ಕಾಸರಗೋಡು: ಜಲ ಸಂರಕ್ಷಣೆಯ ಕೂಗು ಎಲ್ಲೆಲ್ಲೂ ಕೇಳಿಬರುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರಕಾರ ವಿವಿಧ ಯೋಜನೆ ಗಳನ್ನು ಹಮ್ಮಿಕೊಂಡಿದೆ. ಮುಂದಿನ ತಲೆಮಾರಿಗೆ ನೀರನ್ನು ಉಳಿಸಬೇಕಾದಲ್ಲಿ ನಾವು ಈಗಿನಿಂದಲೇ ಜಲಸಂರಕ್ಷಣೆ ಮಾಡಬೇಕು ಎಂಬ ಅರಿವು ಜನಸಾಮಾನ್ಯರಿಗೆ ಬರಬೇಕಿದೆ.
ಕಾಸರಗೋಡು ಜಿಲ್ಲೆಯ ಕುಂಬಾxಜೆ ಗ್ರಾಮ ಪಂಚಾಯತ್‌ನ 12ನೇ ವಾರ್ಡಿನ ಅಗಲ್ಪಾಡಿ ಸಮೀಪ ಪಂಜರಿಕೆ ಚಂದ್ರಮೋಹನ್ ಭಟ್ ಅವರ ಮನೆಯವರು ಜಲಸಂರಕ್ಷಣೆಯ ನಿಟ್ಟಿನಲ್ಲಿ ಬೃಹತ್ ಯೋಜನೆ ಯೊಂದಕ್ಕೆ ಕೈಹಾಕಿದ್ದಾರೆ. ಪರಂಪರಾಗತ ಕೃಷಿಕ ಕುಟುಂಬ ದಿಂದ ಬಂದ ಚಂದ್ರಮೋಹನ್ ಭಟ್ ಅವರ ಕೃಷಿ ಭೂಮಿಯಲ್ಲಿ ದೊಡ್ಡ ಕೆರೆಯೊಂದಿದೆ. ಪ್ರಾಕೃತಿಕವಾದ ಪ್ರದೇಶದಲ್ಲಿ ನೀರು ಕಟ್ಟಿ ನಿಲ್ಲುವಂತಹ ಸ್ಥಳ ಇದು.
ಎಷ್ಟೋ ವರ್ಷಗಳ ಇತಿಹಾಸವಿರುವ ಈ ಕೆರೆ ಯನ್ನು “ಬಿಲ್ಲಾರಕೋಡಿ’ ಎಂಬ ಹೆಸರಿನಿಂದ ಕರೆಯ ಲಾಗುತ್ತದೆ. ಈ ಕೆರೆಯಿಂದಲೇ ಕೃಷಿ ಭೂಮಿಗೆ ನೀರುಣಿಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯೂ ಇಲ್ಲಿ ನಡೆದಿತ್ತು. ಈ ಕೆರೆಯಲ್ಲಿ ನೀರಿರುವಷ್ಟು ಸಮಯ ಪರಿಸರದ ಅನೇಕ ಮನೆಗಳ ಬಾವಿ, ಕೊಳವೆ ಬಾವಿ, ಸಣ್ಣ ಸಣ್ಣ ಕೆರೆಗಳಲ್ಲಿ ನೀರಿನ ಲಭ್ಯತೆ ಇರುತ್ತದೆ.
