Advertisement

ಪಶ್ಚಿಮದ ಗೋಡೆ ಮತ್ತು ಸೂರ್ಯ!

01:08 PM Jan 05, 2019 | |

ಹಿರಿಯರ ನಡೆ-ನುಡಿ ಕೆಲವು ಸಲ ಅಸಾಮಾನ್ಯ ನೆಲೆಗೆ ಒಮ್ಮೆಗೇ ನಮ್ಮನ್ನು ಕೊಂಡೊಯ್ಯುತ್ತವೆ. ಇಂಥ ಅನುಭವ ನನಗೆ ಅನೇಕ ಸಲ ಆದದ್ದುಂಟು. ಅಂಥ ಒಂದು ಪ್ರಸಂಗವನ್ನು ಈವತ್ತು ನಿಮ್ಮ ಮುಂದೆ ನಿವೇದಿಸುತ್ತೇನೆ. ಕನ್ನಡದ ಆದ್ಯ ಗೀತರೂಪಕಕಾರರೆಂದು ಹಿರಿಯ ಚೇತನ ಪು. ತಿ. ನರಸಿಂಹಾಚಾರ್‌ ಪ್ರಸಿದ್ಧರು. ಅವರು ಭಾಗ್ಯವಶಾತ್‌ ನನಗೆ ತುಂಬ ಹತ್ತಿರದವರು. ಕೊನೆಕೊನೆಗೆ ನಮ್ಮ ಮನೆಯ ಹಿರಿಯರಂತೆ ನಡೆದುಕೊಂಡವರು. ಅವರಿಗೆ ತುಂಬ ವಯಸ್ಸಾಗಿದ್ದ ದಿನಗಳಲ್ಲಿ ನಡೆದ ಒಂದು ಪ್ರಸಂಗವನ್ನು ನಾನು ಯಾವತ್ತೂ ಮರೆಯಲಾರೆ. ಆ ದಿನಗಳಲ್ಲಿ ಕವಿವರ್ಯರ ಕಿವಿಗಳು ತುಂಬಾ ಮಂದವಾಗಿದ್ದವು. ಕಣ್ಣು ಮಬ್ಟಾಗಿದ್ದವು. ಒಂದು ಮುಂಜಾನೆ ನಾನು ಯಾವತ್ತಿನಂತೆ ಪುತಿನ ಅವರ ಆರೋಗ್ಯ ವಿಚಾರಿಸಲು ಜಯನಗರದಲ್ಲಿದ್ದ ಅವರ ಮನೆಗೆ ಹೋದೆ. ಸಂಜೆಯ ಸೂರ್ಯಾಸ್ತಮದ ಸಮಯ. ಮುಂಬಾಗಿಲು ತೆರೆದೇ ಇತ್ತು. ಪುತಿನ ಅವರ ಮನೆಯ ಮುಂಬಾಗಿಲು ಪೂರ್ವಾಭಿಮುಖವಾಗಿತ್ತು. ಪುತಿನ ನಡುಮನೆಯಲ್ಲಿ ಗೋಡೆಗೆ ಮುಖಮಾಡಿಕೊಂಡು ಆಸೀನರಾಗಿದ್ದರು. ಒಳಮನೆಯಲ್ಲಿ ಅವರ ಪತ್ನಿ ಯಾವುದೋ ಕೆಲಸದಲ್ಲಿದ್ದರೆಂದು ಕಾಣುತ್ತೆ. ಗೋಡೆಗೆ ಮುಖಮಾಡಿ ಕೂತ ಆ ಹಿರಿಯರನ್ನು ನೋಡಿ ನನ್ನ ಕರುಳು ಚುರುಕ್‌ ಎಂದಿತು. ಕಣ್ಣು ಕಾಣುತ್ತಿರಲಿಲ್ಲವಲ್ಲ! ತಪ್ಪರಿವಿನಿಂದ ಗೋಡೆಗೆ ಮುಖ ಮಾಡಿ ಕೂತಿದ್ದಾರೆ. ಅದನ್ನು ಅವರ ಶ್ರೀಮತಿಯವರೂ ಗಮನಿಸಿದಂತಿಲ್ಲ. ನಾನು ಪುತಿನ ಅವರ ಬಳಿ ಹೋಗಿ, ಕಿವಿಯ ಹತ್ತಿರ ಬಾಗಿ ಹೇಳಿದೆ: “”ಸರ್‌! ನೀವು ಗೋಡೆಗೆ ಮುಖಮಾಡಿ, ಬಾಗಿಲಿಗೆ ಬೆನ್ನು ಹಾಕಿ ಕೂತಿದ್ದೀರಿ. ಬಾಗಿಲು ವಿರುದ್ಧ ದಿಕ್ಕಿನಲ್ಲಿ ಇದೆ. ಏಳಿ! ಕುರ್ಚಿಯನ್ನು ಸರಿಯಾಗಿ ಹಾಕುತ್ತೇನೆ…”

