Advertisement

ಗೋಡೆ ಗಟ್ಟಿ ಮನೆ ಜಟ್ಟಿ!

06:00 AM Aug 13, 2018 | |

ನಿವೇಶನ ದೊಡ್ಡದಿರುವವರು ಸಾಂಪ್ರದಾಯಿಕವಾದ ದಪ್ಪನೆಯ ಅಂದರೆ ಸುಮಾರು ಒಂದೂವರೆ ಇಟ್ಟಿಗೆ ಗೋಡೆ – ಹದಿಮೂರುವರೆ ಇಂಚಿನ ಗೋಡೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಟೊಳ್ಳು ಇಟ್ಟಿಗೆ ಇಲ್ಲವೇ “ರ್ಯಾಟ್‌ ಟ್ರಾಪ್‌ ಬಾಂಡ್‌’ ಅಂದರೆ ಇಟ್ಟಿಗೆಯನ್ನು ಗೋಡೆಯಲ್ಲಿ ಇಟ್ಟು ಮಧ್ಯೆಮಧ್ಯೆ ಸಂದಿ ಬರುವಂತೆ ಉತ್ತರದ ಗೋಡೆಗಳನ್ನು ಕಟ್ಟಿಕೊಳ್ಳಬಹುದು. 

Advertisement

ತಲೆ ಮೇಲೊಂದು ಸೂರು ಆದರೆ ಸಾಕು ಎಂದು ಹೇಳುವ ಮಾತು ಎಲ್ಲೆಡೆಯೂ ಪ್ರಚಲಿತವಿದೆ.  ಆದರೆ ಮನೆಗೆ ಸೂರಿದ್ದರೆ ಸಾಲದು. ಸೂರಿನಷ್ಟೇ ಗೋಡೆಗಳೂ ಅಗತ್ಯವಾಗಿರುತ್ತವೆ. ಸಾಮಾನ್ಯವಾಗಿ ಗೋಡೆಗಳನ್ನು ಮೊದಲು ನಿರ್ಧರಿಸಿಯೇ ನಂತರ ಅದರ ಮೇಲೊಂದು ಚಾವಣಿಯನ್ನು ಹಾಕುವುದು. ಗೋಡೆಗಳು ಸೂರಿಗೆ ಆಧಾರವಾಗಿರುವುದರ ಜೊತೆಗೆ, ನಮಗೆ ವಿವಿಧ ರೀತಿಯಲ್ಲಿ ರಕ್ಷಣೆಯನ್ನು ಒದಗಿಸುತ್ತವೆ. ಕಳ್ಳರು ಕನ್ನ ಹಾಕುವುದು ಗೋಡೆಗಳಿಗೇ! ಇತ್ತೀಚಿನ ದಿನಗಳಲ್ಲಿ ಗೋಡೆಗಳು ಸಿಮೆಂಟ್‌ನಿಂದ ಕಟ್ಟಲಾಗುತ್ತಿದೆ. ಅದೇ ಕಾರಣದಿಂದಾಗಿ ಅವು ಸದೃಢವಾಗಿರುವುದರಿಂದ ಗೋಡೆ ಕೊರೆಯುವುದು ಹೆಚ್ಚಿಲ್ಲವಾದರೂ, ಗಟ್ಟಿಮುಟ್ಟಾದ ಗೋಡೆಗಳ ಅಗತ್ಯವನ್ನು ಕಡೆಗಣಿಸುವಂತಿಲ್ಲ.  

