ಬೆಂಗಳೂರು: ದಿ ವಿಲನ್ ಚಿತ್ರದ ಕುರಿತು ವ್ಯಾಪಕವಾಗಿ ಟೀಕೆಗಳು, ಪುಕಾರುಗಳನ್ನು ಹಬ್ಬಿಸಿ ವಿವಾದ ಹುಟ್ಟು ಹಾಕುತ್ತಿರುವವರ ವಿರುದ್ಧ ನಿರ್ದೇಶಕ ಪ್ರೇಮ್ ಅವರು ಠಾಣೆಯ ಮೆಟ್ಟಿಲೇರಿದ್ದಾರೆ.
ಮಂಗಳವಾರ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಅವರ ಕಚೇರಿಗೆ ಆಗಮಿಸಿದ ನಿರ್ದೇಶಕ ಪ್ರೇಮ್ ಪುಕಾರು ಹಬ್ಬಿಸಿ, ಚಿತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರು ಮತ್ತು ವೈಯಕ್ತಿಕವಾಗಿ ಕೀಳು ಮಟ್ಟದ ಟೀಕೆಗಳನ್ನು ಮಾಡುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಅವರು ಪ್ರೇಮ್ ಅವರು ನೀಡಿರುವ ದೂರನ್ನು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಪೊಲೀಸ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಈಗಾಗಲೇ ಮೂವರನ್ನು ಪತ್ತೆ ಹಚ್ಚಲಾಗಿದ್ದು , ಇನ್ನುಳಿದವರನ್ನು ವಿಚಾರಿಸುವುದಾಗಿ ತಿಳಿಸಿದ್ದಾರೆ.
ಚಿತ್ರ ಬಿಡುಗಡೆಯಾದ ಬಳಿಕ ದೃಶ್ಯವೊಂದನ್ನು ಆಕ್ಷೇಪಿಸಿ ಶಿವರಾಜ್ ಕುಮಾರ್ ಅವರ ಅಭಿಮಾನಿಗಳೆಂದು ಹೇಳಿಕೊಂಡಿದ್ದ ಹಲವರು ವ್ಯಾಪಕ ಆಕ್ರೋಶ ಹೊರ ಹಾಕಿದ್ದರು. ನಿರ್ದೇಶಕ ಪ್ರೇಮ್,ರಕ್ಷಿತಾ, ನಟ ಸುದೀಪ್ ವಿರುದ್ಧ ಅವಾಚ್ಯ ಶಬ್ಧಗಳಿಂದಲೂ ವೈಯಕ್ತಿಕ ನಿಂದನೆ ಮಾಡಿದ್ದರು.