ಬಜಪೆ: ಮಳವೂರು ಗ್ರಾ.ಪಂ. ವ್ಯಾಪ್ತಿಯ ಕೆಂಜಾರು ಗ್ರಾಮದ ಪೇಜಾವರ, ಪೊರ್ಕೋಡಿ ದೇವಸ್ಥಾನ, ತತ್ತಾಡಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಈ ವರ್ಷ ಮಳೆ ಬಾರದ ಕಾರಣ ಈ ಪ್ರದೇಶದ ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಈ ಪ್ರದೇಶಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಇನ್ನೂ ಕೆಲವೆಡೆ ನೀರಿನ ಪೈಪ್‌ಗ್ಳು ಹಾಗೂ ಓವರ್ ಹೆಡ್ ಟ್ಯಾಂಕ್‌ನ ಸಮರ್ಪಕ ನಿರ್ವಹಣೆಯಿರದೆ ನೀರಿನ ಸಮಸ್ಯೆ ಎದುರಾಗಿದೆ.
ಪೊರ್ಕೋಡಿ ದೇವಸ್ಥಾನ ಪ್ರದೇಶದ ಸುಮಾರು 20 ಮನೆಗಳಿಗೆ ನೀರಿನ ಸಮಸ್ಯೆ ಇದ್ದು, ಇಲ್ಲಿ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಈ ಬಾರಿ ಪೈಪ್‌ಲೈನ್ ಮಾಡಲಾಗಿದೆಯಾದರೂ ಸಂಪರ್ಕವಾಗಿಲ್ಲ. ಈಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ತತ್ತಾಡಿ ಪ್ರದೇಶದ 30 ಮನೆಗಳಿಗೆ ನೀರಿನ ಸಮಸ್ಯೆ ಇದ್ದು, ಇಲ್ಲಿನ ಜಿಲ್ಲಾ ಪಂಚಾಯತ್‌ನಿಂದ ಟ್ಯಾಂಕ್ ನಿರ್ಮಾಣ ಆಗುತ್ತಿದೆ.ಪೈಪ್‌ಲೈನ್ ಅಗಿದೆ. ಖಾಸಗಿ ಬಾವಿಯಲ್ಲಿ ನೀರು ಇಲ್ಲದ ಕಾರಣ ಟ್ಯಾಂಕರ್‌ನಿಂದ ನೀರು ಸರಬರಾಜಾಗುತ್ತಿದೆ.
ಪೇಜಾವರದ 30 ಮನೆಗಳಿಗೆ ನೀರಿನ ಸಂಪರ್ಕಕ್ಕೆ ಟ್ಯಾಂಕ್ ಹಾಗೂ ಪೈಪ್‌ಲೈನ್ ಅಗಿದ್ದು, ಸಂಪರ್ಕ ಮಾತ್ರ ಬಾಕಿ ಇದೆ. ಮಳವೂರು ಡ್ಯಾಂನ ನೀರು ನೀಡಲು ಈಗ ಮರವೂರಿನ ರೈಲ್ವೇ ಹಳಿಯ ಬದಿಯಿಂದ ಪೈಪ್ ಹಾಕಲಾಗಿದೆ. ಇನ್ನು ಒಂದು ವಾರದೊಳಗೆ ಡ್ಯಾಂನ ನೀರು ಸಂಪರ್ಕ ನೀಡಲಾಗುತ್ತದೆ. ಇಲ್ಲಿಯೂ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲಾಗುತ್ತದೆ. ಕರಂಬಾರು ಬದ್ರಿಯಾ ಮಸೀದಿ, ಆಂತೋನಿ ಕಟ್ಟೆ ಚರ್ಚ್ ಬಳಿ, ಅಂಬೇಡ್ಕರ್ ನಗರದಲ್ಲಿ ಕೊಳವೆಬಾವಿಯಲ್ಲಿ ಈಗ ನೀರಿಲ್ಲ. ಇನ್ನೂ 15 ದಿನಗಳಲ್ಲಿ ಮಳೆ ಬಾರದಿದ್ದರೆ ಇಲ್ಲಿಯೂ ಸಮಸ್ಯೆ ಬರಬಹುವುದು.
ಎರಡು ದಿನಕ್ಕೊಮ್ಮೆ ನೀರು
– ಗಣೇಶ್ ಅರ್ಬಿ, ಅಧ್ಯಕ್ಷರು, ಮಳವೂರು ಗ್ರಾ.ಪಂ.
ಗ್ರಾ.ಪಂ. ವ್ಯಾಪ್ತಿಯ ಪ್ರದೇಶಗಳಿಗೆ ಪ್ರತಿ ಮನೆಗೆ ಸುಮಾರು 250 ಲೀಟರ್‌ನಂತೆ ಎರಡು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಸರಬರಾಜನ್ನು ಮಾಡಲಾಗುತ್ತಿದೆ. ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಇಲ್ಲದಿರುವುದು ಪಂಚಾಯತ್‌ಗೆ ನೀರಿನ ಸಮಸ್ಯೆ ಎದುರಾಗಿದೆ.
ಜಿಲ್ಲಾಧಿಕಾರಿಗೆ ಮನವಿ
– ವೆಂಕಟ್ರಮಣ ಪ್ರಕಾಶ್, ಪಿಡಿಒ, ಮಳವೂರು ಗ್ರಾಮ ಪಂಚಾಯತ್
ಕೆಂಜಾರಿನ ಪ್ರದೇಶದಲ್ಲಿ ನೀರಿನ ಸಮಸ್ಯೆ ಇದ್ದು ಇಲ್ಲಿ 6ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಮಳವೂರು ವೆಂಟೆಡ್ ಡ್ಯಾಂನಿಂದ ನೀರು ಸರಬರಾಜಿಗಾಗಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆ.
ಸುಬ್ರಾಯ ನಾಯಕ್, ಎಕ್ಕಾರು