Advertisement

ಕಂಡಕ್ಟರ್‌ ಮಾಡಿದ ಪುಣ್ಯದ ಕೆಲಸ

07:27 PM Jul 29, 2019 | Team Udayavani |

ಈಗ್ಗೆ ಸುಮಾರು 60 ವರ್ಷಗಳ ಹಿಂದಿನ ಘಟನೆ. ನನ್ನ ತಾಯಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ವೈದ್ಯರ ಸಲಹೆಯ ಮೇರೆಗೆ, ಪರಿಸರದ ಬದಲಾವಣೆಗಾಗಿ ಅವರ ಅಣ್ಣನ ಮನೆಗೆ ಪುಟ್ಟ ತಮ್ಮನನ್ನು ಕರಕೊಂಡು ಬಸ್ಸಿನಲ್ಲಿ ಹೊರಟರು. ಅವತ್ತು ಕುಂಭದ್ರೋಣ ಮಳೆ ಬೇರೆ. ರಸ್ತೆ ಯಾವುದು, ನೀರಿನ ಕೊಳ್ಳ ಯಾವುದೆಂದು ಪತ್ತೆಹಚ್ಚುವುದು ಕಷ್ಟವಿತ್ತು. ಉದ್ಯಾವರದ ಬಳಿಯ ರಸ್ತೆಯಲ್ಲಿ 3 ಅಡಿಗಳಷ್ಟು ನೀರು ನಿಂತಿತ್ತು. ಬಸ್ಸು ಮುಂದೆ ಹೋಗಲು ಸಾಧ್ಯವೇ ಇದ್ದಿರಲಿಲ್ಲ.

Advertisement

ಅದೇ ಊರಿನ ಒಬ್ಬರು, ದೊಡ್ಡ ಕೋಲಿನ ಸಹಾಯದಿಂದ ನೀರಿನ ಆಳ ತಿಳಿಸುತ್ತಾ, ಮುಂದಿನ ಹಾದಿ ಸೂಚಿಸು­ತ್ತಿದ್ದರು. ಡ್ರೈವರ್‌ ನಿಧಾನವಾಗಿ ಬಸ್ಸನ್ನು ಚಲಾಯಿಸಿ ಕೊಂಡು, ಉಡುಪಿ ತಲುಪುವಾಗ ರಾತ್ರಿ 11 ಗಂಟೆ. ಅಷ್ಟರಲ್ಲಾಗಲೇ ಹೆಬ್ರಿಗೆ ಹೋಗುವ ಬಸ್ಸು ಹೊರಟು ಹೋಗಿದ್ದರಿಂದ, ನನ್ನ ಅಮ್ಮ ಅಸಹಾಯಕರಾಗಿ ಅಳುತ್ತಿದ್ದರಂತೆ. ಆಗ ಕಂಡಕ್ಟರ್‌ ಬಂದು, “ಅಮ್ಮ ನೀವು ಹೆದರಬೇಡಿ… ನನಗೆ ನಿಮ್ಮ ಜಾತಿಯವರೇ ಆದ ಒಬ್ಬರು ಗೊತ್ತಿದ್ದಾರೆ.

ತುಂಬಾ ಒಳ್ಳೆಯವರು. ನಿಮ್ಮನ್ನು ಅವರ ಮನೆಗೆ ತಲುಪಿಸುತ್ತೇನೆ. ಇವತ್ತು ಅಲ್ಲಿ ಉಳಿದು, ನಾಳೆ ನಿಮ್ಮ ಮನೆಯನ್ನು ಸೇರಿಕೊಳ್ಳಿ’ ಎಂದು ಅವರ ಮನೆಗೆ ಬಿಟ್ಟನಂತೆ. ಆ ಹೊತ್ತಿಗೆ ಎಲ್ಲಾ ಹೋಟೆಲುಗಳು ಬಂದ್‌ ಆಗಿದ್ದವಂತೆ. ಹೊಟ್ಟೆಗೇನೂ ಸಿಗದಿದ್ದಾಗ ಮನೆಯಾಕೆ, ಮಗುವಿಗೆ ಹಾಲು ನೀಡಿ, ತಾಯಿಗೆ ಅವಲಕ್ಕಿ ಮೊಸರು ಕೊಟ್ಟರಂತೆ. ಅಮ್ಮ ಬೆಳಗ್ಗೆ ಎದ್ದು, ಅಣ್ಣನ ಮನೆ ತಲುಪಿದರಂತೆ. ಯಾಕೋ ಆ ಕಂಡಕ್ಟರ್‌ನ ಈ ಕತೆ ಮತ್ತೆ ನೆನಪಿಗೆ ಬಂತು.

* ಪುಷ್ಪ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next