ಗೋಡೆಯೋ ಕಿಟಕಿಯೋ?
ಮನೆಗೆ ಗೋಡೆಗಳನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುವುದು ಕಿಟಕಿಗಳು. ಎಲ್ಲರೂ ತಮ್ಮ ಅಗತ್ಯಕ್ಕೆ ತಕ್ಕಂತೆ ಕಿಟಕಿಗಳನ್ನು ಇಟ್ಟುಕೊಳ್ಳುತ್ತಾರೆ. ಆನಂತರ ಮಿಗುವ ಸ್ಥಳವನ್ನು ಗೋಡೆಗಳು ಆಕ್ರಮಿಸುತ್ತವೆ. ಸಾಮಾನ್ಯವಾಗಿ ಆಯಾ ಕೋಣೆಯ ವಿಸ್ತೀರ್ಣದ ಸುಮಾರು ಕಾಲು ಭಾಗದ ಅಳತೆಯಷ್ಟು ಕಿಟಕಿಗಳನ್ನು ಬಿಡಬೇಕಾಗುತ್ತದೆ. ಇದು ಭಾರತೀಯ ಕಟ್ಟಡ ಸಂಹಿತೆಯ ಸೂಚನೆಯಂತಿದ್ದು, ಹೆಚ್ಚು ವಿಸ್ತೀರ್ಣದ ಕಿಟಕಿ ಕೊಟ್ಟರೆ ತಪ್ಪೇನಿಲ್ಲ. ಆದರೆ, ಗೋಡೆಗೆ ಹೋಲಿಸಿದರೆ ಕಿಟಕಿಗಳು ದುಬಾರಿ ಆಗಿರುವುದರಿಂದ, ನಮಗೆ ಎಷ್ಟು ಬೇಕೋ ಅಷ್ಟು ಕಿಟಕಿಗಳನ್ನು ಇಟ್ಟುಕೊಂಡು ಮಿಕ್ಕ ಪ್ರದೇಶದಲ್ಲಿ ಗೋಡೆ ಕಟ್ಟುವುದು ಮಿತವ್ಯಯಕಾರಿ.

ಗೋಡೆ ಎಲ್ಲಿ ಎಷ್ಟು?
ಭಾರತದ ಬಹುತೇಕ ಪ್ರದೇಶದಲ್ಲಿ ಮುಂಗಾರು ಹಾಗೂ ಹಿಂಗಾರು ಗಾಳಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೀಗಾಗಿ, ಅವುಗಳ ಲೆಕ್ಕಾಚಾರದಲ್ಲಿ ಸೂಕ್ತ ಗೋಡೆಗಳನ್ನು ವಿನ್ಯಾಸ ಮಾಡುವುದು ಉತ್ತಮ. ಬಿಸಿಲುಗಾಲದಲ್ಲಿ ಪಶ್ಚಿಮ ಹಾಗೂ ದಕ್ಷಿಣ ದಿಕ್ಕಿನಿಂದ ಗಾಳಿ ಬೀಸುವುದರಿಂದ ಈ ದಿಕ್ಕಿನಲ್ಲಿ ಹೆಚ್ಚು ಗೋಡೆಗಳನ್ನು ಕಟ್ಟಬಾರದು. ಈ ದಿಕ್ಕುಗಳು ಆದಷ್ಟೂ ತೆರೆದಂತಿರುವುದರಿಂದ ಸೆಖೆ ನಿವಾರಕವಾಗಿ ನೈಸರ್ಗಿಕ ಗಾಳಿ ಹರಿದಾಡಲು ದಕ್ಷಿಣ ದಿಕ್ಕಿನಲ್ಲಿ ಕಿಟಕಿಗಳನ್ನು ಇಟ್ಟುಕೊಳ್ಳಬಹುದು. ಬೇಸಿಗೆಯಲ್ಲಿ ಬಿಸಿಲು ಬೀಳುವ ದಿಕ್ಕು ಉತ್ತರ. ಹಾಗಾಗಿ ಈ ದಿಕ್ಕಿನಲ್ಲಿ ಹೆಚ್ಚು ದಪ್ಪದ ಹಾಗೂ ಹೆಚ್ಚು ವಿಸ್ತೀರ್ಣದ ಗೋಡೆಗಳನ್ನು ಕಟ್ಟಬಹುದು. ಪೂರ್ವದಿಕ್ಕಿನಿಂದಲೂ ಚಳಿಗಾಲದಲ್ಲಿ ಹಿಂಗಾರಿನ ಕೊರತೆ ಇರುತ್ತದೆ. ಆದರೆ, ಸಾಮಾನ್ಯವಾಗಿ ನಾವು ಬೆಳಂಬೆಳಗ್ಗೆ ಸೂರ್ಯಕಿರಣಗಳನ್ನು ಸ್ವಾಗತಿಸಲು ಬಯಸುವುದರಿಂದ, ಸಾಕಷ್ಟು ಕಡಿಮೆ ಗೋಡೆಗಳನ್ನು ಈ ದಿಕ್ಕಿನಲ್ಲಿ ಕಟ್ಟಿ ನೈಸರ್ಗಿಕ ಬೆಳಕನ್ನು ಆಹ್ವಾನಿಸಬಹುದು. 

