Advertisement

ರಾಜ್ಯ ಸರ್ಕಾರದಿಂದ ಬಡವರ ಕಲ್ಯಾಣ

12:26 PM Feb 26, 2018 | Team Udayavani |

ಮೈಸೂರು: ಸಂವಿಧಾನ ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡಜನರ ಕಲ್ಯಾಣಕ್ಕಾಗಿ ಮತ್ತು ಸಮಾಜದ ಸುಸ್ಥಿರ ಅಭಿವೃದ್ಧಿಗೆ ಅಹರ್ನಿಶಿ ದುಡಿದಿದೆ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

Advertisement

ನಗರದ ಹೊರವಲಯದ ಹಿನ್‌ಕಲ್‌ನಲ್ಲಿ ಮೂಡಾ ವತಿಯಿಂದ ನಿರ್ಮಿಸಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನದ ಆಶಯದಂತೆ ಬಡವರ ಕಲ್ಯಾಣವಾಗದ ಹೊರತು ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಎಸ್ಸಿ/ಎಸ್ಟಿ ಪಂಗಡಗಳ ಅಭಿವೃದ್ಧಿಗಾಗಿ ಅಂಬೇಡ್ಕರ್‌ ಅವರು,

ಸಂವಿಧಾನದಲ್ಲಿ ದೇಶದ ಸಂಪತ್ತು, ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಆಶಯದಿಂದ ಕೆಲವೊಂದು ಸೌಲಭ್ಯಗಳನ್ನು ನೀಡಿದ್ದಾರೆ. ಹೀಗಾಗಿ ಸಂವಿಧಾನದ ರಕ್ಷಣೆ, ಬಡಜನರ ಕಲ್ಯಾಣ ನಮ್ಮ ಮುಖ್ಯ ಉದ್ದೇಶವಾಗಬೇಕೆಂಬ ಸಲುವಾಗಿ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಅಲ್ಲದೆ ಈ ಯೋಜನೆಗಳು ಕೆಳಮಟ್ಟದ ಜನರಿಗೂ ತಲುಪುವಂತೆ ಮಾಡಲು ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡಿದ್ದು, ಇದರ ಸಮರ್ಪಕ ಬಳಕೆಯಾಗಬೇಕಿದೆ ಎಂದರು.

ವಿನಾಕಾರಣ ಟೀಕೆ: ಪ್ರಸ್ತುತ ರಾಜ್ಯದಲ್ಲಿರುವ ಎಲ್ಲಾ ಎಸ್ಸಿ/ಎಸ್ಟಿ ಸಮುದಾಯದ ಕಾಲೋನಿಗಳಲ್ಲಿ ಡಾಂಬರ್‌ ಹಾಗೂ ಕಾಂಕ್ರೀಟ್‌ ರಸ್ತೆ, ಒಳಚರಂಡಿ, ಶುದ್ಧ ಕುಡಿವ ನೀರಿನ ಸೌಲಭ್ಯ ಕಲ್ಪಿಸಿದೆ. ಜತೆಗೆ ಈ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ಹಾಗೂ ಉಚಿತ ಬಸ್‌ಪಾಸ್‌, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉಚಿತ ಅವಕಾಶ ನೀಡಿದ್ದು, ಈ ಸಮುದಾಯ ಭವನ ನಿರ್ಮಾಣಕ್ಕಾಗಿ ಸರ್ಕಾರ 1 ಕೋಟಿ ರೂ. ಹಣ ನೀಡಿದೆ.

ಈ ಎಲ್ಲಾ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡೆಗೆಯಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರ ಗುಂಪುಗಾರಿಕೆ, ಭ್ರಷ್ಟಾಚಾರ, ಹಗರಣರಹಿತ ಆಡಳಿತ ನೀಡಿ, ಆರು ಬಜೆಟ್‌ ಮಂಡಿಸಿ ಜನಸಾಮಾನ್ಯರ ಬದುಕಿಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಿ ಅನುಷ್ಠಾನಗೊಳಿಸಿದ್ದರೂ, ವಿರೋಧ ಪಕ್ಷಗಳು ವಿನಾಕಾರಣ ಟೀಕಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಯೋಜನೆಗಳನ್ನು ಮಾಡಿಸಿದ್ದೇನೆ. ತಾವು ಮುಡಾ ಸದಸ್ಯನಾದ ಮೇಲೆ ಅದರ ವ್ಯಾಪ್ತಿಗೆ ಬರುವ ಅನೇಕ ಗ್ರಾಮ, ಬಡಾವಣೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಸದಸ್ಯ ಶಿವಮಲ್ಲು, ಜಿಪಂ ಸದಸ್ಯ ರಾಕೇಶ್‌, ಜಾಗೃತ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next