Advertisement
ನಿರ್ಭಯಾ ಹಂತಕರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಇಡೀ ದೇಶದ ಜನರೇ ಸ್ವಾಗತಿಸಿದ್ದಾರೆ. ಗಲ್ಲು ಶಿಕ್ಷೆ ಜಾರಿಯಾದ ಕೂಡಲೇ ತಿಹಾರ್ ಜೈಲಿನ ಮುಂದೆ ಜಮಾಯಿಸಿದ್ದ ಸಾವಿರಾರು ಜನರು, ಸಿಹಿ ಹಂಚಿ ಸಂಭ್ರಮಿಸಿದರು. “ಲಾಂಗ್ ಲಿವ್ ನಿರ್ಭಯಾ’, “ಭಾರತ್ ಮಾತಾ ಕೀ ಜೈ’ ಎಂದು ಘೋಷ ವಾಕ್ಯಗಳನ್ನು ಕೂಗಿದರು. ಅತ್ತ, ಟ್ವೀಟರ್ ಲೋಕವೂ ಸುಮ್ಮನೇ ಕೂರಲಿಲ್ಲ. ಜನಸಾಮಾನ್ಯರು ಮಾತ್ರವಲ್ಲದೆ ಬಾಲಿವುಡ್ ಸ್ಟಾರ್ ನಟರು, ರಾಜಕಾರಣಿಗಳು ಎಲ್ಲರೂ ಗಲ್ಲು ಶಿಕ್ಷೆಯ ಬಗ್ಗೆ ಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಆಕಾಶ ನೋಡುತ್ತಾ ಕುಳಿತಿದ್ದ ತಾಯಂದಿರು!ಅತ್ತ, ತಿಹಾರ್ ಜೈಲಿನಲ್ಲಿ ಅಪರಾಧಿಗಳಾದ ವಿನಯ್ ಶರ್ಮಾ, ಪವನ್ ಗುಪ್ತಾ ಅವರಿಗೆ ಗಲ್ಲು ಶಿಕ್ಷೆ ಜಾರಿಯಾಗಿದ್ದರೆ, ಇತ್ತ ದಕ್ಷಿಣ ದೆಹಲಿಯಲ್ಲಿರುವ ರವಿದಾಸ್ ಕ್ಯಾಂಪ್ ಎಂಬ ಕೊಳೆಗೇರಿಯಲ್ಲಿ ಅವರಿಬ್ಬರ ತಾಯಂದಿರು ದಿಗೂಢರಾಗಿ ಕುಳಿತಿದ್ದರು. ವಿನಯ್, ಪವನ್ ಮನೆಗಳು ಅಲ್ಲೇ ಹತ್ತಿರದಲ್ಲಿ ಇರುವುದರಿಂದ ಅವರ ನೆರೆಮನೆಯವರೂ ಕೂಡ ಅವರನ್ನು ಸುತ್ತುವರಿದಿದ್ದರು. ಹಾಗೆ ಸುತ್ತುವರಿದವರ ಕಣ್ಣಲ್ಲಿ ನೀರು ಹನಿಗಳು ಜಾರಿದರೂ, ಈ ಇಬ್ಬರು ತಾಯಂದಿರು ಮಾತ್ರ ಆಕಾಶದತ್ತ ಮುಖ ಮಾಡಿ ಶೂನ್ಯವನ್ನು ದೃಷ್ಟಿಸುತ್ತಿದ್ದುದು ಅವರ ಅಸಹಾಯಕತೆಯನ್ನು ಬಿಂಬಿಸುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಅವರ ಮನೆಗಳಿಗೆ ಶವಗಳನ್ನು ತಂದು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಆಗ, ಆ ತಾಯಂದಿರ ಸಹನೆಯ ಕಟ್ಟೆ ಒಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ, ಈ ಕೊಳೆಗೇರಿಗೆ ಬಿಗಿಭದ್ರತೆ ಒದಗಿಸಲಾಗಿತ್ತು. ಅಲ್ಲದೆ, ಈ ಕೊಳೆಗೇರಿಯ ಮಗ್ಗುಲಲ್ಲೇ ಸಾಗುವ ಮುಖ್ಯರಸ್ತೆಯೊಂದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಮಧ್ಯರಾತ್ರಿಯ ಹೈ ಡ್ರಾಮಾ
ಅಪರಾಧಿ ಪವನ್ ಕುಮಾರ್ ಗುಪ್ತಾ ಪರ ವಕೀಲರಾದ ಎ.ಪಿ. ಸಿಂಗ್ ಅವರು, ನಾಲ್ವರೂ ಅಪರಾಧಿಗಳನ್ನು ನೇಣು ಕುಣಿಕೆಯಿಂದ ಶತಾಯಗತಾಯ ತಪ್ಪಿಸಲು ನಡೆಸಿದ ಪ್ರಯತ್ನ ಗುರುವಾರ ಮಧ್ಯರಾತ್ರಿಯ ಹೈ ಡ್ರಾಮಾಕ್ಕೆ ಕಾರಣವಾಯಿತು. ಅಪರಾಧಿಗಳ ಗಲ್ಲು ಶಿಕ್ಷೆ ತಪ್ಪಿಸಲು ಸಲ್ಲಿಸಲಾಗಿದ್ದ ಅರ್ಜಿಯು ಗುರುವಾರ ಸಂಜೆಯ ಹೊತ್ತಿಗೆ ದೆಹಲಿಯ ಸೆಷನ್ಸ್ ಕೋರ್ಟ್‌ನಲ್ಲಿ ತಿರಸ್ಕೃತಗೊಂಡಿತು. ವಕೀಲರಾದ ಎ.ಪಿ. ಸಿಂಗ್ ಆ ಆದೇಶವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಅದರ ಪರಿಣಾಮ, ರಾತ್ರಿ 9 ಗಂಟೆಗೆ ದೆಹಲಿ ಹೈಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು. ರಾತ್ರಿ 12.09 ನಿಮಿಷದ ಹೊತ್ತಿಗೆ, ದೆಹಲಿ ಹೈಕೋರ್ಟ್ ಅಪರಾಧಿಗಳ ಅರ್ಜಿಗಳನ್ನು ತಿರಸ್ಕರಿಸಿತು. ಆದರೆ, ಎ.