ಯಾವ ದಿಕ್ಕಿನ ಕೋಣೆಗೆ ಎಷ್ಟು ಗೋಡೆಗಳು
ನಾವು ಮನೆಯಲ್ಲಿ ಅತಿ ಹೆಚ್ಚು ಸಮಯ ಕಳೆಯುವ ಕೋಣೆ ಎಂದರೆ ಅದು ನಮ್ಮ ಬೆಡ್‌ ರೂಮ್‌ ಎಂದರೆ ತಪ್ಪಾಗಲಾರದು. ಅದರಲ್ಲೂ ನಿದ್ರಾವಸ್ಥೆಯಲ್ಲಿರುವಾಗ ನಾವು ಚಳಿಗಾಲದಲ್ಲಿ ಬೆಚ್ಚನೆಯ, ಬೇಸಿಗೆಯಲ್ಲಿ ತಂಪಾದ ವಾತಾವರಣವನ್ನು ಬಯಸುತ್ತೇವೆ. ಮನೆಯ ಮೂಲೆಗಳಲ್ಲಿ ಮಲಗುವ ಕೋಣೆಗಳಿದ್ದರೆ ನೈಸರ್ಗಿಕವಾಗಿ ಮನೆಯೊಳಗಿನ ವಾತಾವರಣವನ್ನು ನಿಯಂತ್ರಿಸಲು ಸುಲಭ. ಮನೆಯ ಹೊರಾಂಗಣದ ಸ್ಥಿತಿಗತಿಯನ್ನು ಗಮನಿಸಿ ಸೂಕ್ತ ರೀತಿಯಲ್ಲಿ ಗೋಡೆಗಳ ವಿನ್ಯಾಸ ಮಾಡಿದರೆ ನಮಗೆ ಬೇಸಿಗೆಯಲ್ಲೂ ವಿದ್ಯುತ್‌ ಫ‌ಂಕದ ಅಗತ್ಯ ಹೆಚ್ಚಿರುವುದಿಲ್ಲ. ಯಾವ ದಿಕ್ಕಿನಿಂದ ಎಷ್ಟು ಶಾಖ ಉತ್ಪತ್ತಿ ಆಗುತ್ತದೆ ಹಾಗೂ ಯಾವ ದಿಕ್ಕಿನ ಮೂಲಕ ಮನೆಯೊಳಗೆ ಉತ್ಪಾದಿತವಾಗುವ ಶಾಖವನ್ನು ಹೊರಹಾಕಬಹುದು ಎಂಬುದನ್ನು ನಿರ್ಧರಿಸುವಲ್ಲಿ ಗೋಡೆಗಳು ಪ್ರಮುಖ ಪಾತ್ರ ವಹಿಸುತ್ತವೆ.

