ಅದು ಚಿಂತೆಯಿಲ್ಲದ ಕಾಲ. ಬಣ್ಣಬಣ್ಣದ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಹೊತ್ತು.ಬೆಳಿಗ್ಗೆ ಸ್ಕೂಲ್‌ಗೆ ಹೋಗೋ ಅಂಥ ಅಮ್ಮ, ಹೋಗೋಲ್ಲ ಅಂತ ನಾನು. ಹಂಗೂ ಹಿಂಗೂ ಹಲ್ಲು ಉಜ್ಜಿ , ಸ್ನಾನ ಮಾಡಿ, ದೇವರ ಬಳಿ ಒಂದಿಷ್ಟು ಬೇಡಿಕೆಗಳನ್ನು ಇಟ್ಟು, ತಿಂಡಿ ತಿಂದು ಹೋಗೋ ಹೊತ್ತಿಗೆ ರೆಡಿ ಇರುತ್ತಿದ್ದವು- ಗಂಟಿನವರೆಗಿನ ನೀಲಿ ಚಡ್ಡಿ, ಚಡ್ಡಿ ಕಿಸೆಯಲ್ಲಿ ಒಂದು ಟವೆಲ್, ಎರಡು ಕಡ್ಡಿ, ಬಿಳಿ ಅಂಗಿ, ಬೆನ್ನ ಹಿಂದೆ ಪುಸ್ತಕದ ಭಾರವನ್ನು ಹೊತ್ತ ಬ್ಯಾಗು. ಚಪ್ಪಲಿ ಹಾಕೋ ಹೊತ್ತಿಗೆ ರಿಕ್ಷಾದಲ್ಲಿ ಹಾರ್ನ್ ಸೌಂಡ್ ಮಾಡ್ತಾ ಇದ್ದ ಅಪ್ಪ , ಸೀಟು ಸಿಗೋಲ್ಲ ಅಂಥ ಓಡಿ ಹೋಗಿ ಕೂತುಕೊಂಡು ಅಮ್ಮನಿಗೆ ಟಾಟಾ ಮಾಡುತ್ತ ಸ್ಕೂಲ್‌ನ ಕಡೆಗೆ ಪ್ರಯಾಣ. ಮನೆಯಿಂದ ರಿಕ್ಷಾ ಹೊರಡೋವಾಗ ಒಬ್ಬನೇ ಇರುತ್ತಿದ್ದೆ. ಆದ್ರೆ ಶಾಲೆಯಲ್ಲಿ ಇಳಿಯುವ ಹೊತ್ತಿಗೆ ಏಳು ಜನರ ಸ್ನೇಹಿತರ ಗುಂಪು ಕೂಡ ಇರುತ್ತಿತ್ತು.
ಬೆಳಗಿನ ಜಾವ ಶಾಲೆಯ ಮೊದಲ ಗಂಟೆ ಪ್ರಾರ್ಥನೆಗಾಗಿ ಆಗುತ್ತಿತ್ತು. ಮೊದಲಿಗೆ ಪ್ರಾರಂಭವಾಗುತ್ತಿದ್ದ ತರಗತಿಯಲ್ಲಿ, ಗಣಿತ ಮೇಷ್ಟ್ರ ಸೂತ್ರಗಳು, ವಿಜ್ಞಾನ ಪೀರಿಯೆಡ್‌ನ ಆ ಸಮೀಕರಣಗಳು, ಇಂಗ್ಲಿಷ್ ಟೀಚರ್‌ನ ಆಲ್ಫಾಬೆಟ್‌ಗಳು , ಕನ್ನಡ ಸರ್‌ನ ಕವಿತೆಗಳು, ಮಧ್ಯಾಹ್ನದ ಹಸಿವು ನೀಗಿಸಲು ಮನೆಯಿಂದ ಅಮ್ಮ ಮಾಡಿಕೊಡುವ ಊಟದ ಬುತ್ತಿಯ ರುಚಿ ಇವತ್ತಿಗೂ ನಾಲಿಗೆಯನ್ನು ಕಾತರಿಸುತ್ತಿದೆ. ಇನ್ನು ಶಾಲೆಯಲ್ಲಿ ನಮಗೆಲ್ಲ ಹೆದರಿಕೆ ಹುಟ್ಟಿಸುತ್ತ ಇದ್ದದ್ದು ನಮ್ಮ ಪಿ.ಟಿ. ಸರ್ ಕೊಡುತ್ತಿದ್ದ ಬೆತ್ತದ ಏಟು. ಆ ನೆನಪುಗಳು ಇನ್ನೂ ಮಾಸಿಲ್ಲ. ಸಂಜೆ ಹೊತ್ತಿಗೆ ಆಟ.
