Advertisement

ಸರ್ಕಾರಿ ಶಾಲೆಗಳಿಂದಲೂ ಪೋಷಕರಿಗೆ ಧ್ವನಿ ಸಂದೇಶ

12:07 PM Jan 16, 2017 | |

ಬೆಂಗಳೂರು: ಮಕ್ಕಳ ಶೈಕ್ಷಣಿಕ ಚಟುವಟಿಕೆ, ಶಾಲೆಗೆ ಸಂಬಂಧಿಸಿದ ಸಭೆ, ಸಮಾರಂಭಗಳ ಕುರಿತು ಪೋಷಕರಿಗೆ ಮೊಬೈಲ್‌ ಮೂಲಕ ಧ್ವನಿ ಸಂದೇಶ ಕಳುಹಿಸುವ ಖಾಸಗಿ ಶಾಲೆಗಳ ಕಾರ್ಯವೈಖರಿಯನ್ನು ಇದೀಗ ಸರ್ಕಾರಿ ಶಾಲೆಗಳೂ ರೂಢಿಸಿಕೊಳ್ಳತೊಡಗಿವೆ.

Advertisement

ಸ್ವಯಂ ಸೇವಾ ಸಂಸ್ಥೆಗಳ (ಎನ್‌ಜಿಒ) ಸಹಕಾರ ಪಡೆದು ಇಂಟರಾಕ್ಟಿವ್‌ ವಾಯ್ಸ ರೆಸ್ಪಾನ್ಸ್‌ ಸಿಸ್ಟಮ್‌ (ಐವಿಆರ್‌ಎಸ್‌) ಮುಕ್ತ ತಂತ್ರಾಂಶದ ಮೂಲಕ ನಗರದ ಕೆಲ ಸರ್ಕಾರಿ ಶಾಲೆಗಳ ಶಿಕ್ಷಕರೇ ಸಂಬಂಧಪಟ್ಟ ಸಂದೇಶವನ್ನು ಧ್ವನಿ ಮುದ್ರಣ ಮಾಡಿ ಪೋಷಕರ ಮೊಬೈಲ್‌ ಸಂಖ್ಯೆಗೆ ರವಾನಿಸುವ ಕೆಲಸ ಮಾಡುತ್ತಿದ್ದಾರೆ. 

ಹಾಜರಾತಿ ಬಗ್ಗೆ ನಿಗಾ: ಖಾಸಗಿ ಶಾಲೆಗಳಂತೆ ಈ ಸರ್ಕಾರಿ ಶಾಲಾ ಮಕ್ಕಳ ಪೋಷಕರಿಗೂ ಅವರ ಮಕ್ಕಳು ಶಾಲೆಗೆ ದೀಘಕಾಲ ಗೈರು ಹಾಜರಾಗುತ್ತಿದ್ದರೆ, ಶೈಕ್ಷಣಿಕ ಚಟುವಟಿಕೆಗಳಲ್ಲಿ ಸರಿಯಾಗಿ ಭಾಗವಹಿಸದೆ ನಿರ್ಲಕ್ಷ್ಯ ತೋರುತ್ತಿದ್ದರೆ, ಹಾಜರಾತಿ ಕೊರತೆ ಇದ್ದರೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ಶಾಲೆ ಆಯೋಜಿಸುವ ಪೋಷಕರ ಸಭೆ, ಸಮಾರಂಭಗಳ ಬಗ್ಗೆಯೂ ಕಾಲಕಾಲಕ್ಕೆ ಮೊಬೈಲ್‌ ಮೂಲಕ ಧ್ವನಿ ಸಂದೇಶ ದೊರೆಯುವಂತಾಗಿದೆ. 

