Advertisement
ಇದರ ಬೆನ್ನಲ್ಲೇ ಬಲಿಷ್ಠ ರಾಷ್ಟ್ರವಾದ ಇಸ್ರೇಲ್ ಕೂಡ ಯುದ್ಧ ಘೋಷಿಸಿದೆ. ಗಾಜಾ ಪಟ್ಟಿಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ಆರಂಭಿಸಿದೆ. ಇತ್ತ ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ರಕ್ತದಾಹಕ್ಕೆ ಅಮಾಯಕರು ಬಲಿಯಾದಂತೆಯೇ, ಅತ್ತ ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ನ ಕ್ಷಿಪಣಿಗಳ ಮಳೆಗೆ ನೂರಾರು ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ ಅಂದರೆ ಹಾಗೆಯೇ- ಯಾರದ್ದೋ ರಕ್ತದಾಹಕ್ಕೆ ಮತ್ಯಾರೋ ಬಲಿಯಾಗುವುದು. ಯಾರದ್ದೋ ದ್ವೇಷದ ಬೆಂಕಿಗೆ ಮತ್ಯಾರೋ ಸುಟ್ಟು ಹೋಗುವುದು.
Related Articles
Advertisement
ಗಾಜಾದಲ್ಲಿ ಇಸ್ರೇಲ್ ನಡೆಸಿರುವ ಕ್ರೌರ್ಯ, ಅಲ್-ಅಖಾ ಮಸೀದಿಗೆ ಸಂಬಂಧಿಸಿದ ವಿವಾದ, ಪ್ಯಾಲೆಸ್ತೀನಿಯರಲ್ಲಿ ಮನೆಮಾಡಿರುವ ಆಕ್ರೋಶ, ಇಷ್ಟು ವರ್ಷಗಳಾದರೂ ಬಗೆಹರಿಯದ ಸಮಸ್ಯೆ, ಅಸ್ತಿತ್ವಕ್ಕಾಗಿ ಹಾಗೂ ಅಧಿಕಾರಕ್ಕಾಗಿ ಹಮಾಸ್ ಉಗ್ರರು ನಡೆಸುತ್ತಿರುವ ಪ್ರಯತ್ನಗಳಷ್ಟೇ ಈಗ “ಯುದ್ಧವಾಗಿ ಸ್ಫೋಟ’ಗೊಳ್ಳಲು ಕಾರಣ ಎಂದರೆ ತಪ್ಪಾಗುತ್ತದೆ. ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಈ ಯುದ್ಧದ ಹಿಂದೆ ಪಶ್ಚಿಮ ಏಷ್ಯಾ ರಾಜಕೀಯವೂ ಮಹತ್ವದ ಪಾತ್ರ ವಹಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಪ್ರಯತ್ನದ ಫಲವೆಂಬಂತೆ, ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ಸ್ನೇಹ ಬೆಳೆಯುತ್ತಿದೆ. ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ನಡೆದಿರುವ ಐತಿಹಾಸಿಕ ಪ್ರಕ್ರಿಯೆ ಸಹಜವೆಂಬಂತೆ ಹಮಾಸ್‌ಗೆ ರುಚಿಸುತ್ತಿಲ್ಲ. ಸೌದಿಯಂಥ ಇಸ್ಲಾಮಿಕ್ ರಾಷ್ಟ್ರಗಳು ತಮ್ಮ ಪರವಿರಬೇಕು ಎಂದು ಪ್ಯಾಲೆಸ್ತೀನಿಯರು ಬಯಸುತ್ತಿದ್ದಾರೆ. ಆದರೆ ತಮ್ಮ ಇಚ್ಛೆಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿರುವುದು ಪ್ಯಾಲೆಸ್ತೀನಿಯರ ಗಾಯಕ್ಕೆ ಬರೆ ಎಳೆದಂತಾಗಿದೆ.
