Advertisement
ಹಗಲಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡಿ ಪ್ರತೀ ದಿನ ರಾತ್ರಿ ಮಣ್ಣು ಅಗೆದು ಒಟ್ಟು 18 ಅಡಿ ಬಾವಿ ತೋಡಿ ಇದೀಗ ಎರಡು ಅಡಿ ನೀರು ಪಡೆದು ಪಕ್ಕದ ಮೂರು ಮನೆಗೂ ಜಲಪೂರೈಕೆ ಮಾಡುತ್ತಿದ್ದಾರೆ. ಇವರ ಸಾಧನೆ ಮೆಚ್ಚುಗೆಗೆ ಕಾರಣವಾಗಿದೆ. 32ರ ಹರೆಯದ ಭುವನೇಶ ಗೌಡ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾವಂಜಿಗುಡ್ಡೆ ಎಂಬಲ್ಲಿ ವಾಸಿಸುತ್ತಿದ್ದು ಹಲವಾರು ವರ್ಷಗಳಿಂದ ನೀರಿನ ತೊಂದರೆ ಅನುಭವಿಸುತ್ತಿದ್ದರು. ಈ ಪರಿಸರದಲ್ಲಿ ಸರಕಾರಿ ಸೈಟುಗಳ ಜನರೂ ನೀರಿನ ತೊಂದರೆ ಅನುಭವಿಸಿ ಜಾಗ ಮಾರಲಾರಂಭಿಸಿದಾಗ ಭುವನೇಶರು ತಾನೂ ಒಂದು ಸೈಟು ಖರೀದಿಸಿದ್ದರು. ಬಳಿಕ ನೀರಿನ ಸಮಸ್ಯೆ ಇದ್ದರಿಂದ ಸಂಜೆ ವೇಳೆ ಬಾವಿ ತೋಡಲು ಶುರುಮಾಡಿದ್ದರು.
ಬಾಲ್ಯದ ಪಾಠ ಸಹಕಾರಿಯಾಯಿತು
ಈ ಹಿಂದೆ ಶಾಲಾ ರಜಾ ದಿನಗಳಲ್ಲಿ ಬಾವಿ ತೋಡುವ ಕೆಲಸಕ್ಕೆ ಚೆರಿಯಮೋನು ಎಂಬ ಗುತ್ತಿಗೆದಾರರ ಬಳಿ ಕೆಲಸ ಮಾಡಿದ್ದ ಅನುಭವವೇ ಇಲ್ಲಿ ಸಹಕಾರಿಯಾಯಿತು ಎನ್ನುವ ಭುವನೇಶ ಇದೀಗ ನಮ್ಮ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ ಎನ್ನುವುದರ ಜತೆ ಇತರ ಎರಡು-ಮೂರು ಮನೆಗಳಿಗೂ ನೀರು ನೀಡುವ ಹೆಮ್ಮೆ ಇದೆ ಎನ್ನುತ್ತಾರೆ.