ವಿಜಯಪುರ: ಕೃಷ್ಣಾ ನದಿಯಲ್ಲಿ ಹರಿಯುವ ನೀರನ್ನು ಜನರ ಅಗತ್ಯ ಅನುಸಾರವಾಗಿ ಏತ ನೀರಾವರಿ ಮೂಲಕ ನೂರಾರು
ಕಿ.ಮೀ. ಕಾಲುವೆ ನಿರ್ಮಿಸಿ ನೀರು ಹರಿಸಿರುವುದು ಅದ್ಭುತ ಕಾರ್ಯ ಎಂದು ಜ್ಞಾನಯೋಗಾಶ್ರಮದ ಬಸವಲಿಂಗ ಶ್ರೀಗಳು
ಹೇಳಿದರು.
ಅಡಿವಿಸಂಗಾಪುರ ಗ್ರಾಮದ ಹತ್ತಿರ ಮುಳವಾಡ ಏತ ನೀರಾವರಿ ಬಬಲೇಶ್ವರ ಶಾಖಾ ಕಾಲುವೆಗೆ ಗಂಗಾಪೂಜೆ ಸಲ್ಲಿಸಿ ಮಾತನಾಡಿದ ಶ್ರೀಗಳು, ಬಬಲೇಶ್ವರ ಭಾಗದ ಜನರು ನೀರಿಗಾಗಿ ಪರಿತಪಿಸುತ್ತಿದ್ದ ಸಂಕಷ್ಟಕ್ಕೆ ಪರಿಹಾರ ದೊರೆತಿದೆ ಎಂದರು.
15 ವರ್ಷಗಳ ಹಿಂದೆ ನಾನು ಈ ಗ್ರಾಮದಲ್ಲಿ ವಾಸ್ತವ್ಯವಿದ್ದು, 15 ದಿನ ಕಾಲ ಪ್ರವಚನ ಮಾಡಿದ್ದೆ. ಆಗೆಲ್ಲ ಸ್ಥಳೀಯರಯ ನಮ್ಮೂರಿಗೆ ಮುಳವಾಡ ಏತ ನೀರಾವರಿ ಕಾಲುವೆ ಬರುತ್ತದೆ, ನಮ್ಮ ಜಮೀನೂ ನೀರಾವರಿ ಆಗುತ್ತದೆ. ನಮ್ಮ ಪ್ರದೇಶ ನೀರಾವರಿ ಸೌಲಭ್ಯ ದಕ್ಕಿದರೆ ನಮ್ಮ ಕಷ್ಟಗಳು ದೂರಾಗುತ್ತವೆ ಎಂಬ ವಿಶ್ವಾಸದ ಮಾತುಗಳು ಇದೀಗ ಎಂ.ಬಿ. ಪಾಟೀಲ ಅವರು ಸಚಿವರಾಗಿ ನನಸು ಮಾಡಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಂಗೋಗಿ ಮಹಾರಾಜರು ಮಾತನಾಡಿ, ಪಶು-ಪಕ್ಷಿ, ಪ್ರಾಣಿಗಳು ಸಹ ತಾವು ಪಡೆದ ಉಪಕಾರವನ್ನು ಸ್ಮರಿಸುತ್ತವೆ, ಮನುಷ್ಯ ತಾನು ಪಡೆದ ಉಪಕಾರವನ್ನು ಸ್ಮರಿಸಲೇಬೇಕು. ಇಲ್ಲದಿದ್ದರೆ, ಬುದ್ದಿವಂತ ಮಾನವ ಪಶು-ಪಕ್ಷಿ, ಪ್ರಾಣಿಗಳಿಗಿಂತ ಕನಿಷ್ಠ ಎನಿಸಿಕೊಳ್ಳುತ್ತಾನೆ. ಸಚಿವ ಎಂ.ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಕಾರ್ಯವನ್ನು ಇಲ್ಲಿನ ಜನ ತಮ್ಮ ಮುಂದಿನ ತಲೆಮಾರಿಗೆ ತಿಳಿಸಬೇಕಾದ ಮಾದರಿ ಕೆಲಸ ಮಾಡಿದ್ದಾರೆ ಎಂದರು. ಇದೇ ವೇಳೆ ಸ್ಥಳೀಯರು ಸಚಿವ ಎಂ.ಬಿ. ಪಾಟೀಲ ದಂಪತಿಗೆ ಬೆಳ್ಳಿಖಡ್ಗ ನೀಡಿ ಗೌರವಿಸಿದರು. ಸಂಗಪ್ಪ ಬೂದಿಹಾಳ, ಶಂಕರ ಕೋಟ್ಯಾಳ, ವಿಶ್ವಾನಾಥ ಕೋಟ್ಯಾಳ, ಬಾಪುರಾಯ ಕೋಟ್ಯಾಳ, ಸದಪ್ಪ ದಾಶ್ಯಾಳ, ಸಂಗಯ್ಯ ಕುಮಟೆ, ಸುರೇಶ ಗೆಣ್ಣೂರ, ಕಾಶಿಲಿಂಗ ಗುಣದಾಳ, ಪ್ರಕಾಶ ಬಡಿಗೇರ,
ಸಂಗಮೇಶ ಅಡಿಹುಡಿ, ಅರುಣ ಕೋಟ್ಯಾಳ, ಚಂದ್ರಪ್ಪ ವಡ್ಡರ, ರಾಜು ಸಿದ್ದಾಪುರ, ಸಂಗಯ್ಯ ಗಣಾಚಾರಿ, ಸಿದ್ದಣ್ಣ ಕೋಟ್ಯಾಳ, ಈರಪ್ಪ ಹಳ್ಳಿ ಇದ್ದರು. ಎ.ಬಿ. ಬೂದಿಹಾಳ ಸ್ವಾಗತಿಸಿದರು.
ಅಡವಿಸಂಗಾಪುರ, ಅತಾಲಟ್ಟಿ, ಕಣಮುಚನಾಳ, ಧನ್ಯಾಳದ ಮಹಿಳೆಯರು ಕಾಲುವೆಗೆ ಗಂಗಾಪೂಜೆ ಸಲ್ಲಿಸಿ, ಅಲ್ಲಿನ ನೀರನ್ನು ಕುಂಭದಲ್ಲಿ ತುಂಬಿಕೊಂಡು ಅಡವಿಸಂಗಾಪುರದ ಸಂಗಮೇಶ್ವರ ದೇವಸ್ಥಾನಕ್ಕೆ ತೆರಳಿ ಜಲಾಭಿಷೇಕ ನಡೆಸಿದರು.