Advertisement
ನಗರಪಾಲಿಕೆ 65 ವಾರ್ಡ್‌ಗಳಿಂದ 389 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲಾ ಅಭ್ಯರ್ಥಿಗಳು ಮತದಾರರ ಮನಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಪಾಲಿಕೆ ಅಧಿಕಾರದ ಗದ್ದುಗೆ ಹಿಡಿಯಲು ಮೂರೂ ಪಕ್ಷಗಳು ಹರಸಾಹಸ ಮಾಡುತ್ತಿದ್ದರೆ, ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರು ಚುನಾವಣೆ ಗೆಲುವಿಗಾಗಿ ಬಿಡುವಿಲ್ಲದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇವೆಲ್ಲದರ ಪರಿಣಾಮ ಪಾಲಿಕೆ ಚುನಾವಣೆಗೆ ಒಂದರ್ಥದಲ್ಲಿ ಅಸೆಂಬ್ಲಿ ಚುನಾವಣೆಯಷ್ಟೇ ರಂಗು ಪಡೆದಿದೆ.
Related Articles
Advertisement
ಬೆಳಗ್ಗಿನಿಂದ ವಾರ್ಡ್‌ನ ಬೀದಿಬೀದಿಗಳಲ್ಲೂ ಸಂಚರಿಸುವ ಪ್ರಚಾರ ವಾಹನಗಳಲ್ಲಿ ಅಭ್ಯರ್ಥಿಗಳ ಸ್ಪರ್ಧಿಸಿರುವ ವಾರ್ಡ್ ಸಂಖ್ಯೆ, ಹೆಸರು, ಕ್ರಮ ಸಂಖ್ಯೆ, ಗುರುತು ಹಾಗೂ ಚುನಾವಣೆ ನಡೆಯುವ ದಿನದ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಕಣದಲ್ಲಿರುವ ಹಾಲಿ ಅಭ್ಯರ್ಥಿಗಳು ಈ ಹಿಂದಿನ ಅವಧಿಯಲ್ಲಿ ತಾವು ಮಾಡಿರುವ ಕೆಲಸಗಳನ್ನು ತಿಳಿಸುತ್ತಾ, ಪ್ರಚಾರ ನಡೆಸಲಾಗುತ್ತಿದೆ. ಹೀಗಾಗಿ ನಗರದೆಲ್ಲೆಡೆ ಪ್ರಚಾರ ವಾಹನದ ಧ್ವನಿವರ್ಧಕಗಳ ಸದ್ದು ದಿನವಿಡೀ ಕೇಳಿಬರುತ್ತಿವೆ.
ಶಾಸಕರಿಗೆ ಪ್ರತಿಷ್ಠೆ ಪ್ರಶ್ನೆ: ಪಾಲಿಕೆ ಚುನಾವಣೆ ಮೈಸೂರು ಮಹಾನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೆ.ಆರ್.ಕ್ಷೇತ್ರ ವ್ಯಾಪ್ತಿಯಲ್ಲಿ 20 ವಾರ್ಡ್‌ಗಳನ್ನು ಗೆಲ್ಲಲು “ಟಾರ್ಗೆಟ್ – 20′ ಘೋಷವಾಕ್ಯದೊಂದಿಗೆ ಶಾಸಕ ಎಸ್.ಎ.ರಾಮದಾಸ್ ಸಕ್ರಿಯರಾಗಿದ್ದಾರೆ. ಇನ್ನು ಚಾಮರಾಜ ಕ್ಷೇತ್ರದ 19 ವಾರ್ಡ್‌ಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸ್ಥಳೀಯ ಶಾಸಕ ಎಲ್.ನಾಗೇಂದ್ರ ಕಾರ್ಯತಂತ್ರ ರೂಪಿಸಿದ್ದಾರೆ.
ಅದೇ ರೀತಿಯಲ್ಲಿ ಎನ್.ಆರ್.ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಾಸಕ ತನ್ವೀರ್ ಶತಪ್ರಯತ್ನ ನಡೆಸುತ್ತಿದ್ದಾರೆ. ಉಳಿದಂತೆ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬೆರಳೆಣಿಕೆಯಷ್ಟು ವಾರ್ಡ್‌ಗಳು ಸೇರಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ, ಸ್ವತಂತ್ರವಾಗಿ ಪಾಲಿಕೆ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ.
ದೋಸ್ತಿ ನಡುವೆ ಫೈಟ್: ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರೂ ಪಕ್ಷಗಳು ಸಮಾನಾಂತರ ಹೋರಾಟ ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಯಾಗಿ ಸರ್ಕಾರ ನಡೆಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಮೇಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು, ಅದೇ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸ್ಥಳೀಯವಾಗಿ ಟೀಕೆ, ಟಿಪ್ಪಣಿ ಮಾಡುವುದು ಉಭಯ ಮೈತ್ರಿ ಪಕ್ಷಗಳ ಮುಖಂಡರಿಗೆ, ಅದರಲ್ಲೂ ಸ್ಥಳೀಯ ಶಾಸಕರಿಗೆ ಇರಿಸು-ಮುರಿಸು ತಂದಿದೆ. ಈ ಹಿನ್ನೆಲೆಯಲ್ಲಿ ಟೀಕೆ, ಟಿಪ್ಪಣಿ ಮಾಡದೆ, ಕೇವಲ ಸ್ಥಳೀಯ ಅಜೆಂಡಾ ಮೇಲೆ ಮತಬೇಟೆಗೆ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಮುಂದಾಗಿದ್ದಾರೆ.
ನಿವೃತ್ತಿಯಾದರೂ ತಪ್ಪದ ಗೊಂದಲ: ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪ್ರಮುಖ ಪಕ್ಷಗಳಿಂದ ಹಲವರು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಕಣದಲ್ಲಿದ್ದರು. ಈ ನಡುವೆ ಪಕ್ಷದ ಮುಖಂಡರ ಮನವೊಲಿಕೆಯಿಂದ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನದ ನಂತರ ಕೆಲವರು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿ, ಕಣದಿಂದ ನಿವೃತ್ತಿ ಹೊಂದಿದ್ದಾರೆ.
ಇವರಲ್ಲಿ ಬಿಜೆಪಿಯಿಂದ ಬಂಡಾಯ ಸಾರಿದ್ದ 59ನೇ ವಾರ್ಡಿನ ಸೀಮಾ ಪ್ರಸಾದ್ ಹಾಗೂ 61ನೇ ವಾರ್ಡಿನ ಆಶಾ ಲಕ್ಷಿನಾರಾಯಣ ಕಣದಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ಈ ಇಬ್ಬರು ನಿಗದಿಗೊಳಿಸಿದ್ದ ಅವಧಿಯೊಳಗೆ ನಾಮಪತ್ರ ವಾಪಸ್ ಪಡೆಯದ ಕಾರಣಕ್ಕೆ, ಚುನಾವಣಾ ಕಣದಿಂದ ನಿವೃತ್ತಿ ಹೊಂದಿದ್ದರೂ, ಮತಯಂತ್ರ ಬಾಕ್ಸ್‌ನಲ್ಲಿ ನಿವೃತ್ತಿ ಹೊಂದಿದ ಅಭ್ಯರ್ಥಿಗಳ ಹೆಸರು ಹಾಗೂ ಚಿಹ್ನೆ ಮುದ್ರಣವಾಗಲಿದೆ. ಇದು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಇನ್ನೊಂದು ರೀತಿಯ ತಲೆನೋವಾಗಿ ಪರಿಣಮಿಸಿದೆ.