Advertisement

ಪೂರ್ವ ಹಾಗೂ ದಕ್ಷಿಣಕ್ಕೆ ಮುಖ ಮಾಡಿರುವ ಕೋಣೆಗಳಲ್ಲಿ ಗೋಡೆಗಳ ವಿಸ್ತೀರ್ಣ ಅತಿ ಕಡಿಮೆ ಇರಬೇಕಾಗುತ್ತದೆ. ಪೂರ್ವದಿಂದ ಬೆಳಗಿನ ಸೂರ್ಯ ಕಿರಣಗಳ ಆಹ್ವಾನಕ್ಕೆಂದು ದೊಡ್ಡ ದೊಡ್ಡ ಕಿಟಕಿಗಳನ್ನು ಇಟ್ಟಮೇಲೆ ಈ ದಿಕ್ಕಿನಿಂದ ಚಳಿಗಾಲದಲ್ಲಿ ಬೀಸುವ ಗಾಳಿಗೆ ವಿಶೇಷ ವಿನ್ಯಾಸಗಳನ್ನು ಮಾಡಬೇಕಾಗುತ್ತದೆ. ಕಿಟಕಿ ಬಿಟ್ಟು ಉಳಿದ ಸ್ಥಳದಲ್ಲಿ ದಪ್ಪನೆಯ ಗೋಡೆಗಳನ್ನು ಕಟ್ಟಬೇಕು. ಹಾಗೆಯೇ, ಪೂರ್ವ ದಿಕ್ಕಿನಲ್ಲಿ ಕಿಟಕಿಯ ಅಕ್ಕಪಕ್ಕ ಫಿನ್‌ ಮಾದರಿಯ ನಿಲುವು ಹೊಂದಿರುವ ಗೋಡೆಗಳನ್ನು ಕಟ್ಟಿದರೆ, ಇವು ಸಾಕಷ್ಟು ಶಾಖವನ್ನು ದಿನದ ಹೊತ್ತು ಹೀರಿಕೊಂಡು ರಾತ್ರಿಹೊತ್ತು ಮನೆಗೆ ರವಾನಿಸುತ್ತದೆ! ಆದರೆ ದಕ್ಷಿಣದ ಕಡೆಗೆ ಫಿನ್‌ ಮಾದರಿಯ ಗೋಡೆಯ ಅಗತ್ಯ ಹೆಚ್ಚಿರುವುದಿಲ್ಲ. ನಿಮಗೆ ಸೂರ್ಯನ ಕಿರಣಗಳು ನೇರವಾಗಿ ಒಳಾಂಗಣವನ್ನು ಪ್ರವೇಶಿಸಿ ಮನೆಯ ನೆಲಹಾಸನ್ನು ಬೆಚ್ಚಗಿಡಿಸಬೇಕು ಎಂದಿದ್ದರೆ, ಫಿನ್‌ ಇಲ್ಲದೇನೇ ದಪ್ಪ ಗೋಡೆಗಳನ್ನು ಕಟ್ಟಿಕೊಳ್ಳಬಹುದು. ಪೂರ್ವ ಹಾಗೂ ಉತ್ತರಕ್ಕೆ ಹೊರ ಗೋಡೆಗಳನ್ನು ಹೊಂದಿರುವ ಈಶಾನ್ಯ ಮೂಲೆಯ ಕೋಣೆ ಮೇಲೆ ಹೇಳಿದಂತೆ ಪೂರ್ವದಿಕ್ಕಿನ ಗೋಡೆಗಳನ್ನು ವಿನ್ಯಾಸ ಮಾಡಿ, ಬೇಸಿಗೆಯಲ್ಲಿ ಬಿಸಿಲು ಬೀಳುವ ದಿಕ್ಕು ಉತ್ತರ ಆದುದರಿಂದ, ಗೋಡೆಗಳನ್ನು ಟೊಳ್ಳು – “ಹಾಲೊ ವಾಲ್ಸ್‌’ ಮಾದರಿಯಲ್ಲಿ ಕಟ್ಟಿಕೊಳ್ಳಬಹುದು. ಈ ಮಾದರಿಯ ಗೋಡೆಗಳು ಹೆಚ್ಚು ಶಾಖವನ್ನು ಹೀರಿಕೊಳ್ಳದೆ, ಮನೆಯ ಒಳಾಂಗಣವನ್ನು ತಂಪಾಗಿ ಇರಿಸುವಲ್ಲಿ ಮುಖ್ಯ ಪಾತ್ರ ವಹಿಸಬಲ್ಲವು. ಉತ್ತರದಿಂದ ಚಳಿಗಾಲದಲ್ಲಿ ಹೆಚ್ಚು ಥಂಡಿಹೊಡೆಯುವ ಗಾಳಿ ಬೀಸುವುದರಿಂದ, ಉತ್ತರ ದಿಕ್ಕಿನಲ್ಲಿ ಹೆಚ್ಚು ಕಿಟಕಿಗಳನ್ನು ಇಡುವ ಅಗತ್ಯ ಇರುವುದಿಲ್ಲ. ಹೇಗಿದ್ದರೂ, ಪೂರ್ವ ದಿಕ್ಕು ಹೆಚ್ಚು ತೆರೆದಿರುವುದರಿಂದ, ಕ್ರಾಸ್‌ ವೆಂಟಿಲೇಶನ್‌ – ಗಾಳಿ ಅಡ್ಡ ಹಾಯಲು ಎಷ್ಟು ಬೇಕೋ ಅಷ್ಟು ಮಾತ್ರ ತೆರೆದಿಟ್ಟರೆ ಸಾಕಾಗುತ್ತದೆ. 

