Advertisement

ಮರಳು ಸಮಸ್ಯೆ ಪರಿಹಾರಕ್ಕೆ ವಾರದ ಗಡು

11:47 AM Oct 08, 2017 | Team Udayavani |

ಪುತ್ತೂರು : ಮರಳು ಸಮಸ್ಯೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಒಂದು ವಾರದೊಳಗೆ ಜಿಲ್ಲೆಯೊಳಗೇ ಮರಳು ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು. ತಪ್ಪಿದರೆ ಹೊರ ಜಿಲ್ಲೆಗಳಿಗೆ ಸಾಗಾಟ ಮಾಡುವ ಲಾರಿಗಳನ್ನು ರಸ್ತೆಯಲ್ಲೇ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಂಚಾಲಕ ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು.

Advertisement

ರಾಜ್ಯ ಸರಕಾರದ ಏಕರೂಪ ಮರಳು ನೀತಿಯನ್ನು ವಿರೋಧಿಸಿ ಪುತ್ತೂರು ಹಿತರಕ್ಷಣಾ ವೇದಿಕೆ ವತಿಯಿಂದ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಸರಕಾರ, ತನ್ನ ಸಹವರ್ತಿಗಳಿಗಾಗಿ ಮರಳು ನೀತಿ ರೂಪಿಸುತ್ತಿದೆ. ಇದರಿಂದ ಕೂಲಿಕಾರ್ಮಿಕರು, ಸರಕಾರದ ಯೋಜನೆಗಳಿಗೆ, ಕಟ್ಟಡ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಜನಸಾಮಾನ್ಯರು ಬದುಕುವ ವ್ಯವಸ್ಥೆ ಕಲ್ಪಿಸುವುದನ್ನು ಬಿಟ್ಟು ಜನವಿರೋಧಿ ನೀತಿ ಅನುಸರಿಸುತ್ತಿದೆ. ಮರಳು ದಂಧೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಮೀಲಾಗುವ ಮೂಲಕ ಅತ್ಯಂತ ಕೀಳು ಮಟ್ಟದ ರಾಜ ಕಾರಣ ಮಾಡಲು ಹೊರಟಿದ್ದಾರೆ. ಚುನಾವಣೆಗೆ ಹಣ ಜೋಡಿಸುವ ಯತ್ನ ಕರಾವಳಿ ಸಚಿವರಿಂದ ನಡೆಯುತ್ತಿದೆ. ಮರಳು ನೀತಿ ಬಗ್ಗೆ ಶಾಸಕರು ಮಾತನಾಡುತ್ತಿಲ್ಲ. ದೇಯಿ ಬೈದ್ಯೆತಿ ಮೂರ್ತಿಗೆ ಹಾಲು ಸುರಿದವರ ವಿರುದ್ಧ ದೂರು ದಾಖಲಿಸಿ ಎನ್ನುತ್ತಾರೆ. ಆದರೆ ಸಮಸ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಡಾ| ಎಂ.ಕೆ. ಪ್ರಸಾದ್‌ ಭಂಡಾರಿ ಮಾತನಾಡಿ, ಮದುವೆ, ಮುಂಜಿ, ಹುಲಿವೇಷ ಮುಂತಾದ ಕೆಲಸದಲ್ಲಿ ಮುಳುಗಿರುವ ಜಿಲ್ಲೆಯ ಉಸ್ತುವಾರಿ ಸಚಿವರು, ಮರಳು ನೀತಿಯ ಕುರಿತು ತಲೆ ಕೆಡಿಸಿಕೊಂಡಿಲ್ಲ. ಪುತ್ತೂರು ಶಾಸಕರು ಹಿಂದಿನ ಸರಕಾರದ ಸಾಧನೆಯನ್ನು ತಾನು ಮಾಡಿದ ರೀತಿಯಲ್ಲಿ ಫ್ಲೆಕ್ಸ್‌ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನು ಬಿಟ್ಟರೆ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾಗಿದ್ದರೂ ಮರಳು ನೀತಿಯ ಕುರಿತು ಮುಖ್ಯಮಂತ್ರಿಗಳಲ್ಲಿ ವಿಚಾರಿಸದೆ ಡಬಲ್‌ ಗೇಮ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬನ್ನೂರು ಗ್ರಾ.ಪಂ. ಅಧ್ಯಕ್ಷೆ ರಮಣಿ ಗಾಣಿಗ ಮಾತನಾಡಿ, ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗಿದೆ. ಆದರೆ ಮರಳು ನೀತಿಯ ಅಭಾವದಿಂದಾಗಿ ಕಾಮಗಾರಿ ನಡೆಸಲು ತೊಂದರೆ ಉಂಟಾಗಿದೆ. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಯಲಿದೆ ಎಂದರು.

Advertisement

ನಗರ ಪಂಚಾಯತ್‌ ಉಪಾಧ್ಯಕ್ಷ ವಿಶ್ವನಾಥ ಗೌಡ, ಎಂಜಿನಿಯರ್ ಅಸೋಸಿಯೇಶನ್‌ನ ವಸಂತ ಭಟ್‌, ಜೆ.ಕೆ. ಕನ್‌ಸ್ಟ್ರಕ್ಷನ್‌ನ ಜಯ ಕುಮಾರ್‌, ಗಿರೀಶ್‌ ಪಡ್ಡಾಯೂರು ಮಾತನಾಡಿದರು. ಸಮಿತಿಯ ರಾಕೇಶ್‌ ನಾೖಕ್‌ ಸ್ವಾಗತಿಸಿದರು. ಬಳಿಕ ಸಹಾಯಕ ಕಮಿಷನರ್‌ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.

ಜಾಥಾಕ್ಕೆ ಚಾಲನೆ
ಪ್ರತಿಭಟನ ಸಭೆಗೆ ಮೊದಲು ಪುತ್ತೂರು ಮುಖ್ಯರಸ್ತೆಯಲ್ಲಿ ಜಾಥಾ ಸಾಗಿ ಬಂತು. ದರ್ಬೆ ವೃತ್ತದ ಬಳಿ ಉದ್ಘಾಟನೆಗೊಂಡ ಬೃಹತ್‌ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌ ಮಾತನಾಡಿ, ಏಕರೂಪ ಮರಳು ನೀತಿ ಜಾರಿಗೊಳ್ಳುವ ಮೂಲಕ ಕೃತಕ ಮರಳು ಅಭಾವದಿಂದಾಗಿ ಕಾರ್ಮಿಕ ವರ್ಗ ಜಿಲ್ಲೆಯಲ್ಲಿ ತತ್ತರಿಸಿ ಹೋಗಿದೆ. ತತ್‌ತಕ್ಷಣ ಕಾರ್ಮಿಕ ವರ್ಗ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next