Advertisement

“”ಏನಪ್ಪಾ… ಮೂರ್ತಿ ಅಲ್ಲವಾ? ಬನ್ನಿ ಬನ್ನಿ …”
 “”ಮೊದಲು ನಿಮ್ಮ ಕುರ್ಚಿಯನ್ನು ಸರಿಯಾದ ದಿಕ್ಕಿಗೆ ಹಾಕುತ್ತೇನೆ, ಏಳಿ”
 “”ನನ್ನ ಕುರ್ಚಿ ಸರಿಯಾದ ದಿಕ್ಕಿನಲ್ಲೇ ಇದೆಯಲ್ಲಯ್ನಾ…”
 “”ಸಾರ್‌…! ನೀವು ಗೋಡೆಗೆ ಮುಖಮಾಡಿ ಕೂತಿದ್ದೀರಿ…”
 “”ಈಗ ಎಷ್ಟು ಸಮಯ…”
 “”ಸಂಜೆ ಆರು…”
 “”ಅಂದರೆ ಸೂರ್ಯ ಮುಳುಗುವ ಹೊತ್ತು. ನಮ್ಮ ಮನೆಯ ಮುಂಬಾಗಿಲು ಪೂರ್ವಕ್ಕಿದೆ. ಸೂರ್ಯ ಮುಳುಗುತ್ತಿರುವುದು ಪಶ್ಚಿಮದಲ್ಲಿ. ನಾನು ಪಶ್ಚಿಮಕ್ಕೆ ತಿರುಗಿ ಕೂತು ಸೂರ್ಯಭಗವಾನನ ದರ್ಶನ ಮಾಡುತ್ತಿದ್ದೇನೆ. ನಾನು ಸರಿಯಾಗೇ ಕೂತಿದ್ದೇನೆ. ದಿಕ್ಕು ತಪ್ಪಿಲ್ಲವಯ್ನಾ ನಾನು!”
 ನಾನು ತಬ್ಬಿಬ್ಟಾಗಿ ಹೋದೆ. ಪುತಿನ ಅವರಿಗೆ ಕಣ್ಣು ಕಾಣುತ್ತಿಲ್ಲ- ಎಂದು ಭಾವಿಸಿ ನಾನು ಎಂಥ ದಡ್ಡನಾದೆನಲ್ಲ ! ಕಣ್ಣು ಕಾಣುವ ನಮಗೆ ಗೋಡೆ ಕಾಣುತ್ತದೆ. ಕಣ್ಣಿಲ್ಲದ ಪುತಿನ ಅವರಿಗೆ ಗೋಡೆಯ ಆಚೆಗಿನ ಸೂರ್ಯಭಗವಾನ್‌ ಕಾಣುತ್ತಾನೆ! ಯಾರು ಕುರುಡರು ಇಲ್ಲಿ?
 ಪುತಿನ ಯಾವಾಗಲೂ ಹೇಳುತ್ತಿದ್ದರು- “”ಕವಿಯಾದವನು ಕಾಣುವುದರ ಆಚೆ ಇರುವ ಕಾಣೆRಯನ್ನು ಪಡೆಯಬೇಕಯ್ನಾ! ಕಂಡದ್ದು ನೋಟ. ಕಂಡದ್ದರ ಆಚೆ ಕಾಣುವಂಥದ್ದು ಕಾಣೆR; ದರ್ಶನ. ಹಾಗೆ ಕಾಣಬಲ್ಲವನಾಗದವನು ಕವಿಯಾಗಲಾರ. ಕಂಡವರಿಗಲ್ಲ ಕಂಡವರಿಗಷ್ಟೆ ಕಾಣುವುದು ಇದರ ನೆಲೆಯು ಅಂತ ಬೇಂದ್ರೆ ತಮ್ಮ ಕವಿತೆಯಲ್ಲಿ ಹೇಳಿಲ್ಲವೆ? ಹಿರಣ್ಯಕಶಿಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು. ಅದೃಷ್ಟವೂ ಇರಬೇಕು. ಅದಕ್ಕೇ ಮಹಾಕವಿಗಳು ಹೇಳಿದ್ದು ಕಂಡಕಂಡವರಿಗೆಲ್ಲ ಕಾಣುವುದಿಲ್ಲ. ಕಂಡವರಿಗಷ್ಟೆ ಕಾಣಬೇಕಾದ್ದು ಕಾಣುವುದು! ಎಂದು. ಅದನ್ನೇ ನಾವು ದರ್ಶನ ಎನ್ನುವುದು. ಇಂಥ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣದರ್ಶನಂ ಎಂದು ಹೆಸರಿಟ್ಟರು. ಹಕ್ಕಿ ಹಾರುತಿದೆ ನೋಡಿದಿರಾ? ಎಂದು ಬೇಂದ್ರೆ ಕೇಳಿದರು. ನಾನೂ ಒಂದು ಹಕ್ಕಿಯನ್ನು ನೋಡಿದೆ! ಅದು ಬಾನಲ್ಲಿ ಹಾರುತ್ತ ಹೋದ ಗರುಡ. ಆ ಗರುಡನ ನೆರಳು ನನಗೆ ಗಾಂಧಿಯೆಂಬಂತೆ ತೋರಿತು. ಹಾಗೆ ತೋರಿದ್ದಕ್ಕೇ ಅದು ಕವಿತೆ ಆಯಿತು. ನೀನು ಒಳ್ಳೆಯ ಕವಿಯಾಗಬೇಕೋ ಕಂಡದ್ದರ ಆಚೆ ನೋಡುವುದನ್ನು ಅಭ್ಯಾಸ ಮಾಡು”
 ಆಹಾ! ಎಂಥ ಕಾಣ್ಕೆ ಎಂದು ಪುತಿನ ಮಾತನ್ನೇ ಧ್ಯಾನಿಸುತ್ತ ಮನೆಗೆ ಹಿಂದಿರುಗಿದೆ. 

