Advertisement

ಬಳ್ಳಿ ಬುಟ್ಟಿ ಹೆಣೆಯುವ ಕುಟುಂಬಕ್ಕೆ ಬೇಕು ಸೂರು, ಸೌಲಭ್ಯ

04:55 PM Dec 06, 2017 | |

ಇಡ್ಕಿದು: ಇಲ್ಲಿನ ಅಳಕೆಮಜಲು ಎಂಬಲ್ಲಿ ವಾಸವಿರುವ ಕೊರಗ ಜನಾಂಗದ ಸೂರು ರಹಿತ ಕುಟುಂಬವೊಂದು ಸಂಬಂಧಿ ಕರ ಮನೆ ಪಕ್ಕ ಜೋಪಡಿ ನಿರ್ಮಿಸಿ ವಾಸಿಸುತ್ತಿದ್ದು, ಕಾಡುಗಳಿಂದ ಸಂಗ್ರಹಿಸಿದ ಬಳ್ಳಿ ಗಳಿಂದ ನೇಯ್ದ ಬುಟ್ಟಿಗಳನ್ನು ಮಾರಿ ಹೊಟ್ಟೆ ಹೊರೆದುಕೊಳ್ಳುತ್ತಿದೆ.

Advertisement

ಗುರುವಪ್ಪ ಹಾಗೂ ಗುರುವಮ್ಮ ದಂಪತಿ ತಮ್ಮ ಐವರು ಮಕ್ಕಳೊಂದಿಗೆ ಜೋಪಡಿಯಲ್ಲಿ ವಾಸವಿದ್ದಾರೆ. ಮೂವರು ಮಕ್ಕಳು ಅಳಕೆಮಜಲು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಗುರುವಪ್ಪ ಅವರು ಕಾಡಿಗೆ ಹೋಗಿ ಬಳ್ಳಿಗಳನ್ನು ಸಂಗ್ರಹಿಸಿ ತರುತ್ತಾರೆ. ದಂಪತಿ ಸೇರಿ ಮನೆಯಲ್ಲಿ ಬುಟ್ಟಿ ಹೆಣೆಯುತ್ತಾರೆ. ಅವುಗಳನ್ನು ಮಾರಿ ಬಂದ ಹಣದಿಂದಲೇ ಏಳು ಜನರ ಜೀವನ ನಡೆಯಬೇಕಿದೆ.

ದೂರದ ಬಾವಿಯ ನೀರು
ಬೆಳ್ತಂಗಡಿ, ಸುಬ್ರಹ್ಮಣ್ಯ, ನೆಟ್ಟಣ ಮುಂತಾದ ಊರುಗಳಲ್ಲಿ ಸುದೀರ್ಘ‌ ಕಾಲ ಕೆಲಸ ಮಾಡಿದ್ದ ಈ ಕುಟುಂಬ, ಕೂಲಿ ಕೆಲಸ ನೀಡಿದವರ ಬಚ್ಚಲು ಕೋಣೆಗಳಲ್ಲಿ ಆಶ್ರಯ ಪಡೆದಿತ್ತು. ಈಗ ಇಬ್ಬರು ಗಂಡು ಮಕ್ಕಲು ಸಂಬಂಧಿಕರ ಮನೆಯಲ್ಲಿದ್ದಾರೆ. ಸರಕಾರದ ಯಾವುದೇ ಸವಲತ್ತುಗಳ ಬಗ್ಗೆ ಇವರಿಗೆ ಮಾಹಿತಿಯೇ ಇಲ್ಲ. ಸಹಾಯ ಮಾಡಲೂ ಯಾರೂ ಮುಂದೆ ಬಂದಿಲ್ಲ. ಸ್ವಂತ ಜಾಗೆ, ಮನೆ, ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್‌ ಕೂಡ ಇಲ್ಲ. ಕುಡಿಯುವ ನೀರನ್ನು ದೂರದ ಬಾವಿಯಿಂದ ಹೊತ್ತು ತರುತ್ತಿದ್ದಾರೆ. ಗ್ರಾಮಸ್ಥರೆಲ್ಲರೂ ಗ್ರಾ.ಪಂ. ಪೂರೈಸುವ ನಳ್ಳಿ ನೀರನ್ನೇ ಬಳಸುವುದರಿಂದ ಈ ಕುಟುಂಬ ಕುಡಿಯುತ್ತಿರುವ ಬಾವಿ ನೀರು ಶುದ್ಧವಾಗಿದೆಯೇ? ನೋಡುವವರಿಲ್ಲ.