ಚಂದ್ರಮೋಹನ್ ಭಟ್ ಅವರ ಮೂವರು ಪುತ್ರರಲ್ಲಿ ಕಿರಿಯವರು ಪ್ರವೀಣ್ ಕುಮಾರ್. ಅವರು ಎಂ.ಎ. ಪದವೀಧರರಾಗಿದ್ದರೂ ಕೃಷಿಯಲ್ಲಿ ಅತೀವ ಆಸಕ್ತಿ ಹೊಂದಿ ತಂದೆಯ ಜತೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾಭ್ಯಾಸದ ಅನಂತರ ಎಲ್ಲರೂ ಪೇಟೆಯತ್ತ ಮುಖ ಮಾಡಿದರೆ ಪ್ರವೀಣ್ ಕುಮಾರ್ ಅವರು ಕೃಷಿಯತ್ತ ವಾಲಿದರು. ಅವರು ಜಲಸಂರಕ್ಷಣೆ ತನ್ನ ಜವಾಬ್ದಾರಿ ಎಂದು ಅರಿತು ಕೆರೆಯತ್ತ ತಮ್ಮ ಚಿತ್ತವನ್ನು ಹರಿಸಿದರು. ಪ್ರಸ್ತುತ ಅವರ ಕೃಷಿ ತೋಟದಲ್ಲಿ ಅಡಿಕೆ, ತೆಂಗು, ಬಾಳೆ, ಕರಿಮೆಣಸು, ಜೇನುಕೃಷಿಯನ್ನು ಮಾಡುತ್ತಿದ್ದಾರೆ. ಎಳನೀರು (ಬೊಂಡ) ಆದಾಯ ಪಡೆಯುವ ಉದ್ದೇಶದಿಂದ “ಚಾವಕ್ಕಾಡ್ ಓರೆಂಜ್ ಡ್ವಾರ್ಫ್’ (ಎಳನೀರು) ತಳಿಯ 100 ತೆಂಗಿನ ಗಿಡಗಳನ್ನು ತಂದು ನೆಟ್ಟಿದ್ದಾರೆ. ಗೇರುಬೀಜದ ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿ 500 ಗಿಡಗಳನ್ನು ನೆಡಲಾಗಿದೆ.
ಪಾಳುಬಿದ್ದ ಕೆರೆಯನ್ನು ಜೆಸಿಬಿ ಯಂತ್ರದ ಮೂಲಕ ಸ್ವತ್ಛಗೊಳಿಲಾರಂಭಿಸಿದರು. ಕೆರೆಯನ್ನು ಅಗೆದು ಆಳ ಮಾಡಿಸಿದರು. ಒಟ್ಟು 50 ಮೀಟರ್ ಉದ್ದ ಹಾಗೂ 50 ಮೀಟರ್ ಅಗಲದಲ್ಲಿ ನೀರು ನಿಲ್ಲುವಂತೆ ಮಾಡಲಾಯಿತು. ಮೊದಲು 5 ಮೀಟರುಗಳಷ್ಟಿದ್ದ ಕೆರೆಯ ಆಳವನ್ನು ಈಗ 12 ಮೀಟರಿಗೆ ಹೆಚ್ಚಿಸಲಾಗಿದೆ. ಅರ್ಧ ಇಂಚಿನಷ್ಟಿದ್ದ ನೀರಿನ ಒರತೆಯೊಂದು ಆಳಕ್ಕೆ ಹೋದಾಗ 2 ಇಂಚಿನಷ್ಟು ಹೆಚ್ಚು ಬರತೊಡಗಿತು. ಇದರಿಂದಾಗಿ ಕಾಮಗಾರಿಗೆ ತೊಡಕು ಉಂಟಾಯ್ತು. ಕೆರೆಯ ಹೂಳೆತ್ತುವ ಸಂದರ್ಭದಲ್ಲಿ ಮುರಿದು ಬಿದ್ದ ಹಳೆಕಾಲದ ಮರವೊಂದು ಸಿಕ್ಕಿತ್ತು. ಪ್ರಸ್ತುತ ಜೀವಿಸಿರುವ ಯಾರಿಗೂ ಆ ಕೆರೆಯಲ್ಲೊಂದು ಮರವಿತ್ತು ಎಂಬ ಮಾಹಿತಿಯೇ ಇಲ್ಲ. ಮರವನ್ನು ನೋಡಿದ ನೆನಪೇ ಇಲ್ಲ ಸುಮಾರು 5 ಲಕ್ಷ ವೆಚ್ಚ ಈ ಕಾಮಗಾರಿಗೆ ತಗುಲಿದೆ ಎಂದು ಚಂದ್ರಮೋಹನ ಅವರು ಹೇಳುತ್ತಾರೆ.