ಪುತಿನ ಮಾತು ಕತ್ತಲಲ್ಲಿ ಗೀರಿದ ಬೆಳಕಿನ ಕಡ್ಡಿಯಂತೆ ನನ್ನ ಮನೋಗರ್ಭದಲ್ಲಿ ಒಮ್ಮೆ ಬೆಳಗಿ ಅಂಧಕಾರಕ್ಕೆ ಒಂದು ಆಕಾರ ಬರೆದಿತ್ತು.
ಪುತಿನ ಅವರನ್ನು ಕುರಿತೇ ಇನ್ನೊಂದು ಪ್ರಸಂಗ ಈಗ ನೆನಪಾಗುತ್ತಿದೆ. ಆವತ್ತು ಭಾನುವಾರ. ಶಾಲೆಗೆ ರಜ. ಪುತಿನ ಅವರನ್ನು ಭೆಟ್ಟಿಯಾಗಿ ಕೆಲವು ಸಮಯ ಅವರೊಂದಿಗೆ ಸುಖಸಂಕಥಾವಿನೋದದಲ್ಲಿ ಕಾಲ ಕಳೆಯೋಣವೆಂದು ಅವರ ಮನೆಗೆ ಹೋದೆ. ಬೆಳಗಿನ ಸಮಯ. ಎಳೆಬಿಸಿಲು ಮನೆಯ ಅಂಗಳದಲ್ಲಿ ಕಾಲು ಚಾಚಿ ಮಲಗಿತ್ತು. ಜಗಲಿಯ ಮೇಲೆ ಪುತಿನ ಬೆತ್ತದ ಕುರ್ಚಿಯಲ್ಲಿ ಕಾಲು ಚಾಚಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಉಡುಪು ನೋಡಿದರೆ ಆಗಷ್ಟೇ ಅವರು ಬೆಳಗಿನ ಸಂಧ್ಯಾವಂದನೆ ಮುಗಿಸಿದಂತಿತ್ತು. ಪಕ್ಕದ ಬೆಂಚಿನ ಮೇಲೆ ಅಘಪಾತ್ರೆ ಉದ್ಧರಣೆಗಳು ಕೂಡ ಇದ್ದವು. ಅರೆಗಣ್ಣಿನಲ್ಲಿ ಕವಿಗಳು ಏನನ್ನೋ ಧ್ಯಾನಿಸುತ್ತ ಒರಗಿದಂತಿತ್ತು. ನಾನು ಅವರನ್ನು ಸಮೀಪಿಸಿ, “”ಸರ್‌! ಹೇಗಿದ್ದೀರಿ? ಏನನ್ನೋ ಗಾಢವಾಗಿ ಯೋಚಿಸುತ್ತಿರುವಂತಿದೆ!” ಎಂದೆ. 
ನನ್ನ ಧ್ವನಿ ಗುರುತು ಹಿಡಿದು, “‘ಓ ಮೂರ್ತಿಯಾ ಬಾರಯ್ನಾ ಬಾ… ಎಷ್ಟು ಯುಗವಾಯಿತಪ್ಪಾ$ ನೀನು ಬಂದು” ಎಂದು ಅಕ್ಕರೆಯಿಂದ ವಿಚಾರಿಸಿದರು. ಪತ್ನಿಗೆ ತಮಿಳಿನಲ್ಲಿ ನಾನು ಬಂದಿರುವುದನ್ನು ಕೂಗಿ ಹೇಳಿದರು. ಅದರ ಅರ್ಥ ಅತಿಥಿಗೆ ಕಾಫಿ ತಾ ಎಂದು ಸೂಚಿಸುವುದು. ನಾನು ಬೆಂಚಿನ ಮೇಲೆ ಕೂತು, “”ಏನು ಸರ್‌ ಯೋಚಿಸುತ್ತಿದ್ದಿರಿ?” ಎಂದು ವಿಚಾರಿಸಿದೆ.