“ಇಸ್ರೇಲ್ ಕೆಣಕಿ ಗೆದ್ದವರಿಲ್ಲ’ ಎಂಬುದು ಗೊತ್ತಿದ್ದರೂ ಅಂಥ ಬಲಿಷ್ಠ ರಾಷ್ಟ್ರದ ಮೇಲೆ ಏಕಾಏಕಿ ಹಮಾಸ್ ದಾಳಿ ನಡೆಸಿರುವುದರ ಹಿಂದೆ ಇರಾನ್‌ನ ಕೈವಾಡವಿರುವ ಸಾಧ್ಯತೆ ಹೆಚ್ಚಿದೆ. ಪ್ಯಾಲೆಸ್ತೀನ್‌ನ ಬಂಡುಕೋರರ ಪೈಕಿ ಹಮಾಸ್ ಅಷ್ಟೇನೂ ಬಲಿಷ್ಠವಾಗಿಯೂ ಇದ್ದಿರಲಿಲ್ಲ. ಆದರೂ ಶನಿವಾರದ ದಾಳಿಯು ಇಸ್ರೇಲ್‌ನ ಇತಿಹಾಸದಲ್ಲೇ ಅತೀದೊಡ್ಡ ಗುಪ್ತಚರ ವೈಫಲ್ಯ ಎಂದೇ ಹೇಳಬಹುದು. ಇವೆಲ್ಲದರ ನಡುವೆಯೂ ಸೌದಿ ಅರೇಬಿಯಾ ಮಾತ್ರ ಯಾರ ಕಡೆಯೂ ವಾಲದೇ, ಶಾಂತಿ ಮಂತ್ರ ಪಠಿಸುವ ಮೂಲಕ ಜಾಣ್ಮೆ ಪ್ರದರ್ಶಿಸಿರುವುದು ಗಮನಿಸಬೇಕಾದ ಸಂಗತಿ.ಇನ್ನು, ಭಾರತದ ವಿಚಾರಕ್ಕೆ ಬಂದರೆ ಹಿಂದಿನಿಂದಲೂ ಯಾವುದೇ ಎರಡು ದೇಶಗಳ ನಡುವೆ ಯುದ್ಧ ನಡೆದಾಗ ಭಾರತವು ಯಾರ ಪರವೂ ವಹಿಸದೇ, ಅಲಿಪ್ತ ನೀತಿ ಅನುಸರಿಸಿಕೊಂಡು ಬಂದಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲೂ ಪಾಶ್ಚಾತ್ಯ ರಾಷ್ಟ್ರಗಳ ತೀವ್ರ ಒತ್ತಡವಿದ್ದರೂ ಭಾರತ ತನ್ನ ನಿಷ್ಪಕ್ಷ ನಿಲುವಿನಲ್ಲಿ ರಾಜಿ ಮಾಡಿಕೊಂಡಿಲ್ಲ. ಆದರೆ ಈಗ ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಭಾರತ ಖಂಡಿಸಿರುವುದು ಮಾತ್ರವಲ್ಲ, ತಾವು ಇಸ್ರೇಲ್ ಬೆಂಬಲಕ್ಕಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಿದೆ. ಇದಕ್ಕೆ ಕಾರಣ, ಇಸ್ರೇಲ್ ಮೇಲೆ ಯುದ್ಧ ಸಾರಿರುವುದು ಹಮಾಸ್ ಎಂಬ ಉಗ್ರ ಸಂಘಟನೆ. ಭಯೋತ್ಪಾದನೆಯು ಇಡೀ ಜಗತ್ತಿಗೆ ಅಂಟಿರುವ ಶಾಪ. ಭಾರತ ಕೂಡ ಭಯೋತ್ಪಾದನೆಯ ಕರಾಳ ಮುಖವನ್ನು ನೋಡಿರುವ ಕಾರಣ, ಉಗ್ರವಾದದ ವಿರುದ್ಧ ಧ್ವನಿ ಎತ್ತಬೇಕಾಗಿರುವುದು ಇಂದಿನ ಅಗತ್ಯವೂ ಹೌದು. ಆ ನಿಟ್ಟಿನಲ್ಲಿ ಭಾರತದ ನಿಲುವನ್ನು ಒಪ್ಪಿಕೊಳ್ಳಬಹುದು. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಜತೆಗಿನ ಭಾರತದ ನಂಟು ಬಲಗೊಳ್ಳುತ್ತಿದೆ. ರಾಜತಾಂತ್ರಿಕ ಮತ್ತು ಆರ್ಥಿಕ ಬಾಂಧವ್ಯವನ್ನು ಆಳಗೊಳಿಸುವ ನಿಟ್ಟಿನಲ್ಲಿ ಭಾರತ, ಇಸ್ರೇಲ್, ಯುಎಇ ಮತ್ತು ಅಮೆರಿಕ ಸೇರಿ ಐ2ಯು2 ಎಂಬ ಸಮೂಹವೊಂದನ್ನು ರಚಿಸಿಕೊಂಡಿವೆ. ಇತ್ತೀಚೆಗೆ ಮುಕ್ತಾಯವಾದ ಜಿ20 ಶೃಂಗದ ವೇಳೆ ಭಾರತ- ಮಧ್ಯಪ್ರಾಚ್ಯ- ಯುರೋಪ್ ಆರ್ಥಿಕ ಕಾರಿಡಾರ್‌ಗೂ ಹಸುರು ನಿಶಾನೆ ದೊರೆತಿದೆ. ಅದೇನೇ ಇದ್ದರೂ ರಾಜತಾಂತ್ರಿಕ ಸಂಬಂಧಗಳು, ಅಂತಾರಾಷ್ಟ್ರೀಯ ವಹಿವಾಟುಗಳು, ವಾಣಿಜ್ಯ-ವ್ಯಾಪಾರ ಬಾಂಧವ್ಯಗಳಾಚೆಗೆ ದೃಷ್ಟಿ ಹಾಯಿಸಿದರೆ, ಯುದ್ಧ ಮನುಕುಲದ ವೈರಿ. “ನಾವು ಯುದ್ಧವನ್ನು ಕೊನೆಗಾಣಿಸಬೇಕು, ಇಲ್ಲವೆಂದಾದಲ್ಲಿ ಯುದ್ಧವೇ ನಮ್ಮನ್ನು ಕೊನೆಗಾಣಿಸುತ್ತದೆ’ ಎಂಬ ಜಾನ್. ಎಫ್. ಕೆನಡಿ ಅವರ ಮಾತಿನಂತೆ, ಯುದ್ಧದ ಮೂಲಕ ಜಗತ್ತಿನ ಯಾವುದೇ ಸಮಸ್ಯೆಗೆ ಇದುವರೆಗೆ ಪರಿಹಾರ ದೊರಕಿಲ್ಲ. ಎಷ್ಟೇ ಬಲಿಷ್ಠ ದೇಶವಾದರೂ ಸಮರಕ್ಕೆ ಹೊರಟರೆ ಆ ದೇಶದ ಸಂಪತ್ತು ಕರಗಿ ಹೋಗುತ್ತದೆಯೇ ಹೊರತು ಗೆದ್ದು ಬೀಗುವುದಕ್ಕೆ ಏನೂ ಉಳಿದಿರುವುದಿಲ್ಲ. ಇಲ್ಲಿಯೂ ಅಷ್ಟೇ ಇಸ್ರೇಲ್ ಆಗಲೀ, ಹಮಾಸ್ ಆಗಲಿ, ಯುದ್ಧದಿಂದ ಏನೂ ಸಾಧಿಸುವುದಿಲ್ಲ. ಪರಸ್ಪರರ ವಿರುದ್ಧ ಯುದ್ಧ ಮಾಡಲು ಮುಂದಾಗುವುದೇ ಪರಮ ಮೂರ್ಖತನ. ಅನವಶ್ಯಕ ಒಬ್ಬರನ್ನೊಬ್ಬರು ಕೆಣಕುವ ಮೂಲಕ ದೇಶದ ಅಮಾಯಕ ಪ್ರಜೆಗಳ ಜೀವವನ್ನು ಅಪಾಯಕ್ಕೆ ತಳ್ಳುವುದಕ್ಕಿಂತ ಜಾಗತಿಕ ದುರಂತ ಇನ್ನೊಂದಿಲ್ಲ. ಹಲೀಮತ್ ಸಅದಿಯಾ