Advertisement
ಕೇಂದ್ರ ಚುನಾವಣ ಆಯೋಗದ ನಿರ್ದೇಶನದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈ ಕ್ರಮಕ್ಕೆ ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಮತದಾರರ ಹೆಸರುಗಳು ಅಳಿಸಿ ಹೋಗಿದ್ದರೆ ಅಂತಹ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಲು ಕೇಂದ್ರ ಚುನಾವಣ ಆಯೋಗ ನಿರ್ದೇಶನ ನೀಡಿದೆ. ಅದರಂತೆ ರಾಜ್ಯದಲ್ಲಿ 170 ಅಂತಹ ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಈ ಕ್ಷೇತ್ರಗಳ ಮತದಾರರ ಪಟ್ಟಿಯ “ಟೇಬಲ್ ಟಾಪ್ ವೆರಿಫಿಕೇಷನ್’ ನಡೆಸಲಾಗುತ್ತದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಕಾರ್ಯ ಮುಗಿದಿದ್ದು, ರಾಜ್ಯದ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೊಂದು ವಾರದಲ್ಲಿ ಪೂರ್ಣವಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಮಾಹಿತಿ ನೀಡಿದೆ. ಪ್ರತೀ ವರ್ಷದ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಸಕಾರಣಗಳಿಗೆ ಮತದಾರರ ಹೆಸರು ಅಳಿಸುವುದು ಸಹಜ. ಒಂದೇ ಫೋಟೋ ಎರಡು ಬಾರಿ ನೋಂದಣಿ ಆಗಿದ್ದರೆ, ಪುನರಾವರ್ತಿತ ನೋಂದಣಿ ಆಗಿದ್ದರೆ, ಮರಣ ಹೊಂದಿದ ಪ್ರಕರಣಗಳು, ಸ್ಥಳಾಂತರ, ಗೈರು ಹಾಜರು ಮತದಾರರ ಹೆಸರಗಳನ್ನು ಅಂತಿಮ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ. ಇದಕ್ಕೆ ತನ್ನದೇ ಆದ ಪ್ರಕ್ರಿಯೆ ಹಾಗೂ ಒಂದೊಂದಕ್ಕೂ ಪ್ರತ್ಯೇಕ ನಮೂನೆಗಳನ್ನು ತುಂಬಬೇಕಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ಈ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ.
ಒಂದೊಮ್ಮೆ ಈ ಪ್ರಕ್ರಿಯೆಯಲ್ಲಿ ಲೋಪಗಳಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
Related Articles
Advertisement
ಶೇ. 4ಕ್ಕಿಂತ ಹೆಚ್ಚು ಅಥವಾ 10 ಸಾವಿರ ಮತದಾರರ ಹೆಸರುಗಳು ಡಿಲೀಟ್ ಆಗಿದ್ದರೆ ಅಂತಹ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮತ್ತೂಮ್ಮೆ ಪರಿಶೀಲಿಸಲಾಗುತ್ತಿದೆ. ಲೋಪಗಳಾಗಿದ್ದರೆ ಸರಿಪಡಿಸಲಾಗುತ್ತದೆ.-ಮನೋಜ್ ಕುಮಾರ್ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