ಪುತಿನ ಗಂಭೀರವಾಗಿ, “”ಆ ತರುಣಿಯ ಕಾಟ ಹೆಚ್ಚಾಗಿದೆಯಪ್ಪಾ… ನೆನ್ನೆ ರಾತ್ರಿಯೂ ಬಂದಿದ್ದಳು. ಕಥೆ ಬೇಗ ಮುಗಿಸಬಾರದೆ ಎಂದು ಅಸಮಾಧಾನದಿಂದ ಪ್ರಶ್ನಿಸಿದಳು” ಎಂದರು. ಆಗ ಕವಿಗಳಿಗೆ ಇಳಿವಯಸ್ಸು.  ಈ ವಯಸ್ಸಲ್ಲಿ ಅವರನ್ನು ಬಂದು ಪ್ರತಿ ರಾತ್ರಿಯೂ ಕಾಡುವ ತರುಣಿ ಯಾರು? ನನಗೆ ಕುತೂಹಲ ತಡೆಯದಾಯಿತು. 
“”ಯಾರು ಸರ್‌ ಬಂದದ್ದು?”    
“”ಮತ್ತಾರಪ್ಪ? ಆ ಊರ್ವಶಿ!”
 ಆಗ ನನಗೆ ಅರ್ಥವಾಯಿತು. ಊರ್ವಶಿ ಪುತಿನ ಬರೆಯುತ್ತಿದ್ದ ನಾಟಕ. ಇಳಿವಯಸ್ಸಿನ ಕಾರಣ ಅದನ್ನು ಅವರಿಗೆ ಮುಗಿಸುವುದಾಗಿರಲಿಲ್ಲ. ಬೇಗ ನಾಟಕ ಮುಗಿಸು ಎಂದು ಊರ್ವಶಿ ಹೇಳಿದಳು ಎಂಬ ಮಾತಿನ ಅರ್ಥ ಈಗ ಹೊಳೆಯಿತು. 

