ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಎರಡನೇ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಕೆಂಪೇಗೌಡ ಬಸ್ ನಿಲ್ದಾಣ ಸಮೀಪದ ಖಾಸಗಿ ಲಾಡ್ಜ್ ಒಂದರಲ್ಲಿ ನಡೆದಿದೆ.
ಹಾಸನ ಮೂಲದ ರೇಣುಕಾ (31) ಕೊಲೆಯಾದ ಮಹಿಳೆ. ಕೃತ್ಯ ಎಸಗಿ ಪರಾರಿಯಾಗಿರುವ ಶಂಕರ್ (38) ಎಂಬಾತನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.
ಮೃತ ರೇಣುಕಾ, ಕೋಲಾರ ಮೂಲದ ಆರೋಪಿ ಶಂಕರ್‌ನ ಎರಡನೇ ಪತ್ನಿಯಾಗಿದ್ದು, ಇಬ್ಬರೂ ಫೆ.16ರಂದು ಮೆಜೆಸ್ಟಿಕ್ ಸಮೀಪದ ಖಾಸಗಿ ಲಾಡ್ಜ್ ನಲ್ಲಿ ಕೊಠಡಿ ಪಡೆದುಕೊಂಡಿದ್ದರು. ಫೆ.18ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ದಂಪತಿ ಶಾಪಿಂಗ್ ಹೋಗಿ ಬಂದಿದ್ದಾರೆ. ಅದೇ ದಿನ ಸಂಜೆ 5 ಗಂಟೆ ಸುಮಾರಿಗೆ ಕೊಠಡಿಯಿಂದ ಹೊರ ಹೋದ ಶಂಕರ್, ವಾಪಸ್ ಬಂದಿಲ್ಲ. ಈ ಮಧ್ಯೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಲಾಡ್ಜ್ನ ಸಿಬ್ಬಂದಿ ಮೆಟ್ಟಿಲುಗಳನ್ನು ಶುಚಿಗೊಳಿಸುವಾಗ ದಂಪತಿ ತಂಗಿದ್ದ ಕೊಠಡಿಯಿಂದ ಕೆಟ್ಟ ವಾಸನೆ ಬಂದಿದೆ. ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅನುಮಾನಗೊಂಡು ಮತ್ತೂಂದು ಕೀ ಬಳಸಿ ಬಾಗಿಲು ತೆರೆದಾಗ ರೇಣುಕಾ ಕುತ್ತಿಗೆ ಬಳಿ ಕೊಯ್ದ ಗಾಯವಾಗಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸಿಬ್ಬಂದಿ ಕೂಡಲೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಉಪ್ಪಾರಪೇಟೆ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಜೀವಾವಧಿ ಶಿಕ್ಷೆ: ಆರೋಪಿ ಶಂಕರ್, 2008ರಲ್ಲಿ ಮೊದಲ ಪತ್ನಿ ಮಾಲಾ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದ. ಈ ಸಂಬಂಧ ಕಾಮಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 11 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಶಂಕರ್, ಜೈಲಿನಲ್ಲಿ ಸಭ್ಯನಂತೆ ನಡೆದುಕೊಂಡಿದ್ದ. ಹೀಗಾಗಿ ಕೆಲ ದಿನಗಳಿಂದ ಆತನನ್ನು ಸನ್ನಡತೆ ಆಧಾರದ ಮೇಲೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಕೈದಿಗಳ ಕೇರ್ ಟೇಕರ್ (ಕೈದಿಗಳ ಆರೈಕೆ ಮಾಡುವುದು) ಆಗಿ ನೇಮಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದೆ ಆಸ್ಪತ್ರೆ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಪಾರಾರಿಯಾಗಿದ್ದ. ಎಲ್ಲೆಡೆ ಹುಡುಕಾಟ ನಡೆಸಿದ ಪೊಲೀಸರು, ಫೆ.17ರಂದು ವಿವಿಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ರೇಣುಕಾ ಎಂಬ ಮಹಿಳೆಯನ್ನು ಕೊಲೆಗೈದ ಆರೋಪಿ ಶಂಕರ್, ಈ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಎಂದು ತಿಳಿದು ಬಂದಿದ್ದು, ತನಿಖೆ ನಡೆಯುತ್ತಿದೆ.
ಬಿ.ಕೆ.ಸಿಂಗ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