ಒಮ್ಮೆ ನಾಯಿ ಮತ್ತು ಕತ್ತೆಯ ನಡುವೆ ಓಟದ ಪಂದ್ಯವೇರ್ಪಟ್ಟಿತು. ವೈಯಕ್ತಿಕ ಜಿದ್ದಾಜಿದ್ದಿ ಇದಕ್ಕೆ ಕಾರಣವಾಗಿತ್ತು. ಕಾಡಿನ ನಿವಾಸಿಗಳೆಲ್ಲರೂ ಕತ್ತೆ ಮತ್ತು ನಾಯಿಯ ಓಟದ ಪಂದ್ಯದ ಬಗ್ಗೆ ಕೇಳಿ ನಕ್ಕವು. ನಾಯಿ ಮತ್ತು ಭಾರ ಹೊರುವ ಕತ್ತೆಯ ನಡುವೆ ಅದೆಂಥಾ ಪಂದ್ಯ ಎಂದು ಅವು ಕತ್ತೆಯನ್ನು ಹೀಯಾಳಿಸಿದವು. ಪಂದ್ಯ ನಡೆಯುವ ಮುನ್ನ ಕತ್ತೆ ನಾಯಿಗೆ ಒಂದು ಶರತ್ತನ್ನು ವಿಧಿಸಿತು. ಪಂದ್ಯ ನಡೆಯುವ ಮಾರ್ಗ ಕಾಡಿನಿಂದ ಶುರುವಾಗಿ ನಗರದ ರಸ್ತೆಗಳಲ್ಲಿ ಹಾದು ಹೋಗಿ, ಮತ್ತೆ ವಾಪಸ್ಸು ಕಾಡಿನಲ್ಲೇ ಕೊನೆಯಾಗಬೇಕು ಎಂಬುದೇ ಆ ಶರತ್ತು. ನಾಯಿಯು “ಪಂದ್ಯ ಎಲ್ಲಿ ನಡೆದರೇನು. ನೀನು ಸೋಲೋದು ಖಚಿತ’ ಎಂದು ಮನಸ್ಸಿನಲ್ಲೇ ನಗುತ್ತಾ ಕತ್ತೆಯ ಶರತ್ತಿಗೆ ಒಪ್ಪಿಕೊಂಡಿತು.
ಓಟದ ದಿನ ಬಂದೇ ಬಿಟ್ಟಿತು. ಕಾಡಿನ ನಿವಾಸಿಗಳು ಫಲಿತಾಂಶವನ್ನು ತಿಳಿಯಲು ಕಾತರವಾಗಿದ್ದವು. ಓಟ ಶುರುವಾಯಿತು. ಎಲ್ಲರೂ ಊಹಿಸಿದಂತೆಯೇ ನಾಯಿ ಕ್ಷಣ ಮಾತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಅಷ್ಟು ಸಾಲದೆಂಬಂತೆ ಕೆಲ ಕ್ಷಣಗಳಲ್ಲೇ ಪಂದ್ಯವನ್ನು ಗೆದ್ದೇ ತೀರುತ್ತೇನೆ ಎಂಬ ಹಠದಲ್ಲಿ ಓಡತೊಡಗಿತು. ಕತ್ತೆ ಮಾತ್ರ ಯಾವುದೇ ಉದ್ವೇಗವಿಲ್ಲದೆ ತನ್ನ ಎಂದಿನ ಶೈಲಿಯಲ್ಲೇ ನಡೆದುಕೊಂಡು ಬರತೊಡಗಿತು.
ಇತ್ತ ಕಾಡಿನ ಪ್ರಾಣಿಗಳೆಲ್ಲರೂ ಫಿನಿಶಿಂಗ್ ಗೆರೆಯ ಬಳಿ ನಿಂತು ಕಾಯತೊಡಗಿದರು. ಪಂದ್ಯ ಶುರುವಾಗಿ ತುಂಬಾ ಹೊತ್ತಾದರೂ ನಾಯಿಯ ಸುಳಿವೇ ಇರಲಿಲ್ಲ. ಯಾಕೋ ಪಂದ್ಯದಲ್ಲಿ ಯಾರೂ ಊಹಿಸದೇ ಇದ್ದ ಫಲಿತಾಂಶ ಬರುತ್ತದೆ ಎಂದೆನಿಸತೊಡಗಿತ್ತು. ಅವರ ಎಣಿಕೆ ನಿಜವಾಗುವಂತೆ ಕತ್ತೆ ನಿಧಾನವಾಗಿ ಗೆಲುವಿನ ಗೆರೆಯನ್ನು ತಲುಪಿತು. ಎಲ್ಲರೂ ಕತ್ತೆಯನ್ನು ಸುತ್ತುವರಿದು ಅಭಿನಂದಿಸತೊಡಗಿದರು.
ಕತ್ತೆಗೆ ಬಹುಮಾನ ನೀಡಿದ್ದಾಯಿತು. ಆಮೇಲೆ ನಾಯಿಗೆ ಏನಾಯ್ತು ಎಂಬ ಪ್ರಸ್ನೆಗೆ ಯಾರಿಗೂ ಉತ್ತರ ತಿಳಿದಿರಲಿಲ್ಲ. ಈ ಕುರಿತು ಕತ್ತೆಯನ್ನು ಕೇಳಿದಾಗ ಕತ್ತೆ “ನಾಯಿ ತುಂಬಾ ವೇಗದಿಂದೇನೋ ಓಡಿತು. ನಗರದ ರಸ್ತೆಯಲ್ಲಿ ಓಡೋವಾಗ ನಗರಪಾಲಿಕೆಯವರು ಹುಚ್ಚು ನಾಯಿಯಿರಬೇಕೆಂದುಕೊಂಡು ಅಟ್ಟಾಡಿಸಿ ಹಿಡಿದುಕೊಂಡು ಹೋದರು.’ ಎಂದಿತು. ಕಾಡಿನ ನಿವಾಸಿಗಳೆಲ್ಲಾ ಕತ್ತೆಯ ಬುದ್ಧಿವಂತಿಕೆಗೆ ತಲೆದೂಗಿದರು.
ಪಾಂಡುರಂಗ ಹುಚ್ಚಪ್ಪ ಜಂತ್ಲಿ