Advertisement

Hubli ಗಲಭೆ ಆರೋಪಿಗಳ ಮೇಲಿನ ಕೇಸ್ ಹಿಂಪಡೆದಿರುವುದು ದೊಡ್ಡ ದುರಂತ: ಶೆಟ್ಟರ್ ಕಿಡಿ

06:52 PM Oct 12, 2024 | Team Udayavani |

ಬೆಳಗಾವಿ : ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿಗೆ ಸಂಬಂಧಪಟ್ಟಂತೆ ಸರಕಾರ ಆರೋಪಿಗಳ ಮೇಲಿನ ಪ್ರಕರಣ ಹಿಂದಕ್ಕೆ ಪಡೆದಿರುವುದು ಬಹು ದೊಡ್ಡ ದುರಂತ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಶನಿವಾರ(ಅ18) ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ”ಅಲ್ಪಸಂಖ್ಯಾಕರ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಸರಕಾರ ಈ ರೀತಿ ಕಾನೂನು ಬಾಹಿರವಾಗಿ ಸಚಿವ ಸಂಪುಟದ ಸಂವಿಧಾನ ಹಕ್ಕನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಸರಕಾರದ ಮಟ್ಟದಲ್ಲಿ ನಿರ್ಣಯ ಕೈಗೊಂಡು ಕೇಸ್ ಗಳನ್ನು ಹಿಂದಕ್ಕೆ ಪಡೆಯುವಂತಹ ಪ್ರಕರಣ ಇದಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದರು.

”ಈ ಘಟನೆಗೆ ಸಂಬಂಧಪಟ್ಟಂತೆ ಬಹಳ ಗಂಭೀರವಾದ ಪ್ರಕರಣಗಳು ದಾಖಲಾಗಿವೆ. ಹೀಗಿರುವಾಗ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಕೈಗೊಂಡು ಆರೋಪಿಗಳ ಮೇಲಿನ ಪ್ರಕರಣ ಕೈಬಿಡಲು ಬರುವದೇ ಇಲ್ಲ.ಸಚಿವ ಸಂಪುಟ ಸಭೆಯಲ್ಲಿ ಗೃಹ ಇಲಾಖೆ ಮೂಲಕ ಬಂದಿದ್ದ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಇಲಾಖೆ ಏನು ವರದಿ ನೀಡಿದೆ. ಇಲಾಖೆಯ ಹಿರಿಯ ಅದಿಕಾರಿಗಳು ಏನು ವರದಿ ಕೊಟ್ಟಿದ್ದಾರೆ. ಕಾನೂನು ತಜ್ಞರು ಏನು ಸಲಹೆ ನೀಡಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದರು.

”ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಸಾಮಾನ್ಯವಾದದ್ದಲ್ಲ. ಇದು ಪೂರ್ವ ನಿಯೋಜಿತವಾಗಿತ್ತು.ಆಗ ಪೊಲೀಸರು ಸರಿಯಾಗಿ ಕ್ರಮಕೈಗೊಂಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಅನೇಕರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಪ್ರಕರಣವನ್ನೇ ಕೈಬಿಡಲು ನಿರ್ಧಾರ ಮಾಡಿದ್ದು ಬಹಳ ದೊಡ್ಡ ದುರಂತ. ಅಲ್ಪಸಂಖ್ಯಾಕರ ತುಷ್ಟೀಕರಣಕ್ಕಾಗಿ ಸರಕಾರ ಇಂತಹ ಕೆಟ್ಟ ನಿರ್ಧಾರ ಮಾಡಿದೆ. ಇದರಿಂದ ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗುತ್ತದೆ” ಎಂದರು.

”ಪೊಲೀಸ್ ಠಾಣೆಗಳ ಮೇಲೆ, ಪೊಲೀಸ್ ಸಿಬಂದಿಗಳ ಮೇಲೆ ದಾಳಿ ಮಾಡುವವರನ್ನು ಆರೋಪಗಳಿಂದ ಬಿಡುಗಡೆ ಮಾಡಿದರೆ ಅವರಿಗೆ ಇನ್ನಷ್ಟು ಧೈರ್ಯ ಬರುತ್ತದೆ. ಮತ್ತೆ ಹೆಚ್ಚಿನ ಅಪರಾಧ ಪ್ರಕರಣಗಳನ್ನು ಮಾಡಲು ಪ್ರೇರೇಪಣೆ ನೀಡಿದಂತಾಗುತ್ತದೆ. ಸರಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ” ಎಂದರು.

Advertisement

ಮಹದಾಯಿ; ಪ್ರಯತ್ನ ನಿರಂತರ
”ಮಹದಾಯಿ ವಿಚಾರದಲ್ಲಿ ನಾವು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರಾದ ಭೂಪೇಂದ್ರ ಯಾದವಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ನಡೆದಿದೆ” ಎಂದರು.

”ಒಂದು ಕಡೆ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು ಅವಕಾಶ ನೀಡಲಾಗುತ್ತದೆ. ಇನ್ನೊಂದು ಕಡೆ ಮಹದಾಯಿ ವಿಚಾರಕ್ಕೆ ತಡೆ ನೀಡುವದು ಸರಿಯಲ್ಲ. ಮಹದಾಯಿ ವಿಷಯದಲ್ಲಿ ಕರ್ನಾಟಕ ಹಿತಾಸಕ್ತಿ ಕಾಪಾಡುತ್ತದೆ ಎಂಬುದನ್ನು ಸಚಿವರಿಗೆ ತಿಳಿಸಿದ್ದೇವೆ. ಇದರಲ್ಲಿ ನಾವು ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದೇವೆ” ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next