ಬೆಂಗಳೂರು: ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳಿಗೆ ಮರಣೋತ್ತರವಾಗಿ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ ಹೈಕೋರ್ಟ್, ಪ್ರಶಸ್ತಿ ನೀಡುವಂತೆ ಕೋರ್ಟ್ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಲು ಪ್ರಧಾನಮಂತ್ರಿಗೆ ನಿರ್ದೇಶನ ನೀಡುವಂತೆ ಕೋರಿ ತುಮಕೂರು ನಿವಾಸಿ ರೆಹಾನ್ ಖಾನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಇದನ್ನೂ ಓದಿ:ವಾಡಿಯ ಬಿಜೆಪಿ ಮುಖಂಡರ ಕೈಗೆ ಚಿಪ್ಪು ಕೊಟ್ಟ ಚಿತ್ರ ವೈರಲ್ : ಡಿಸಿಗೆ ದೂರು
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಭಾರತರತ್ನ ನೀಡುವಂತೆ ಪ್ರಧಾನಮಂತ್ರಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಪ್ರಶಸ್ತಿ ನೀಡುವ ಕುರಿತು ರಾಷ್ಟ್ರಪತಿಗಳು ಸರ್ಕಾರದೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತಾರೆ. ಪ್ರಶಸ್ತಿ ನೀಡುವಂತೆ ಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿತು.
ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹ ನಡೆಸುವ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾದ ಶಿವಕುಮಾರ್ ಸ್ವಾಮೀಜಿ ಅವರು ಭಾರತರತ್ನ ಪ್ರಶಸ್ತಿಗೆ ಎಲ್ಲ ರೀತಿಯಲ್ಲೂ ಅರ್ಹರಿದ್ದಾರೆ. ಆದರೆ, ಸರ್ಕಾರ ಅವರಿದ್ದಾಗಲೂ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ಹೀಗಾಗಿ, ಅವರ ಸೇವೆ ಪರಿಗಣಿಸಿ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.