ಆಟದೊಂದಿಗೆ ಮಾಡುತ್ತಿದ್ದ ತರಲೆಗಳು. ಆಗಾಗ ವೈಡ್ ಬಾಲ್‌ಗಾಗಿ ಆಗುತ್ತಿದ್ದ ಸಣ್ಣಪುಟ್ಟ ಜಗಳ. ಆಟದ ಮಧ್ಯೆ ಡ್ರಿಂಕ್ಸ್ ಬ್ರೇಕ್‌ನ ನೆಪದಲ್ಲಿ ಕುಡಿಯುತ್ತಿದ್ದ ನೀರು. ಇಡೀ ಊರು ಸುತ್ತಿ ಮನೆಗೆ ಬಂದು ತಣ್ಣೀರಿನ ಸ್ನಾನ. ನಂತರ ಮೂರು ಗೆರೆ ಕಾಪಿ ಬರೆದು, ಅಬ್ಟಾ! ಅಂತೂ ಸ್ವಲ್ಪ ಹೊತ್ತು ಟಿ. ವಿ. ಮುಂದೆ ಕಣ್ಣು ಹಾಯಿಸುತ್ತಿದ್ದಾಗ, ಅದೇ ಹೊತ್ತಿಗೆ ಅಪ್ಪ ಬರುತ್ತಿದ್ರು. ಅಪ್ಪನ ಕೈಯಲ್ಲಿ ಇರುವ ತೊಟ್ಟೆಯಲ್ಲಿ ತಿಂಡಿ ಇರಬಹುದು ಅಂತ ಮೊದಲು ಅದನ್ನೇ ಕಸಿದುಕೊಳ್ಳುತ್ತ ಇದ್ದೆ.
ಅಷ್ಟು ಹೊತ್ತಿಗೆ ನಿದ್ದೆಯ ಮಂಪರಿನಲ್ಲಿದ್ದ ನನ್ನನ್ನು ಅಮ್ಮ ಸೋಮಾರಿ ಅಂಥ ಎರಡು ಬೈದು ಎಬ್ಬಿಸಿದ್ರು. ಅಯ್ಯೋ! ಇಷ್ಟು ಹೊತ್ತು ನಾನು ಕಂಡದ್ದು ಕನಸಾಗಿತ್ತು. ನಾನು ಬಾಲ್ಯದ ತುಂಟತನದ ಹೆಜ್ಜೆಯನ್ನು ಮೀರಿ ಬಂದಿದ್ದೇನೆ.
ಈಗ ಹದಿಹರೆಯದ ಮಾಯದ ವಯಸ್ಸಿನಲ್ಲಿ ಇದ್ದೇನೆ. ಇಲ್ಲಿ ಎಲ್ಲವೂ ಬದಲಾಗಿದೆ. ಪ್ರೈಮರಿಯ ನೀಲಿ-ಬಿಳಿಯ ಚಡ್ಡಿ ಈಗ ಪ್ಯಾಂಟಿನ ರೂಪ ಪಡೆದಿದೆ.
ಉದ್ದನೆಯ ಪ್ರಾರ್ಥನೆ ಶಾರ್ಟ್ ಆಗಿದೆ.ಬುತ್ತಿಯ ಜಾಗದಲ್ಲಿ ಬಿಸಿ ಊಟದ ಪ್ರವೇಶ.ಚಡ್ಡಿಯ ಕಿಸೆಯಲ್ಲಿದ್ದ ಕಡ್ಡಿಯ ಜಾಗದಲ್ಲಿ ಮೊಬೈಲ್ ಬೆಚ್ಚಗೆಯಾಗಿ ಕೂತಿದೆ. ಪಾಠದ ಅವಧಿ ಶಾಲೆಗೆ ಮಾತ್ರ ಅಷ್ಟೇ ಸೀಮಿತಗೊಂಡಿದೆ.
ಏನೇ ಆಗಲಿ. ಬಾಲ್ಯದ ತುಂಟತನದ ನನ್ನ ಕನಸು ಮತ್ತೂಮ್ಮೆ ನನಸಾಗಬೇಕು ಅಂಥ ಅನ್ನಿಸ್ತಾ ಇದೆ. ಬಾಲ್ಯದ ಗೆಳೆಯರ ಗುಂಪಲ್ಲಿ ಬೆರೆತು ಮತ್ತೂಮ್ಮೆ ಬಾಲ್ಯಕ್ಕೆ ಹಿಂತಿರುಗಿ ಮಗುವಾಗಬೇಕೆನ್ನುವ ಆಸೆ ಸದಾ ಚಿಗುರುತ್ತಾ ಇರುತ್ತದೆ.
ಶ್ರೇಯಸ್ ದ್ವಿತೀಯ ಬಿ.ಸಿ.ಎ.,
ಎಂಜಿಎಂ ಕಾಲೇಜು, ಉಡುಪಿ