ಪಿರಿಯಾಪಟ್ಟಣ: ಜಮೀನಿಗೆ ಅಳವಡಿಸಿದ್ದ ತಂತಿ ಕಂಬಗಳನ್ನು ಅಕ್ರಮವಾಗಿ ಕೆಲವರು ಜೆಸಿಬಿಯಿಂದ ತೆರವುಗೊಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣಾಧಿಕಾರಿ ತನಿಖೆ ಕೈಗೊಂಡಿದ್ದಾರೆ.
ತಾಲೂಕಿನ ಆವರ್ತಿ ಗ್ರಾಮದ ಯೋಗೇಶ್ ಎಂಬುವರಿಗೆ ಸೇರಿದ ಮರಡಿಯೂರು ಗ್ರಾಮದಲ್ಲಿ ಸರ್ವೇ ನಂ.57ರಲ್ಲಿ 5.38 ಎಕರೆ ಜಮೀನಿಗೆ ಸಿಲ್ವರ್ ಗಿಡ ನೆಟ್ಟು ತಂತಿ ಹಾಗೂ ಕಲ್ಲು ಕಂಬಗಳನ್ನು ಅಳವಡಿಲಾಗಿತ್ತು. ಇದೇ ಜಮೀನಿನ ಪಕ್ಕದಲ್ಲಿ ಸರ್ಕಾರಿ ರಸ್ತೆ ಇದ್ದು, ರಸ್ತೆಯನ್ನು ತಾಲೂಕು ಭೂಮಾಪಕರಾದ ನಾರಾಯಣಸ್ವಾಮಿ ಹಾಗೂ ಕಂದಾಯ ಅಧಿಕಾರಿ ಸಿ.ಮಹೇಶ್‌ರ ಸಮ್ಮಖದಲ್ಲಿ ಕೆಲವು ತಿಂಗಳುಗಳ ಹಿಂದೆ ಸರ್ವೇ ಕಾರ್ಯ ಮಾಡಿ ಹದ್ದು ಬಸ್ತ್ ಮಾಡಿದ್ದರು.
ಯೋಗೇಶ್ ಎಂಬುವರಿಗೆ ಮೌಖೀಕವಾಗಿ ತಂತಿ ಕಂಬ ತೆಗೆಯಿರಿ ಎಂದು ಕಂದಾಯ ಅಧಿಕಾರಿ ತಿಳಿಸಿದ್ದರು. ಅದರಂತೆ ಅಳತೆ ಪ್ರಕಾರ ರಸ್ತೆ ಕಾಮಗಾರಿ ನಡೆಯುವಾಗ ತಾವೇ ತೆಗೆಯುತ್ತೇವೆಂದು ಯೋಗೇಶ್ ತಿಳಿಸಿದ್ದರು. ಇದುವರೆಗೆ ಸಹ ಕಂದಾಯ ಇಲಾಖೆಯಿಂದ ಯಾವುದೇ ಆದೇಶ ಬಾರದ ಕಾರಣ ಯೋಗೇಶ್ ವ್ಯವಸಾಯ ಮಾಡಿಕೊಂಡಿದ್ದರು.
ಅಕ್ರಮವಾಗಿ ನುಗ್ಗಿದರು?: ಆದರೆ, ಮರಿಡಿಯೂರು ಗ್ರಾಮದ ಪ್ರಕಾಶ್ ಅವರ ಮಗ ಸ್ವಾಮಿಕಣ್ಣ(ಜಾರ್ಜ್), ಕರ್ಪುಸ್ವಾಮಿಯರ ಮಗ ಶಿವು, ಚಲುವರಾಜರವರ ಮಗ ಗಣೇಶ್ ಎಂಬುವರು ಕಳೆದ ಮೇ 8ರಂದು ಗ್ರಾಮದಲ್ಲಿ ಯೋಗೇಶ್ ಇಲ್ಲದ ಸಮಯದಲ್ಲಿ ಅವರ ಜಮೀನಿಗೆ ಅಕ್ರಮವಾಗಿ ಮೂರು ಜನ ಪ್ರವೇಶಿಸಿ ಜೆಸಿಬಿಯಿಂದ 250 ತಂತಿ ಕಂಬ ಮತ್ತು ಸಿಲ್ವರ್ ಗಿಡಗಳನ್ನು ನಾಶಮಾಡಿದ್ದಾರೆ. 2 ಲಕ್ಷ ರೂ.ಗಿಂತ ಅಧಿಕ ಮೊತ್ತದ ಆಸ್ತಿಯನ್ನು ನಷ್ಟ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣಾಧಿಕಾರಿ ರಾಮಚಂದ್ರ ನಾಯಕ ತಿಳಿಸಿದ್ದಾರೆ.
“ಮರಡಿಯೂರು ರಸ್ತೆ ಒತ್ತುವರಿ ನಿಜ’
ಮರಡಿಯೂರು ಗ್ರಾಮಕ್ಕೆ ಸೇರಿದ ಸರ್ವೇ ನಂ.57ರಲ್ಲಿ ಸಾರ್ವಜನಿಕರ ರಸ್ತೆ ಎರಡೂ ಕಡೆ ಒತ್ತುವರಿಯಾಗಿದೆ ಎಂದು ಕಂದಾಯ ಅಧಿಕಾರಿ ಸಿ.ಮಹೇಶ್ ಹಾಗು ತಾಲೂಕು ಭೂಮಾಪನ ಅಧಿಕಾರಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
“ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಿಯಮಾನುಸಾರವಾಗಿ ರೈತರನ್ನು ಸಂಪರ್ಕಿಸಿ ರಸ್ತೆ ಬಿಡಿಸುವಷ್ಟರಲ್ಲಿ ಅಧಿಕಾರಿಗಳು ಮಾಡಬೇಕಾದ ರಸ್ತೆ ಜಾಗ ತೆರವು ಕೆಲಸವನ್ನು ಬೇರೆಯವರು ಮಾಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.