಗತ್ತಿನಲ್ಲೂ ಮಹಿಳೆಯರಿಗೆ ಪುರುಷನಷ್ಟು ಸ್ವಾತಂತ್ರ್ಯ ಸಿಕ್ಕಿಲ್ಲ. ಅದರಲ್ಲೂ ಹಿಂದುಳಿದ ಸಮಾಜಗಳ ಮಹಿಳೆಯರು ಸ್ವಾವಲಂಬಿಯಾಗಿ ಬೆಳೆಯಲು ಪೂರಕ ವಾತಾವರಣವಿಲ್ಲ ಎಂದರು.

ರಾಮಾಯಣದಲ್ಲಿ ಸೀತೆ, ದ್ವಾಪರಯುಗದಲ್ಲಿ ದ್ರೌಪದಿಯರ ಸ್ಥಿತಿ ಉತ್ತಮವಾಗಿರಲಿಲ್ಲ. ಕಲಿಯುಗದ ಮಹಿಳೆಯೂ ಸೀತೆ, ದ್ರೌಪದಿಯ ಸ್ಥಿತಿಯಲ್ಲೇ ಇದ್ದಾರೆ. ಪುರುಷರಂತೆ ಮಹಿಳೆಯರಿಗೂ ಶಿಕ್ಷಣ, ಉದ್ಯೋಗ, ಉದ್ಯಮ ಆಯ್ಕೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರಬೇಕು. ಆಗ ಮಾತ್ರ ಸಮಾಜ ಸುಧಾರಣೆ, ದೇಶದ ಅಭಿವೃದ್ಧಿ ಸಾಧ್ಯ ಎಂದರು.

ವಾಲ್ಮೀಕಿ ನಾಯಕ ಸಮಾಜದ ಇತಿಹಾಸದ ಪುಟಗಳು ಪ್ರಜ್ವಲವಾಗಿವೆ. ಆ ಇತಿಹಾಸವನ್ನು ಅರಿತು ನಾವು ಮೈಚಳಿ ಬಿಟ್ಟು ಅಭಿವೃದ್ಧಿಯನ್ನು ಸಾಧಿಸಬೇಕಿದೆ. ಅಭಿವೃದ್ಧಿ ಸಾಧಿಸಿರುವ ಸಮಾಜ ಬಾಂಧವರು ದುರ್ಬಲರ ಅಭಿವೃದ್ಧಿಗೆ ಸಹಾಯ ಹಸ್ತ ಚಾಚಬೇಕೆಂದರು.

ಜೈ ವಾಲ್ಮೀಕಿ ಎನ್ನಿ: ಕೆಲವು ಸಮಾಜದವರು ಪರಸ್ಪರ ಭೇಟಿಯಾದಾಗ ಹರಿ ಓಂ, ಅಸ್ಸಲಾಮ್‌ ವಾಲೈಕುಂ ಎನ್ನುವಂತೆ ವಾಲ್ಮೀಕಿ ನಾಯಕ ಸಮಾಜದವರು ಜೈ ವಾಲ್ಮೀಕಿ ಎನ್ನಬೇಕು, ಅಳುಕಬಾರದು ಎಂದು ಪ್ರೊ| ಕಮಲಾ ಹೇಳಿದಾಗ ಸಭಿಕರು ಜೈ ವಾಲ್ಮೀಕಿ ಎಂದು ಘೋಷಣೆ ಹಾಕಿದರು.

Advertisement

ಪ್ರಸನ್ನಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎ.ಎಲ್‌. ಪುಷ್ಪಾ ಲಕ್ಷ್ಮಣಸ್ವಾಮಿ, ಶಾಂತಲಾ ಕೆ.ಎನ್‌.ರಾಜಣ್ಣ, ಡಾ| ಕೊತ್ತಲಮ್ಮ, ಟಿ.ಎಲ್‌. ನಾಗಶ್ರೀ ನಾಯಕ್‌, ಬೆಂಗಳೂರಿನ ಮಾಜಿ ಉಪ ಮೇಯರ್‌ ಇಂದಿರಾ ಆರ್‌.ಮೋಹನ್‌ ಕುಮಾರ್‌, ಕಮಲಾ ಮರಿಸ್ವಾಮಿ, ಟಿ.ವಿ.ತಾರಾ, ರಾಜೇಶ್ವರಿ ಗಿರೀಶ್‌, ತ್ರಿವೇಣಮ್ಮ, ಡಾ| ಅನಸೂಯ ಕೆಂಪನಹಳ್ಳಿ, ಶಿವಮ್ಮ ಕೃಷ್ಣ, ಧರ್ಮದರ್ಶಿಗಳಾದ ಟಿ.ಓಬಳಪ್ಪ, ಕೆ.ಬಿ.ಮಂಜಣ್ಣ, ಭರತ್‌, ಜಿಗಳಿ ಪ್ರಕಾಶ್‌ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಮಹಿಳಾ ಸಾಧಕಿಯರನ್ನು ಸತ್ಕರಿಸಲಾಯಿತು.

ಮನೆ ಬಾಡಿಗೆ ಭಾರವಾಗಿದೆ; ಸಾಲು ಮರದ ತಿಮ್ಮಕ್ಕ
ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ನನಗೆ ಪ್ರಶಸ್ತಿ-ಪುರಸ್ಕಾರಗಳಿಗೇನೂ ಕೊರತೆಯಿಲ್ಲ. ಆದರೆ ಸ್ವಂತ ಮನೆಯಿಲ್ಲ. ಹಲವು ವರ್ಷಗಳಿಂದ ನನಗೊಂದು ಸೂರು ಕೇಳುತ್ತಿದ್ದರೂ ಯಾವುದೇ ಅಧಿಕಾರಿ, ಜನಪ್ರತಿನಿಧಿ, ಸರ್ಕಾರಗಳಾಗಲಿ ಸ್ಪಂದಿಸಿಲ್ಲ. ಸಂಘ-ಸಂಸ್ಥೆಗಳು ಆಗಾಗ್ಗೆ ಸತ್ಕರಿಸಿ ನೀಡುವ 2-3 ಸಾವಿರ ಹಣದಲ್ಲೇ ಜೀವನ ನಡೆಸುತ್ತಿದ್ದೇನೆ ಎಂದರು. ಬಾಲ್ಯದಲ್ಲೆ ನನಗೆ ವಿವಾಹವಾಗಿತ್ತು, ಒಮ್ಮೆ ಹುಲಿಕಲ್ಲಿಗೆ ಹೋಗಿದ್ದಾಗ ಗಿಡ ಬೆಳೆಸುವ ಸಂಕಲ್ಪ ಮಾಡಿಕೊಂಡು ಕೇವಲ ಹತ್ತು ಸಸಿಗಳಿಂದ ಪ್ರಾರಂಭಿಸಿದೆ. ಅದು ದೊಡ್ಡ ದೊಡ್ಡ ವನಗಳ ನಿರ್ಮಿಸಲು ಕಾರಣವಾಯಿತು. ನನಗೆ ಮಕ್ಕಳಿಲ್ಲ, ದತ್ತು ಮಗ ನನ್ನ ನೋಡಿಕೊಳ್ಳುತ್ತಾನೆ. ಆದರೂ ಮನೆ ಬಾಡಿಗೆ ಭಾರವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next