ಪ್ರಾಚೀನವಾದ ಈ ಕೆರೆಯ ಅಭಿವೃದ್ಧಿಯ ಫಲವಾಗಿ ಈ ಬಾರಿ ಮಳೆಗಾಲ ಅರಂಭಕ್ಕೂ ಮೊದಲೇ ಕೆರೆಯಲ್ಲಿ ನೀರಿನ ಲಭ್ಯತೆ ಇತ್ತು. ತಮ್ಮ ಕೃಷಿ ಭೂಮಿಗೂ ಇದರ ನೀರನ್ನೇ ಉಪಯೋಗಿಸಿದರು. ಪರಿಸರದ ಅನೇಕ ಮನೆಗಳಿಗೂ ನೀರಿನ ತತ್ವಾರ ಇಲ್ಲದಾಯಿತು.
ಅಂತರ್ಜಲ ಮಟ್ಟ ಏರಿಕೆಯ ಒಂದೇ ಉದ್ದೇಶ ವನ್ನಿಟ್ಟುಕೊಂಡು ಈ ಕೆಲಸಕ್ಕೆ ಕೈ ಹಾಕಿದ್ದೇವೆ. ಕೃಷಿ ದೇಶದ ಬೆನ್ನೆಲು. ಅದರ ಅಭಿವೃದ್ಧಿಯೇ ನನ್ನ ಗುರಿ. ಸಮರ್ಪಕವಾದ ನಿರ್ವಹಣೆಯಿಂದ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಬಹುದು. ಮುಂದಿನ ದಿನಗಳಲ್ಲಿ ಉತ್ತಮ ಪರಿಸರ, ಶುಭ್ರವಾದ ಜಲ, ಪರಿಶುದ್ಧ ವಾಯು ಲಭಿಸಿದರೆ ಅದಕ್ಕಿಂತ ದೊಡ್ಡ ಸಂಪತ್ತು ಬೇರಿಲ್ಲ.
– ಚಂದ್ರಮೋಹನ ಭಟ್, ಪಂಜರಿಕೆ
ಇಂತಹ ಒಂದು ಅಭೂತಪೂರ್ವ ಕೆರೆಯು ನನ್ನ ವಾರ್ಡ್‌ನಲ್ಲಿರುವುದು ಹೆಮ್ಮೆ. ನಬಾರ್ಡಿನ ವತಿಯಿಂದ ಜಲಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಸಂದರ್ಭದಲ್ಲಿ ಇಂತಹ ಕೆರೆಯ ಸಂರಕ್ಷಣೆಗೆ ಒತ್ತು ನೀಡಿರುವುದು ಜನಸಾಮಾನ್ಯರಿಗೂ ಸ್ಫೂರ್ತಿ ತರುವಂತಹದ್ದು.
– ಶಶಿಧರ ತೆಕ್ಕೆಮೂಲೆ, ಸದಸ್ಯರು, ಕುಂಬಾxಜೆ ಗ್ರಾಮ ಪಂಚಾಯತ್
ಹಿಂದುಳಿದ ಕುಂಬಾxಜೆ ಗ್ರಾಮ ಪಂಚಾಯತ್‌ನಲ್ಲಿ ಪ್ರಕೃತಿದತ್ತವಾದ ಇಂತಹ ಒಂದು ಸರೋವರ ಸಮವಾದ ಕೆರೆಯಿರುವುದು ವಿಶೇಷತೆಯಾಗಿದೆ. ಊರಿನ ಹಲವಾರು ಕೃಷಿಕ ಕುಟುಂಬಗಳಿಗೆ ಸದುಪ ಯೋಗವಾಗಲಿರುವ ಈ ಕೆರೆಯನ್ನು ಇನ್ನಷ್ಟು ವಿಶಾಲಗೊಳಿಸಿ ಕೃಷಿಗೆ ಮಾತ್ರವಲ್ಲ ಗ್ರಾಮ ಪಂಚಾಯತ್‌ನ ಕೆಲವು ವಾರ್ಡುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬಹುದಾದ ಯೋಜನೆಗೆ ಯೋಗ್ಯವಾದ ಕೆರೆ ಇದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀರಾವರಿ ಇಲಾಖೆಗಳು ಗಮನಹರಿಸುವುದರೆ ಯೋಗ್ಯ
– ಆನಂದ ಕೆ. ಮವ್ವಾರು,
ಉಪಾಧ್ಯಕ್ಷರು, ಕುಂಬಾxಜೆ ಗ್ರಾಮ ಪಂಚಾಯತ್