ಐಟಿ ಫಾರ್‌ ಚೇಂಜ್‌ ಸಂಸ್ಥೆಯ ಸಹಯೋಗ: ಬೆಂಗಳೂರು ದಕ್ಷಿಣ ವಿಭಾಗದ  ದೊಮ್ಮಲೂರು ಸರ್ಕಾರಿ ಪ್ರೌಢಶಾಲೆ, ಈಜೀಪುರ ಸರ್ಕಾರಿ ಪ್ರೌಢಶಾಲೆ, ಬೇಗೂರಿನ ಸರ್ಕಾರಿ ಪ್ರೌಢಶಾಲೆ, ನಿಮ್ಹಾನ್ಸ್‌ ಬಳಿಯ ಟ್ಯಾಂಕ್‌ ಗಾರ್ಡನ್‌ ಸರ್ಕಾರಿ ಶಾಲೆಗಳು ಐಟಿ ಫಾರ್‌ ಚೇಂಜ್‌ ಎಂಬ ಸ್ವಯಂ ಸೇವಾ ಸಂಸ್ಥೆಯ ಸಹಕಾರದೊಂದಿಗೆ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಲು ಐವಿಆರ್‌ಎಸ್‌ ತಂತ್ರಾಂಶ ಬಳಸುತ್ತಿವೆ.

ಪ್ರಗತಿಯ ಮಾಹಿತಿ: ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಈಜೀಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಉಜಲಾ ಬಾಯಿ, ಸರ್ಕಾರಿ ಶಾಲೆಗಳಿಗೆ ಬರುವ ಬಹುತೇಕ ಮಕ್ಕಳ ಪೋಷಕರು ನಿತ್ಯ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ಶಾಲೆಯಲ್ಲಿ ಕರೆಯುವ ಪೋಷಕರ ಸಭೆಗಳಿಗೂ ಬರುವುದಿಲ್ಲ. ಇದರಿಂದ ಮಕ್ಕಳ ಹಾಜರಾತಿ, ಶೈಕ್ಷಣಿಕ ಚಟುವಟಿಕೆ ಯಾವುದರ ಮಾಹಿತಿಯೂ ಇರುವುದಿಲ್ಲ. 

Advertisement

ಖಾಸಗಿ ಶಾಲೆಗಳಂತೆ ನಾವೂ ಏಕೆ ಪೋಷಕರಿಗೆ ಶಾಲೆ ಹಾಗೂ ಮಕ್ಕಳ ವಿಚಾರಕ್ಕೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುವ ಕೆಲಸ ಆರಂಭಿಸಬಾರದು ಎಂದು ಯೋಚಿಸಿದೆ. ಈ ಯೋಚನೆಗೆ ಐಟಿ ಫಾರ್‌ ಚೇಂಜ್‌ ಎನ್‌ಜಿಓ ಕಾರಣ ಎಂದು ಹೇಳುತ್ತಾರೆ.

ಮಕ್ಕಳಿಗೆ ಕಂಪ್ಯೂಟರ್‌ ತರಬೇತಿ: ನಮ್ಮ ಈ ಯೋಜನೆಗೆ ಕಾರಣ ಐಟಿ ಫಾರ್‌ ಚೇಂಜ್‌ ಎಂಬ ಎನ್‌ಜಿಒ. ಅದರ ನಿರ್ದೇಶಕ ಗುರುಮೂರ್ತಿ ಸೇರಿದಂತೆ ಹಲವು ಪ್ರತಿನಿಧಿಗಳು ವಾರಕ್ಕೆ ಎರಡು ದಿನ ಶಾಲೆಗೆ ಆಗಮಿಸಿ ಮಕ್ಕಳಿಗೆ ಕಂಪ್ಯೂಟರ್‌ನಲ್ಲಿ ಕನ್ನಡ ಟೈಪಿಂಗ್‌, ಕಥೆ, ಕವನ ಬರೆಯುವುದು, ಚಿತ್ರಕಲೆ, ವಿಶೇಷ ಸಿನೆಮಾ ವೀಕ್ಷಣೆ, ಗಣಿತಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಕಂಪ್ಯೂಟರ್‌ ಮೂಲಕ ನೀಡುವ ತರಬೇತಿ ನೀಡುತ್ತಿದ್ದಾರೆ.