 ಪುತಿನ ನಕ್ಕರು, “”ನನಗೆ ವಯಸ್ಸಾಯಿತು… ನಾನು ಅವಳ ಕಥೆ ಹೇಗೆ ಮುಗಿಸಲಿ? ನನ್ನಿಂದ ಆಗದು ತಾಯಿ ಎಂದರೆ ಆಕೆ (ಇಲ್ಲಿ ಒಂದು ಬೈಗುಳದ ಮಾತನ್ನು ಕವಿ ಬಳಸಿದರು) ಕೇಳಬೇಕಲ್ಲ?” 
 “”ದಯಮಾಡಿ ಆಕೆಗೆ ನನ್ನ ಮನೆಯ ವಿಳಾಸ ಕೊಡಿ… ಈ ನೆಪದಿಂದಲಾದರೂ ಊರ್ವಶಿಯ ದರ್ಶನವಾಗಲಿ!”
 ಪುತಿನ ಗಟ್ಟಿಯಾಗಿ ನಕ್ಕರು,””ನಾನು ಅವಳಿಗೆ ಭಟ್ಟರ ವಿಳಾಸ ಕೊಟ್ಟಿದ್ದೇನೆ… ಅವರೂ ಅವಳ ಕಾಟ ಅನುಭವಿಸಲಿ !”
.
.
ಇದು ಪುತಿನ ಅವರ ಮಾತಿನ ವರಸೆ. ಹಳೆಯ ಪೀಳಿಗೆಯವರು ಮಾಡಿ ಮುಗಿಸದ ಕೆಲಸವನ್ನು ಹೊಸ ಪೀಳಿಗೆಯ ಕವಿಗಳು ಮಾಡಬೇಕು. ಅದು ಅವರ ಹೊಣೆಗಾರಿಕೆ! ಇದು ಪುತಿನ ವಿಚಾರವಾಗಿತ್ತು! ಕೋಗಿಲೆಗಳು ತೀರಬಹುದು. ಆದರೆ, ಕೋಗಿಲೆಯ ಹಾಡು ಮಾತ್ರ ಯಾವತ್ತೂ ನಿರಂತರ ಎಂದು ಅವರೊಂದು ಪದ್ಯದಲ್ಲಿ ಹೇಳಿದ್ದನ್ನು ಈವತ್ತು ತಮ್ಮ ಮಾತಿನ ಮೂಲಕ ವಾಸ್ತವಿಕ ನೆಲೆಯಲ್ಲಿ ಪ್ರತಿಪಾದಿಸುತ್ತಿದ್ದರು. ಕಥೆ ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತದೆ ಎಂದು ಡಾ. ರಾಜಕುಮಾರ್‌ ಯಾವತ್ತೂ ಹೇಳುತ್ತಿದ್ದರಂತೆ! ಪುತಿನ ಅದೇ ಸಂಗತಿಯನ್ನು ಬೇರೊಂದು ರೀತಿಯಲ್ಲಿ ಹೇಳಿದ್ದರು. ದಾರಿಯಲ್ಲಿ ಒಬ್ಬನೇ ನಡೆಯುವಾಗ ನಾನು ನನ್ನಷ್ಟಕ್ಕೆ ಅಂದುಕೊಳ್ಳುತ್ತೇನೆ. ಕಥೆ ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತದೆ. ಹಾಗಾದರೆ ಕಥೆಗಾರನ ಕೆಲಸ?

Advertisement

ಪುತಿನ ಅನ್ನುತ್ತಾರೆ: ಕಥೆಯನ್ನು ಹಿಂಬಾಲಿಸುವುದೇ ಕತೆಗಾರನ ಕೆಲಸ!

ಎಚ್ ಎಸ್ ವೆಂಕಟೇಶಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next