ಸಸಿಹಿತ್ಲು: ಮೆಕ್ನು ಚಂಡ ಮಾರುತದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಸಮುದ್ರ ತೀರ ಪ್ರಕ್ಷುಬ್ಧಗೊಂಡಿದ್ದು ಸಸಿಹಿತ್ಲು ಸಮುದ್ರ ತೀರ ದಲ್ಲಿ ಶುಕ್ರವಾರ ತಡರಾತ್ರಿ ಅಬ್ಬರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದರೆ, ಹಗಲಿನಲ್ಲಿ ಪ್ರಶಾಂತತೆಯ ವಾತಾವರಣ ಕಂಡು ಬಂದಿದೆ. ರಾತ್ರಿಯಿಡೀ ಭಾರೀ ಗಾಳಿಯೊಂದಿಗೆ ದೂರದಿಂದ ಅಲೆಗಳು ಮೇಲೇರಿ ಬರುವಂತಹ ವಾತಾವರಣ ಹಾಗೂ ಮಳೆಯ
ಸಿಂಚನವು ಸಹ ಸಮುದ್ರ ತೀರದಲ್ಲಿ ಕಂಡು ಬಂದಿದೆ.
ಕರಾವಳಿ ತೀರಕ್ಕೆ ಮುಂಗಾರು ಪ್ರವೇಶದ ಮುನ್ಸೂಚನೆ ಇರುವುದರೊಂದಿಗೆ ಮೆಕ್ನು ಚಂಡಮಾರುತದ ಪ್ರಭಾವದಿಂದಾಗಿ ಗಾಳಿಯ ರಭಸಕ್ಕೆ ಕಡಲು ಈ ರೀತಿಯಾಗಿದೆ ಎಂದು ಸ್ಥಳೀಯ ಮೀನುಗಾರರು ಹಾಗೂ ಹಳೆಯಂಗಡಿ ಗ್ರಾ.ಪಂ. ಸದಸ್ಯ ಚಂದ್ರ ಕುಮಾರ್ ಹೇಳಿದರು.
ಸಸಿಹಿತ್ಲು ಬೀಚ್ ಪ್ರದೇಶದ ರಸ್ತೆಯ ಕಾಮಗಾರಿ ನಡೆಯುತ್ತಿರುವುದರಿಂದ ಬೀಚ್‌ಗೆ ಪ್ರವಾಸಿಗರು ಬರುತ್ತಿಲ್ಲ. ಆದರೆ ಭಗವತೀ ದ್ವಾರದ ಬಳಿ ಸಮುದ್ರ ತೀರದಲ್ಲಿ ವಿಹರಿಸುವ ಪ್ರವಾಸಿಗರಿಗೆ ಸ್ಥಳೀಯರೇ ಸೂಚನೆ ನೀಡುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ನಡೆಸಲಾಗುತ್ತಿರುವ ಸಸಿಹಿತ್ಲು ಪ್ರದೇಶದ ರಸ್ತೆಯ ಕಾಂಕ್ರೀಟ್ ಕಾಮಗಾರಿ ಯಾವುದೇ ತೊಡಕುಗಳಿಲ್ಲದೇ ಮುಂದುವರಿದಿದೆ.
ತಡೆಗೋಡೆ ಕಾಮಗಾರಿ ಸ್ಥಗಿತ
ಈ ಪ್ರದೇಶದಲ್ಲಿ ನಡೆಸಲಾಗುತ್ತಿರುವ ಶಾಶ್ವತ ತಡೆಗೋಡೆ ಕಾಮಗಾರಿಯನ್ನು ಸಹ ನಿಧಾನವಾಗಿ ನಡೆಸಲಾಗುತ್ತಿದೆ. ಶುಕ್ರವಾರದ ಗಾಳಿಯ ಗಂಭೀರತೆಯಿಂದ ಶನಿವಾರ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ವಾತಾವರಣ ತಿಳಿಗೊಂಡ ಅನಂತರ ಮುಂದುವರಿಯುವ ಸಾಧ್ಯತೆ ಇದೆ ಎಂದು ಕಾಮಗಾರಿ ನಡೆಸುವ ಕಾರ್ಮಿಕರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.