ಇದರ ಜತೆಗೆ ಒಮ್ಮೆ ಐವಿಆರ್‌ಎಸ್‌ ಮುಕ್ತ ತಂತ್ರಾಂಶದ ಮೂಲಕ ಪೋಷಕರಿಗೆ ಸಂದೇಶ ಕಳುಹಿಸುವುದು ಹೇಗೆ ಎಂಬುದನ್ನು ನಮ್ಮ ಶಿಕ್ಷಕರಿಗೂ ತರಬೇತಿ ನೀಡಿದರು. ಅದನ್ನು ಆಧರಿಸಿ ಪೋಷಕರಿಗೆ ಧ್ವನಿ ಸಂದೇಶ ಕಳುಹಿಸಲಾಗುತ್ತಿದೆ. ಇದರಿಂದ ಶಾಲೆಯ ಹಾಜರಾತಿ, ದಾಖಲಾತಿ ಹಾಗೂ ಫ‌ಲಿತಾಂಶವೂ ಹೆಚ್ಚುತ್ತಿದೆ ಎನ್ನುತ್ತಾರೆ ದೊಮ್ಮಲೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಎಂ.ಜಿ.ಅವಧಾನಿ. 

ಪ್ರತಿ ಸಂದೇಶಕ್ಕೆ 15 ಪೈಸೆ ವೆಚ್ಚ: ಪೋಷಕರಿಗೆ ಕಳುಹಿಸುವ ಪ್ರತಿ ಧ್ವನಿ ಸಂದೇಶಕ್ಕೆ 15 ಪೈಸೆಯಷ್ಟೇ ವೆಚ್ಚವಾಗುತ್ತದೆ. ಶಾಲೆಯಲ್ಲಿ ಇನ್‌ಫೋಸಿಸ್‌ ಮತ್ತು ಕಾಗ್ನಿಜೆನ್ಸ್‌ ಸಂಸ್ಥೆಗಳು ದೇಣಿಗೆಯಾಗಿ ನೀಡಿರುವ ಕಂಪ್ಯೂಟರ್‌ಗಳಿವೆ. ಶಾಲಾಭಿವೃದ್ಧಿ ನಿಧಿಯಿಂದ ಇಂಟರ್‌ನೆಟ್‌ ಸಂಪರ್ಕ ಪಡೆದು ಪೋಷಕರಿಗೆ ಸಂದೇಶ ಕಳುಹಿಸಲಾಗುತ್ತಿದೆ ಎನ್ನುತ್ತಾರೆ ಈಜೀಪುರ ಶಾಲೆಯ ಮುಖ್ಯಶಿಕ್ಷಕಿ ಉಜಲಾ ಬಾಯಿ. 

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ತರಬೇತಿ ಮೂಲಕ ಶಿಕ್ಷಕರ ಬೋಧನಾ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಐಟಿ ಫಾರ್‌ ಚೇಂಜ್‌ ಬೆಂಗಳೂರಿನ ದಕ್ಷಿಣ ವಿಭಾಗದ ಅನೇಕ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮಕ್ಕಳಿಗೆ ಸ್ವಯಂ ಪ್ರೇರಿತವಾಗಿ ಕಂಪ್ಯೂಟರ್‌ ತರಬೇತಿ, ಇಂಗ್ಲಿಷ್‌ ಕಲಿಕೆ ಮತ್ತಿತರ ಕಾರ್ಯಗಳನ್ನು ಮಾಡುತ್ತಿದೆ. ಇದರಲ್ಲಿ ಐವಿಆರ್‌ಎಸ್‌ ಮುಕ್ತ ತಂತ್ರಾಂಶ ಬಳಕೆ ತರಬೇತಿ ಕೂಡ ಒಂದು. 16 ಶಾಲೆಗಳಿಗೆ ತರಬೇತಿ ನೀಡಲಾಗಿದ್ದು, ಐದು ಶಾಲೆಗಳು ಈಗಾಗಲೇ ಈ ತಂತ್ರಾಂಶ ಅಳವಡಿಸಿಕೊಂಡಿವೆ.
-ಗುರುಮೂರ್ತಿ, ನಿರ್ದೇಶಕ, ಐಟಿ ಫಾರ್‌ ಚೇಂಜ್‌ ಸಂಸ್ಥೆ

* ಲಿಂಗರಾಜು ಕೋರಾ

Advertisement

Udayavani is now on Telegram. Click here to join our channel and stay updated with the latest news.

Next