Advertisement

Sullia: ಸುಳ್ಯದ ವಿಸ್ಮಯದ ಬಾವಿ ಶಿಲಾಯುಗದ್ದು

04:05 PM Aug 12, 2024 | Team Udayavani |

ಸುಳ್ಯ: ಸುಳ್ಯದ ಅರಣ್ಯದೊಳಗಿನ ಬಾವಿ ಹಾಗೂ ವಿವಿಧ ಆಕೃತಿಗಳು ಬೃಹತ್‌ ಶಿಲಾಯುಗ ಕಾಲದ್ದು ಎಂದು ಅಧ್ಯಯನ ತಂಡ ಪ್ರಾಥಮಿಕವಾಗಿ ಮಾಹಿತಿ ನೀಡಿದೆ.

Advertisement

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇದಿನಡ್ಕ ಅರಣ್ಯದೊಳಗೆ ಬಾವಿ ಆಕೃತಿ ಇದ್ದು, ಇದಕ್ಕೆ ಸುಮಾರು ನೂರಾರು ಎಕ್ರೆ ವ್ಯಾಪ್ತಿಯ ಮಳೆಗಾಲದ ಒರತೆ ನೀರು ಹರಿದು ಬಂದು ಸೇರುತ್ತಿದ್ದು, ಈ ನೀರು ಬಾವಿಯೊಳಗಿನಿಂದಲೇ ಬೇರೆ ಕಡೆಯಿಂದ ಹೊರ ಹೋಗುತ್ತಿರುವುದು ಕಂಡುಬಂದಿತ್ತು. ಜತೆಗೆ ಇಲ್ಲೇ ಸಮೀಪದ ವಿಶಾಲ ಮೈದಾನದಲ್ಲಿ ವಿವಿಧ ಆಕೃತಿಗಳು ಕಂಡುಬಂದಿತ್ತು. ಈ ಬಗ್ಗೆ “ಉದಯವಾಣಿ ಸುದಿನ’ದಲ್ಲೂ ವಿಶೇಷ ವರದಿ ಪ್ರಕಟಗೊಂಡಿತ್ತು. ಇದೀಗ ಇಲ್ಲಿಗೆ ಅಧ್ಯಯನ ತಂಡ ಭೇಟಿ ನೀಡಿ, ಅಧ್ಯಯನಕ್ಕೆ ಮುಂದಾಗಿದ್ದಾರೆ. ರಾಜೇಶ್‌ ಮೇನಾಲ ಅವರ ಮಾಹಿತಿಯಂತೆ ಅಧ್ಯಯನ ತಂಡ ಆಗಮಿಸಿದೆ.

ಉಡುಪಿಯ ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಹಾಗೂ ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹಪ್ರಾಧ್ಯಾಪಕ ಪ್ರೊ| ಟಿ.ಮುರುಗೇಶಿ ಅವರ ನೇತೃತ್ವದ ತಂಡ ಅಧ್ಯಯನಕ್ಕೆ ರವಿವಾರ ಸುಳ್ಯಕ್ಕೆ ಆಗಮಿಸಿದ್ದು, ಅರಣ್ಯದೊಳಗಿನ ಬಾವಿ, ವಿಶಾಲ ಮೈದಾನದಲ್ಲಿನ ವಿವಿಧ ಆಕೃತಿಗಳನ್ನು ಪರಿಶೀಲನೆ ನಡೆಸಿದರು. ಬ್ರಹ್ಮಾವರ ಎಸ್‌ ಎಂಎಸ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ಉಪನ್ಯಾಸಕ ಪ್ರಶಾಂತ್‌ ಶೆಟ್ಟಿ, ಪುರಾತ್ತತ್ತ್ವ ಸಂಶೋಧಕ ಸುಭಾಷ್‌ ನಾಯಕ್‌ ಉಡುಪಿ, ಶಿರ್ವ ಎಂಎಸ್‌ ಆರ್‌ಎಸ್‌ ಕಾಲೇಜಿನ ವಿದ್ಯಾರ್ಥಿಗಳಾದ ಅರುಣ್‌, ರವೀಂದ್ರ ಮೊದಲಾದವರು ಅಧ್ಯಯನ ತಂಡದಲ್ಲಿದ್ದಾರೆ. ಅಧ್ಯಯನ ನಡೆಸಿದ ತಂಡ ಪ್ರಾಥಮಿಕ ಅನ್ವೇಷಣೆಯ ಪ್ರಕಾರದ ಮಾಹಿತಿಯನ್ನು ಉದಯವಾಣಿಗೆ ತಿಳಿಸಿದ್ದಾರೆ. ರಾಜೇಶ್‌ ಮೇನಾಲ ಸೇರಿದಂತೆ ಸ್ಥಳೀಯ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆದಿಮಕಲೆಯ ನಿರ್ಮಾಣದ ಬಾವಿ