ಸಂಬಂಧಿಕರು ತಾತ್ಕಾಲಿಕವಾಗಿ ಆಶ್ರಯ ಕೊಟ್ಟಿದ್ದು, ಈಗ ಜಾಗ ಬಿಡುವಂತೆ ಸೂಚಿಸಿದ್ದಾರೆ, ಈ ಕುರಿತು ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾರೆ. ದಿಕ್ಕು ತೋಚದ ಕುಟುಂಬಕ್ಕೆ ಪ್ರಸ್ತುತ ವರ್ಷದ ಶಾಲೆಯ ಅವಧಿ ಮುಗಿಯುವವರೆಗೆ ಹಾಲಿ ಜಾಗದಲ್ಲೇ ವಾಸ್ತವ್ಯ ಇರುವಂತೆ ಸಂಧಾನ ಮಾತುಕತೆ ನಡೆಸಲಾಗಿದೆ. ಮುಂದೆ ಬದುಕು ನಡೆಸುವುದು ಹೇಗೆ? ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೇಗೆ ಎಂದು ಗುರುವಪ್ಪ ದಂಪತಿಗೆ ದಿಕ್ಕೇ ತೋಚದಂತಾಗಿದೆ. ಗಂಡು ಮಕ್ಕಳಾದ ಉಮೇಶ, ಕುಮಾರ. ಹರೀಶ, ಹೆಣ್ಣು ಮಕ್ಕಳಾದ ಗೌತಮಿ ಹಾಗೂ ದೀಪಿಕಾ ಸಹಿತ 7 ಸದಸ್ಯರು ಇರುವ ಕೊರಗ ಜನಾಂಗದ ಈ ಕುಟುಂಬದ ನೆರವಿಗೆ ಸರಕಾರ ಹಾಗೂ ಸಂಘ-ಸಂಸ್ಥೆಗಳು ಮುಂದೆ ಬರಬೇಕು. ಸರಕಾರದ ದಾಖಲೆ ಪತ್ರಗಳು ಹಾಗೂ ಸವ ಲತ್ತುಗಳನ್ನು ದೊರಕಿಸಿಕೊಡಬೇಕು ಎಂದು ಅಂಗಲಾಚುತ್ತಿದೆ. 

ನಿವೇಶನ ನೀಡುತ್ತೇವೆ
ಗುರುವಪ್ಪ ಕುಟುಂಬ ನಿವೇಶನ ಹಾಗೂ ಮನೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿರುವ ಮಾಹಿತಿ ಗೊತ್ತಿದೆ. ಅವರಿಗೆ94ಸಿ ಅಡಿ ಅಲ್ಲಿಯೇ ನಿವೇಶನ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರು ಅರ್ಜಿ ಕೊಡಲಿಲ್ಲ. ಮುಂದೆ ಪಂಚಾಯತ್‌ ನಿವೇಶನ ನೀಡುವ ಸಂದರ್ಭದಲ್ಲಿ ನಿವೇಶನ ನೀಡುತ್ತೇವೆ. ಅವರು ಕೊರಗ ಸಮುದಾಯದವರು ಎಂದು ಖಚಿತಪಡಿಸುವ ದಾಖಲೆ ಅವರಲ್ಲಿ ಇಲ್ಲದೆ
ತೊಂದರೆ ಆಗಿದೆ.
ಸುಧೀರ್‌ ಕುಮಾರ್‌ ಶೆಟ್ಟಿ ಮಿತ್ತೂರು,
   ಉಪಾಧ್ಯಕ್ಷರು, ಗ್ರಾ.ಪಂ. ಇಡ್ಕಿದು

Advertisement

ಉಮರ್‌ ಕಬಕ

Advertisement

Udayavani is now on Telegram. Click here to join our channel and stay updated with the latest news.

Next