Advertisement

ತ್ಯಾಜ್ಯ ವಿಲೇವಾರಿ ಮಾದರಿ ಘಟಕ ಡಿ.22ರಂದು ಉದ್ಘಾಟನೆ 

12:30 PM Dec 16, 2017 | Team Udayavani |

ತೆಂಕಮಿಜಾರು: ಮೂಲ್ಕಿ -ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಮೂಡಬಿದಿರೆ ಹೋಬಳಿಯಲ್ಲಿ ತೆಂಕಮಿಜಾರು ಗ್ರಾಮ ಪಂಚಾಯತ್‌ ಸ್ವಚ್ಛ ಗ್ರಾಮ ಪಂಚಾಯತ್‌ ಆಗುವತ್ತ ದಾಪುಗಾಲು ಇಡುತ್ತಿದೆ. ಹೋಬಳಿಯ ಪ್ರಥಮ ಹಾಗೂ ಮಂಗಳೂರು ತಾಲೂಕಿನ ಮೂರನೇ ತ್ಯಾಜ್ಯ ಘಟಕ ಡಿ. 22ರಂದು ಉದ್ಘಾಟನೆಗೆ ಸಜ್ಜಾಗಿದೆ. ಈ ಘಟಕಕ್ಕೆ ಒಟ್ಟು 20 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಜಿಲ್ಲಾ ಪಂಚಾಯತ್‌ ಶಿಫಾರಸಿನಂತೆ ಬಿಡುಗಡೆ ಮಾಡಿದೆ. 2012ರಲ್ಲಿ ತೆಂಕ ಮಿಜಾರು ಗ್ರಾಮದ ಸರ್ವೆ ಸಂಖ್ಯೆ 295/1ರಲ್ಲಿ ಒಂದು ಎಕರೆ ಜಾಗ ಕಾದಿರಿಸಲಾಗಿತ್ತು.

Advertisement

2013ರಲ್ಲಿ ಪಂಚಾಯತ್‌ ಅನುದಾನದಿಂದ 1ಲಕ್ಷ ರೂ. ವೆಚ್ಚದಲ್ಲಿ ತಾಜ್ಯ ಘಟಕದ ಸ್ಥಳ ಸಮತಟ್ಟು ಹಾಗೂ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗಿತ್ತು. 2014ರಲ್ಲಿ 20 ಲಕ್ಷ ರೂ. ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯತ್‌ ಅನುಮೋದನೆ ನೀಡಿತು. 3.45 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ವಾಹನ ಖರೀದಿಸಲಾಯಿತು.

ಮೊದಲ ಹಂತಕ್ಕೆ ಮುನ್ನುಡಿ
ಪಂಚಾಯತ್‌ ವ್ಯಾಪ್ತಿಯಲ್ಲಿ ಎರಡು ಕಂದಾಯ ಗ್ರಾಮಗಳಿವೆ. ಬಡಗ ಮಿಜಾರು ಮತ್ತು ತೆಂಕ ಮಿಜಾರು ಗ್ರಾಮಗಳಲ್ಲಿ 2,000ಕ್ಕಿಂತ ಅಧಿಕ ಮನೆಗಳಿವೆ. ಮೊದಲ ಹಂತವಾಗಿ ಮಿಜಾರು -ತೋಡಾರು ಪರಿಸರದ ಸುಮಾರು 500 ಮನೆಗಳ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು, ಇದಕ್ಕಾಗಿ ಪಂಚಾಯತ್‌ ವತಿಯಿಂದಲೇ ಸಿಬಂದಿ ನಿಯೋಜಿಸಲು ತೀರ್ಮಾನಿಸಲಾಯಿತು. ಕಸ ಸಂಗ್ರಹಕ್ಕಾಗಿ ಗ್ರಾಮಸ್ಥರ ಸಭೆ ಕರೆದು ಮಾಹಿತಿ ನೀಡಲಾಯಿತು. ಈ ಬಗ್ಗೆ ಜಾಗೃತಿ ಮೂಡಿಸಲು ಧ್ವನಿವರ್ಧಕದ ಮೂಲಕವೂ ಪ್ರಚಾರ ಮಾಡಲಾಗುತ್ತಿದೆ. ತ್ಯಾಜ್ಯ ಘಟಕಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಕ್ಕಾಗಿ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದು, 3.50 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ.

ಸ್ವಚ್ಛ ಮಿಜಾರು
2012ರಿಂದ ‘ಸ್ವಚ್ಛ ಮಿಜಾರು’ ಟ್ಯಾಗ್‌ ಲೈನ್‌ನಲ್ಲಿ ಸಂಘ ಸಂಸ್ಥೆಗಳು, ಯುವಕ ಸಂಘ, ರಿಕ್ಷಾ ಚಾಲಕ -ಮಾಲಕರು ಒಟ್ಟು ಸೇರಿ ಗ್ರಾಮ ಸ್ವಚ್ಛತೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವರ ನೇತೃತ್ವ, ವಿವೇಕ ಆಳ್ವರ ಸಹಕಾರ, ಮೈಟ್‌ ಕಾಲೇಜಿನ ರಾಜೇಶ್‌ ಚೌಟ ಸಹಕಾರದಿಂದ ಸ್ವಚ್ಛ ಮಿಜಾರು ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. 

ಮಾದರಿ ಘಟಕ
ತ್ಯಾಜ್ಯ ಘಟಕದ ಕಟ್ಟಡವನ್ನು 5 ಭಾಗಗಳನ್ನಾಗಿ ವಿಂಗಡಿಸಲಾಗಿದೆ. ನಾಲ್ಕು ಕೋಣೆಗಳಲ್ಲಿ ಹಸಿ ತ್ಯಾಜ್ಯವನ್ನು ಸಂಗ್ರಹಿಸಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುವುದು. ಒಂದು ಕೋಣೆ ಪ್ಲಾಸ್ಟಿಕ್‌ ಸಂಗ್ರಹಕ್ಕೆ ಮೀಸಲು. ಘಟಕದಲ್ಲಿ ಒಂದು ಕೋಣೆಯನ್ನು ಕಾರ್ಮಿಕರ ವಸತಿಗೆ ನಿರ್ಮಿಸಲಾಗಿದೆ. ನೀರು, ವಾಹನ ನಿಲುಗಡೆಗಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next