ಅರಣ್ಯದೊಳಗೆ ಕಂಡುಬಂದಿರುವ ಬಾವಿಯನ್ನು ಪರಿಶೀಲನೆ ನಡೆಸಿದ ಅಧ್ಯಯನ ತಂಡ, ಈ ಬಾವಿ ವಿಸ್ಮಯಕಾರಿ ರಚನೆಯಂತೆ ಕಂಡುಬಂದಿದೆ. ಬಾವಿಯ ಸಮೀಪ ಆದಿಮಕಲೆಯ ನಿವೇಶನ ಇರುವುದರಿಂದ ಈ ಆದಿಮಕಲೆಯ ನಿರ್ಮಾಣರೇ ಈ ಬಾವಿಯನ್ನು ನಿರ್ಮಿಸಿರಬಹುದೆಂದು ಭಾವಿಸಲಾಗಿದೆ.

Advertisement

ಖಗೋಳ ವಿಜ್ಞಾನದ ಆಕೃತಿಗಳು

ಇಲ್ಲಿನ ವಿಶಾಲ ಮೈದಾನದಲ್ಲಿ ಕೇವಲ ಸುರುಳಿ, ಕೇಂದ್ರ ಬಿಂದು ಹೊಂದಿರುವ ವೃತ್ತಗಳು ಕಂಡುಬಂದಿದೆ. ಸುರುಳಿಗಳು ನಿರ್ದಿಷ್ಟ ಸಂಖ್ಯೆ ಗುಂಪುಗಳಾಗಿ, ಪ್ರತ್ಯೇಕ ಗುಂಪುಗಳಾಗಿ ಮಾಡಿರುವುದು ಕಂಡುಬಂದಿದೆ. ಸುರುಳಿಗಳು ಖಗೋಳ ವಿಜ್ಞಾನಕ್ಕೆ ಸಂಬಂಧಿ ಸಿದ ಚಿತ್ರಗಳಂತೆ ಕಂಡುಬರುತ್ತದೆ. ಅಂದರೆ ನಕ್ಷತ್ರ ಪುಂಜಗಳು ಹಾಗೂ ಸೌರವ್ಯೂಹದ ಸಂಕೇತಗಳಾಗಿರಬಹುದು ಎಂದು ಸದ್ಯಕ್ಕೆ ಭಾವಿಸಲಾಗಿದೆ. ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ಅಧ್ಯಯನ ತಂಡ ತಿಳಿಸಿದ್ದಾರೆ.

ಬೃಹತ್‌ ಶಿಲಾಯುಗ ಕಾಲದ್ದು ಇಲ್ಲಿನ ಚಿತ್ರಗಳು ಬಹಳ ಸ್ಪಷ್ಟವಾಗಿ ಲೋಹದ, ಕಬ್ಬಿಣ ಆಯುಧ ಉಪಯೋಗಿಸಿ ಕೆತ್ತಿರುವ ಚಿತ್ರಗಳಾಗಿವೆ. ಮೇದಿನಡ್ಕ ಸಮೀಪದಲ್ಲಿ ಕರಿಯಮೂಲೆ, ಇತರ ಪ್ರದೇಶಗಳಲ್ಲಿ ಬೃಹತ್‌ ಶಿಲಾಯುಗ ಕಾಲದ ಗುಹಾ ಸಮಾಧಿಗಳು ಪತ್ತೆಯಾಗಿವೆ. ಆದ್ದರಿಂದ ಈ ಆದಿಮಕಲೆಯ ನಿರ್ಮಾಣರು ಕೂಡ ಸುಮಾರು 3 ಸಾವಿರ ವರ್ಷಗಳ ಪುರಾತನ ಬೃಹತ್‌ ಶಿಲಾಯುಗ ಕಾಲದ ಚಿತ್ರಗಳೆಂದು ತರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿರುವ ಪ್ರೊ| ಮುರುಗೇಶಿ ಅವರು ಮುಂದಿನ ದಿನಗಳಲ್ಲಿ ಮತ್ತೆ ಇಲ್ಲಿಗೆ ಆಗಮಿಸಿ ಇಲ್ಲಿ ಇದ್ದುಕೊಂಡು ಇಲ್ಲಿನ ಮತ್ತಷ್ಟು ಅಧ್ಯಯನ ನಡೆಸಿ ಮಾಹಿತಿ ನೀಡುತ್ತೇವೆ. ಈ ಮೇಲಿನ ಮಾಹಿತಿ ಸದ್ಯಕ್ಕೆ ಪ್ರಾಥಮಿಕ ಅಧ್ಯಯನದಿಂದ ಸಿಕ್ಕ ಮಾಹಿತಿ ಎಂದು ತಿಳಿಸಿದ್ದಾರೆ. ಹೆಚ್ಚಿನ ಅಧ್ಯಯನದ ಬಳಿಕ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next