ಪಿ. ಸಿಂಗ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಮಧ್ಯರಾತ್ರಿಯಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿದರು. ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿವಾಸಕ್ಕೆ ಭೇಟಿ ನೀಡಿದ ಅವರು, ಅಲ್ಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ವಿಚಾರಣೆಗೆ ಮನವಿ ಸಲ್ಲಿಸಿದರು. ಹಾಗಾಗಿ, ಮಧ್ಯರಾತ್ರಿ 2.30ರ ಹೊತ್ತಿಗೆ ಈ ವಿಚಾರಣೆ ನಡೆಯಿತು. ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರ ಪರವಾಗಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 45 ನಿಮಿಷಗಳವರೆಗೆ ನಡೆದ ವಾದ-ವಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು, ಮೇಲ್ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿದರು. ಅಲ್ಲಿಗೆ, ಅಪರಾಧಿಗಳ ಗಲ್ಲು ಶಿಕ್ಷೆ ಕಾಯಂ ಆಯಿತು. ಅಂಗಾಂಗ ದಾನ ಮಾಡಿದ ಮುಕೇಶ್
ಅಪರಾಧಿಗಳಲ್ಲೊಬ್ಬನಾದ ಮುಕೇಶ್ ಸಿಂಗ್, ಗಲ್ಲು ಶಿಕ್ಷೆಯ ನಂತರ ತನ್ನ ಅಂಗಾಂಗಗಳನ್ನು ದಾನ ಮಾಡಬೇಕೆಂದು ಕೋರಿದ್ದಾನೆ. ಮತ್ತೂಬ್ಬ ಅಪರಾಧಿ ವಿನಯ್, ಜೈಲು ಜೀವನದ ವೇಳೆ ತನ್ನ ಸೆಲ್‌ನಲ್ಲಿ ತಾನು ರಚಿಸಿದ್ದ ವರ್ಣಚಿತ್ರಗಳನ್ನು ತಿಹಾರ್ ಜೈಲಿನ ಸೂಪರಿಂಟೆಂಡೆಂಟ್‌ಗೆ ನೀಡುವಂತೆ ಕೋರಿದ್ದಾನೆ. ಜೊತೆಗೆ, ತಾನು ನಿತ್ಯ ಪಠಿಸುತ್ತಿದ್ದ ಹನುಮಾನ್ ಚಾಲೀಸಾ ಪುಸ್ತಕವನ್ನು ತನ್ನ ಕುಟುಂಬಕ್ಕೆ ಹಸ್ತಾಂತರಿಸುವಂತೆ ತಿಳಿಸಿದ್ದಾನೆ. ಪ್ರಮುಖ ಘಟ್ಟಗಳು
ಡಿ. 16, 2012
ಚಲಿಸುತ್ತಿದ್ದ ಬಸ್‌ನಲ್ಲಿ ನಿರ್ಭಯಾ ಮೇಲೆ ಆರು ಮಂದಿಯಿಂದ ಅತ್ಯಾಚಾರ, ಮಾರಣಾಂತಿಕ ಹಲ್ಲೆ
ಡಿ. 29, 2012
ಸಿಂಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿರ್ಭಯಾ ಕೊನೆಯುಸಿರು.
ಸೆ. 13, 2013
ದೆಹಲಿ ಸ್ಥಳೀಯ ನ್ಯಾಯಾಲಯದಿಂದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟ
ಮಾ. 13, 2014
ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಮಾ. 15, 2014
ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ಮೇ 5, 2017
ಕೆಳ ನ್ಯಾಯಾಲಯಗಳು ನೀಡಿದ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನ. 20, 2017ರಿಂದ ಮಾ. 20, 2020
ಅಪರಾಧಿಗಳು ಹಾಗೂ ಅವರ ಸಂಬಂಧಿಕರಿಂದ ನಾನಾ ರೀತಿಯ ಕಾನೂನು ಹೋರಾಟ
ಮಾ. 20, 2020
ಗುರುವಾರ ಮಧ್ಯರಾತ್ರಿ 2:30ರ ಸುಮಾರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಅಪರಾಧಿಗಳ ಮೇಲ್ಮನವಿ ತಿರಸ್ಕೃತ
ಮಾ. 21, 2020
ತಿಹಾರ್ ಜೈಲಿನಲ್ಲಿ ಬೆಳಗ್ಗೆ 5:30ರ ಹೊತ್ತಿಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ.