Advertisement
ಆಗಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಈ ಮಾರುಕಟ್ಟೆಗೆ ಇಡಲಾಗಿದೆ. 1921ರಲ್ಲಿ ಅಂದಿನ ನಗರಸಭಾ ಅಧ್ಯಕ್ಷರಾಗಿದ್ದ ಬಿ.ಕೆ.ಗರುಡಾಚಾರ್ ಅವರ ಅಧ್ಯಕ್ಷತೆಯಲ್ಲಿ ಮಾರುಕಟ್ಟೆಯ ಪ್ರಾರಂಭೋತ್ಸವ ನಡೆದಿತ್ತು. ಅಧಿಕೃತವಾಗಿ 1928ರಲ್ಲಿ ಸರ್ ಮಿರ್ಜಾ ಇಸ್ಮಾಯಿಲ್ ಅವರು ಮಾರುಕಟ್ಟೆಯನ್ನು ಉದ್ಘಾಟಿಸಿದ್ದರು.
Related Articles
Advertisement
ಕೆ.ಆರ್.ಮಾರುಕಟ್ಟೆ ಪ್ರದೇಶದಲ್ಲಿ ಒಂದು ಕಾಲದಲ್ಲಿ ಸಿದ್ಧಿಕಟ್ಟೆ ಎನ್ನುವ ಕಲ್ಯಾಣಿ ಇತ್ತು. ಸದಾ ಅದರಲ್ಲಿ ನೀರು ತುಂಬಿರುತಿತ್ತು ಎಂದು ಸ್ಮರಿಸುತ್ತಾರೆ ಇತಿಹಾಸ ತಜ್ಞರು. ಅಂತಹ ಇತಿಹಾಸ ಪ್ರಸಿದ್ಧ ಮಾರುಕಟ್ಟೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಇಂದಿಗೂ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ಇದೆ.
ಕೃಷ್ಣರಾಜೇಂದ್ರ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ತರಕಾರಿ ಹಣ್ಣು, ಹೂ, ಡ್ರೈಪ್ರೂಟ್ಸ್, ಸಿಹಿ ತಿಸಿಸು, ಬಟ್ಟೆ, ಕಟ್ಟಡ ನಿರ್ಮಾಣ ಸಾಮಗ್ರಿ, ಎಲೆಕ್ಟ್ರಾನಿಕ್ ತ್ಪನ್ನಗಳು ಸೇರಿದಂತೆ ಜೀವನವಶ್ಯಕ ವಸ್ತುಗಳೆಲ್ಲವೂ ಸಿಗುತ್ತವೆ. ಇಲ್ಲಿನ ಸಮಸ್ಯೆಗಳ ಪಟ್ಟಿಯೂ ಅಷ್ಟೇ ದೊಡ್ಡದಿದೆ.
ಈ ಮಾರುಕಟ್ಟೆಯ ವ್ಯಾಪಾರಿಗಳು ಮತ್ತು ಗ್ರಾಹಕರು ಸದಾ ಅಪಾಯದ ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಬೆಂಕಿ ಅವಘಡಗಳು ಸಂಭವಿಸಿದರೆ ತಪ್ಪಿಸಿಕೊಳ್ಳಲು ಸ್ಥಳವೇ ಇಲ್ಲ. ಪ್ರತಿದಿನ ಇಲ್ಲಿಗೆ ಅಂದಾಜು 30 ಸಾವಿರದಿಂದ 40 ಸಾವಿರ ಜನ ಬಂದು ಹೋಗುತ್ತಾರೆ.
ವಘಡ ಸಂಭವಿಸಿದರೆ ಎಲ್ಲಿ ಹೋಗಬೇಕೆಂಬ ಸೂಚನಾ ಫಲಕಗಳು ಇಲ್ಲಿ ಕಾಣಿಸುವುದಿಲ್ಲ. ಅವಘಡ ಸಂಭವಿಸಿದರೆ ಕಾಲು¤ಳಿತದ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಹೂವಿನ ವ್ಯಾಪಾರಿಗಳಿಗೆಂದೇ ನಿರ್ಮಿಸಲಾಗಿರುವ ಲಿಫ್ಟ್ಗೆ ತುಕ್ಕು ಹಿಡಿದಿದೆ.
ತ್ಯಾಜ್ಯ ಸಮಸ್ಯೆ: ನಗರದ ಮಾರುಕಟ್ಟೆಗಳಲ್ಲಿ ಅತೀ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಮಾರುಕಟ್ಟೆಗಳಲ್ಲಿ ಕೃಷ್ಣರಾಜೇಂದ್ರ ಮಾರುಕಟ್ಟೆ ಮೊದಲನೇ ಸ್ಥಾನದಲ್ಲಿದೆ. ಈ ಮಾರುಕಟ್ಟೆಯಲ್ಲಿ ಪ್ರತಿ ದಿನ ಅಂದಾಜು 500ರಿಂದ 600 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ಸಂಸ್ಕರಣೆ ಮಾಡುವುದಾಗಲಿ, ಸೂಕ್ತ ರೀತಿಯಲ್ಲಿ ವಿಂಗಡಿಸುವ ಕೆಲಸವಾಗಲಿ ಆಗುತ್ತಿಲ್ಲ.
ಬದಲಾವಣೆ ಇಲ್ಲ: ಮಾರುಕಟ್ಟೆ ಸಂಕೀರ್ಣದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಮಳಿಗೆಗಳ ತೆರವಿಗೆ ಕೋರಿ ಬೆಂಗಳೂರು ಹೂವಿನ ವ್ಯಾಪಾರಿಗಳು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಅಗ್ನಿ ಶಾಮಕ ಮತ್ತು ಆಂಬ್ಯುಲೆನ್ಸ್ ವಾಹನಗಳು ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಬಿಬಿಎಂಪಿಗೆ ಆದೇಶ ನೀಡಿತ್ತು.
ಬಿಬಿಎಂಪಿ ಸಹ ಈ ಆದೇಶ ಪಾಲಿಸಿ, ಹಲವು ಅನಧಿಕೃತ ಮಳಿಗೆಗಳನ್ನು ತೆರುವುಗೊಳಿಸಿತ್ತು. ಆದರೆ, ಒಂದೇ ವಾರದಲ್ಲಿ ಒತ್ತುವರಿ ತೆರವಾದ ಜಾಗದಲ್ಲಿ ಬೀದಿ ವ್ಯಾಪಾರಿಗಳು ಮತ್ತೆ ವ್ಯಾಪಾರ ಆರಂಭಿಸಿದರು. ಹೀಗಾಗಿ, ಒತ್ತುವರಿ ತೆರವು ಮಾಡಿದರೂ ಯಾವುದೇ ಪ್ರಯೋಜನವಿಲ್ಲ ಎನ್ನುವಂತಾಗಿದೆ.
ಮಾರ್ಷಲ್‌ಗಳು ನಾಪತ್ತೆ: ಮಾರುಕಟ್ಟೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಿದ ನಂತರ 30 ಮಾರ್ಷಲ್‌ಗಳನ್ನು ನೇಮಕ ಮಾಡಲಾಗಿತ್ತು. “ಮೂರು ಪಾಳಿಗಳಲ್ಲಿ ಈ ಮಾರ್ಷಲ್‌ಗಳು ಕೆಲಸ ಮಾಡಿ, ಮುಂದೆ ಎಂದೂ ಒತ್ತುವರಿ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುವರು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದರು. ಆದರೆ ತೆರವು ಕಾರ್ಯಚರಣೆ ಮುಗಿಯುವವರೆಗೆ ಕಾಣಿಸಿಕೊಂಡ ಮಾರ್ಶಲ್‌ಗಳು ಆ ನಂತರ ನಾಪತ್ತೆಯಾಗಿದ್ದಾರೆ.
ಅಧಿಕಾರಿಗಳಿಗೇ ಗೊತ್ತಿಲ್ಲ: ಮಾರುಕಟ್ಟೆಯಲ್ಲಿ ಇಂದಿಗೂ ಸಾಕಷ್ಟು ಅನಧಿಕೃತ ಮಳಿಗೆಗಳಿವೆ. ಆದರೆ, ಅದು ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತೇ ಇಲ್ಲ. ಒತ್ತುವರಿ ಸಮಯದಲ್ಲಿ ಅಧಿಕಾರಿಗಳು ದಾಖಲೆ ನೋಡಿಕೊಂಡು ಮಳಿಗೆಗಳನ್ನು ತೆರುವುಗೊಳಿಸಿದ್ದೇ ಇದಕ್ಕೆ ಸಾಕ್ಷಿ. ಎಷ್ಟು ಅನಧಿಕೃತ ಮಳಿಗೆಗಳಿವೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಒತ್ತುವರಿಯಾಗಿದ್ದು ಹೇಗೆ ಎನ್ನುವ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.
ಅಪಾಯಕಾರಿ ಪಾರ್ಕಿಂಗ್ ಲಾಟ್: ಕೆ.ಆರ್ ಮಾರುಕಟ್ಟೆಯಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಒಂದು ಬದಿ ಮೂತ್ರ ವಿರ್ಸಜನೆ ಮತ್ತೂಂದು ಬದಿ ಧೂಮಪಾನದ ಪ್ರದೇಶವಾಗಿ ಬದಲಾಗಿದೆ. ಸಾವಿರಾರು ವಾಹನಗಳು ನಿಲ್ಲುವ ಪ್ರದೇಶದಲ್ಲಿ ಧೂಮಪಾನ ಮಾಡುವವರನ್ನು ಪ್ರಶ್ನಿಸುವವರೇ ಇಲ್ಲ. ಬೆಂಕಿ ಅವಘಡ ಸಂಭವಿಸಿದರೆ ಅದನ್ನು ನಂದಿಸುವ ಸಾಧನಗಳೂ ಇಲ್ಲಿಲ್ಲ. ಇನ್ನು ಮಳೆ ಬಂದರೆ ಪಾರ್ಕಿಂಗ್ ತಾಣ ಈಜು ಕೊಳದಂತಾಗುತ್ತದೆ.
ಬೆಂಕಿ ಆರಿಸಲು ಸಾಧನಗಳಿಲ್ಲ: ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಂದಿಸಲು ಇರಬೇಕಾದ ಸಣ್ಣ ಸಾಧನ ಸಹ ಕೆ.ಆರ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಮಾರುಕಟ್ಟೆ ಅಭಿವೃದ್ಧಿ ಪಡಿಸುವುದಾಗಿ ಬಿಬಿಎಂಪಿ ಹೇಳಿದೆಯಾದರೂ ಅದು ಕಾರ್ಯರೂಪಕ್ಕೆ ಬರುವುದಕ್ಕೆ ವರ್ಷಗಳೇ ಬೇಕು.
ಸ್ಮಾರ್ಟ್ ಸಿಟಿ ಅಡಿ ಅಭಿವೃದ್ಧಿ: ಸ್ಮಾರ್ಟ್ ಸಿಟಿ ಯೋಜನೆಯಡಿ, 51 ಕೋಟಿ ವೆಚ್ಚದಲ್ಲಿ ಕೃಷ್ಣರಾಜೇಂದ್ರ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಮುಂದಾಗಿದೆ. ಈ ಯೋಜನೆ ಪೂರ್ಣಗೊಳ್ಳಲು ಕನಿಷ್ಠ 30 ತಿಂಗಳು (ಎರಡುವರೆ ವರ್ಷ) ಬೇಕು. ಬಳಿಕವಾದರೂ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾರುಕಟ್ಟೆ ಅಭಿವೃದ್ಧಿಯಾಗಲಿದೆ. ಪಾರಂಪರಿಕ ಕಟ್ಟಡದ ಮೂಲ ರಚನೆ ಉಳಿಸಿಕೊಂಡೇ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣದಿಂದ ಕೆ.ಆರ್. ಮಾರುಕಟ್ಟೆಗೆ ಸ್ಕೈವಾಕ್, ವ್ಯಾಪಾರಿಗಳಿಗೆ ಲಿಫ್ಟ್ ಸೌಲಭ್ಯ ಬರಲಿದ್ದು, ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ.-ಸುರೇಶ್, ಸ್ಮಾಟ್‌ಸಿಟಿ ಯೋಜನೆ ಮುಖ್ಯ ಎಂಜಿನಿಯರ್ * ಹಿತೇಶ್ ವೈ