Advertisement

ಜಿಟಿ-ಜಿಟಿ ಮಳೆಯಿಂದ ಗೋಡೆ ಕುಸಿದು ನಾಲ್ವರ ಸಾವು

01:42 PM Sep 09, 2017 | |

ಇಂಡಿ: ಮಳೆಯಿಂದ ಗೋಡೆ ಕುಸಿದು ಎರಡು ಜೋಡಿ ದಂಪತಿ ಮೃತಪಟ್ಟ ಘಟನೆ ತಾಲೂಕಿನ ಹಳಗುಣಕಿ ಹಾಗೂ ಜೇವೂರ ಗ್ರಾಮಗಳಲ್ಲಿ ಶುಕ್ರವಾರ ನಸುಕಿನ ಜಾವ ಸಂಭವಿಸಿದೆ.

Advertisement

ತಾಲೂಕಿನ ಹಳಗುಣಕಿ ಗ್ರಾಮದ ದಂಪತಿ ರಾಚಪ್ಪ ಬಡಿಗೇರ (65), ಪತ್ನಿ ಸಿದ್ದವ್ವ ಬಡಿಗೇರ (60) ಮೃತಪಟ್ಟಿದ್ದರೆ, ತಾಲೂಕಿನ ಜೇವೂರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ದಂಪತಿ ಕರಿಬಸಪ್ಪ ಆಕಳವಾಡಿ (68), ಪತ್ನಿ ಇಂದಿರಾಬಾಯಿ ಆಕಳವಾಡಿ (63) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಂದು ನಾಯಿ ಮತ್ತು ಒಂದು ಕುರಿಯೂ ಮೃತಪಟ್ಟಿದೆ.

ಘಟನೆ ವಿವರ: ಹಳಗುಣಕಿ ಗ್ರಾಮದಲ್ಲಿ ಸತತ ಎರಡು ದಿನದಿಂದ ರಾತ್ರಿಯಿಡಿ ಮಳೆ ಸುರಿಯುತ್ತಿತ್ತು. ಮಳೆಯಿಂದ ಮನೆ ಕುಸಿಯಬಹುದೆಂಬ ಸಂಶಯದಿಂದ ಬಡಿಗೇರ ದಂಪತಿ ಮನೆ ಬಿಟ್ಟು ಮನೆ ಪಕ್ಕದ ಪತ್ರಾಸ್‌ ಸೆಡ್ಡಿನಲ್ಲಿ ಮೊಮ್ಮಕ್ಕಳೊಂದಿಗೆ ಮಲಗಿದ್ದರು. ಮಳೆ ರಾತ್ರಿ ರಭಸದಿಂದ ಸುರಿಯುತ್ತಿರುವುದನ್ನು ಕಂಡು ಮೊಮ್ಮಕ್ಕಳನ್ನು ಅಲ್ಲೇ ಪಕ್ಕದ ತಮ್ಮ ದೊಡ್ಡ ಮಗನ ಮನೆಯಲ್ಲಿ ಮಲಗಿಸಿ ಚಹಾ ಕುಡಿದು ಬಂದು ಮಲಗಿದ್ದರು. ದಂಪತಿ ಗಾಢ ನಿದ್ದೆಯಲ್ಲಿದ್ದಾಗ ಪಕ್ಕದ ಗೋಡೆ ಕುಸಿದಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೇವೂರ ಗ್ರಾಮದಲ್ಲಿ ಆಕಳವಾಡಿ ದಂಪತಿ ತಮ್ಮ ತೋಟದ ಹಳೆಯಮನೆಯಲ್ಲಿ ವಾಸವಿದ್ದು ರಾತ್ರಿಯಿಡಿ ಮಳೆ ಬರುತ್ತಿರುವುದನ್ನು ಕಂಡು ಮನೆ ಕುಸಿಯಬಹುದೆಂಬ ಶಂಕೆಯಿಂದ ಮನೆ ಹಿಂಭಾಗದ ಪತ್ರಾಸ್‌ ಸೆಡ್ಡಿನಲ್ಲಿರುವ ಕಾಟ್‌ ಮೇಲೆ ಹೋಗಿ ಮಲಗಿದ್ದರು. ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ ಮನೆಯ ಹಿಂಭಾಗದ ಗೋಡೆ ಕುಸಿದು ಪತ್ರಾಸ್‌ ಶೆಡ್‌ ಮತ್ತು ಗೋಡೆಯ ಕಲ್ಲುಗಳು ದಂಪತಿ ಮೇಲೆ ಬಿದ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಒಂದು ನಾಯಿ ಮತ್ತು ಒಂದು ಕುರಿ ಸಹ ಅಸುನೀಗಿವೆ. 

ಈ ಎರಡೂ ಕುಟುಂಬಸ್ಥರ ದುರ್ಮರಣದಿಂದ ಎರಡೂ ಗ್ರಾಮಗಳಲ್ಲಿ ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕಾಗಮಿಸಿದ ಶಾಸಕ ಯಶವಂತ್ರಾಯಗೌಡ ಪಾಟೀಲ ಮೃತರ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಕಂದಾಯ ಉಪ ವಿಭಾಗಾಧಿಕಾರಿ ಮಹಾದೇವಪ್ಪ ಮುರಗಿ, ತಹಶೀಲ್ದಾರ್‌ ಸಂತೋಷ ಮ್ಯಾಗೇರಿ ಇದ್ದರು. ಸ್ಥಳಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಮುಖಂಡರಾದ ದಯಾಸಾಗರ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಶೀಲವಂತ ಉಮರಾಣಿ, ಹನುಮಂತ್ರಾಯಗೌಡ ಪಾಟೀಲ ಭೇಟಿ ನೀಡಿ ಸಾಂತ್ವನ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next