ಬೇಸಿಗೆಯಲ್ಲಿ ತಂಗಾಳಿ ಬೀಸುವ ದಿಕ್ಕು ಪಶ್ಚಿಮವೇ ಆದರೂ, ಬಿಸಿಲಿನ ಝಳ ಹೆಚ್ಚಿರುವುದೂ ಪಶ್ಚಿಮದಲ್ಲೇ. ಹಾಗಾಗಿ, ಕಿಟಕಿಗೆ ಆದಷ್ಟೂ ಬಿಸಿಲು ಬೀಳದಂತೆ ದಪ್ಪನೆಯ ಗೋಡೆಗಳನ್ನು ಕಟ್ಟಿಕೊಳ್ಳುವುದು ಉತ್ತಮ. ಮಧ್ಯಾಹ್ನ ಮೂರು -ನಾಲ್ಕು ಗಂಟೆಯವರೆಗೂ ಸೂರ್ಯನ ಕಿರಣಗಳು ಅತಿ ಕಡಿಮೆ ಕೋನದಲ್ಲಿ ಬಂದರೂ ಅದು ಉತ್ತರದಿಕ್ಕಿಗೆ ವಾಲಿ ಬರುವುದರಿಂದ ಗೋಡೆಯನ್ನು ದಪ್ಪದಾಗಿ ಕಟ್ಟಿಕೊಂಡರೆ ಕಿಟಕಿಗಳ ಮೂಲಕ ಶಾಖ ಪ್ರವೇಶಿಸುವುದನ್ನು ಸಾಕಷ್ಟು ತಡೆಯಬಹುದು. 

ದಪ್ಪ ಹಾಗೂ ಸಣ್ಣ ಗೋಡೆಗಳ ಲೆಕ್ಕಾಚಾರ
ಇತ್ತೀಚಿನ ದಿನಗಳಲ್ಲಿ ನಿವೇಶನಗಳೇ ಚಿಕ್ಕದಾಗುತ್ತಿವೆ. ಅದರಲ್ಲಿ ದಪ್ಪನೆಯ ಗೋಡೆಗಳನ್ನು ಕಟ್ಟುತ್ತಾ ಹೋದರೆ ಒಳಾಂಗಣದಲ್ಲಿ ಇರುವ ಸ್ಥಳ ಮತ್ತೂ ಚಿಕ್ಕದಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ದಪ್ಪ ಗೋಡೆಗೆ ಪರ್ಯಾಯವಾದ ಬಿಲ್ಟ್ ಇನ್‌ ವಾರ್ಡ್‌ರೋಬ್‌  – ಗೋಡೆಯಲ್ಲಿ ಹುದುಗಿರುವ ಬಟ್ಟೆಬರೆ ಇಟ್ಟುಕೊಳ್ಳುವ ಕಪಾಟುಗಳನ್ನು ಮಾಡಿಕೊಂಡರೆ ಇವೂ ಕೂಡ ಸುಮಾರು ಎರಡು ಅಡಿ ದಪ್ಪನೆಯ ಗೋಡೆಯಂತೆಯೇ ಕಾರ್ಯ ನಿರ್ವಹಿಸುತ್ತವೆ. ಇನ್ನು ಸಣ್ಣಗೋಡೆ ಎಂದರೆ ಮಾಮೂಲಿ ಆರು ಇಂಚಿನ ಕಾಂಕ್ರಿಟ್‌ ಬ್ಲಾಕ್‌ ಗೋಡೆಗಳನ್ನು ಕಟ್ಟಿಕೊಳ್ಳಬಹುದು. ಇಲ್ಲವೇ, ಮೂರು ಇಂಚಿನ ಕಾಂಕ್ರಿಟ್‌ ಇಲ್ಲ ಮೆಶ್‌ ಗೋಡೆಯನ್ನು ಕಟ್ಟಿಕೊಳ್ಳುವುದರ ಮೂಲಕ ಸಾಕಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದು!

ನಿವೇಶನ ದೊಡ್ಡದಿರುವವರು ಸಾಂಪ್ರದಾಯಿಕವಾದ ದಪ್ಪನೆಯ ಅಂದರೆ ಸುಮಾರು ಒಂದೂವರೆ ಇಟ್ಟಿಗೆ ಗೋಡೆ – ಹದಿಮೂರುವರೆ ಇಂಚಿನ ಗೋಡೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಟೊಳ್ಳು ಇಟ್ಟಿಗೆ ಇಲ್ಲವೇ “ರ್ಯಾಟ್‌ ಟ್ರಾಪ್‌ ಬಾಂಡ್‌’ ಅಂದರೆ ಇಟ್ಟಿಗೆಯನ್ನು ಗೋಡೆಯಲ್ಲಿ ಇಟ್ಟು ಮಧ್ಯೆಮಧ್ಯೆ ಸಂದಿ ಬರುವಂತೆ ಉತ್ತರದ ಗೋಡೆಗಳನ್ನು ಕಟ್ಟಿಕೊಳ್ಳಬಹುದು. 

– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next