Advertisement

ವಿಲನ್‌ ಪಾತ್ರಕ್ಕೇ ಸೀಮಿತವಾಗಲ್ಲ

11:04 AM Sep 17, 2018 | |

ಕವಿತಾ ಲಂಕೇಶ್‌ ನಿರ್ದೇಶನದ “ಬಿಂಬ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕನ್ನಡದ ನಟ ಸಂಪತ್‌ರಾಜ್‌, ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ಸಸ್‌ ಫ‌ುಲ್‌ ಖಳನಟರಾಗಿ ಮಿಂಚುತ್ತಿದ್ದಾರೆ. ಆಗಾಗ ಕನ್ನಡ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಸಂಪತ್‌ರಾಜ್‌, ಈಗ ಕನ್ನಡದ “ಅನುಕ್ತ’ ಎಂಬ ಹೊಸಬಗೆಯ ಚಿತ್ರದಲ್ಲೂ ನಟಿಸಿದ್ದಾರೆ. ಚಿತ್ರದ ಟೀಸರ್‌ ಬಿಡುಗಡೆಗೆ ಆಗಮಿಸಿದ್ದ ಸಂಪತ್‌ರಾಜ್‌ ಜೊತೆ ಒಂದು “ಚಿಟ್‌ಚಾಟ್‌’.

Advertisement

* ಕನ್ನಡದಿಂದ ಅವಕಾಶ ಹೇಗಿದೆ?
ಅವಕಾಶಕ್ಕೇನೂ ಕೊರತೆ ಇಲ್ಲ. ಆದರೆ, ಒಳ್ಳೆಯ ಸ್ಕ್ರಿಪ್ಟ್ಗೆ ಕಾಯುತ್ತಿದ್ದೇನೆ. ಹಾಗೆ ನೋಡಿದರೆ, ನನ್ನ ಕೆರಿಯರ್‌ ಶುರುವಾಗಿದ್ದೇ ಕನ್ನಡ ಚಿತ್ರದಿಂದ. ಇಲ್ಲಿಂದ ಚೆನ್ನೈ, ಅಲ್ಲಿಂದ ಹೈದರಾಬಾದ್‌ಗೆ ಹೋಗಿ ಬಿಜಿಯಾದೆ. ನಾನು ಕಥೆ ಕೇಳುವಾಗ, ನನ್ನ ಪಾತ್ರ ಹೇಗಿದೆ, ನಟನೆಗೆ ಜಾಗ ಇದೆಯೋ ಇಲ್ಲವೋ ಎಂಬುದನ್ನು ನೋಡ್ತೀನಿ. ಇಷ್ಟವಾಗದಿದ್ದರೆ ಮಾಡೋದಿಲ್ಲ. ಕನ್ನಡದಿಂದ ಕಳೆದ ಆರೇಳು ತಿಂಗಳಿನಿಂದಲೂ ಸಾಕಷ್ಟು ಅವಕಾಶ ಬರುತ್ತಿವೆ. ನನಗೆ ರೆಗ್ಯುಲರ್‌ ಪಾತ್ರ ಬೇಡ ಅಂತ ಕಾಯುತ್ತಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡದಲ್ಲಿ ಹೊಸ ತರಹದ ಚಿತ್ರಗಳು ಬರುತ್ತಿವೆ. ಮುಂದೆ ನನ್ನನ್ನು ಹುಡುಕಿ ಒಳ್ಳೆಯ ಸ್ಕ್ರಿಪ್ಟ್ ಬರುತ್ತೆ ಎಂಬ ನಂಬಿಕೆ ಇದೆ. 

* ಸಂಪತ್‌ರಾಜ್‌ ಇದ್ದರೆ ಅದು ವಿಲನ್‌ ಅಂತಾನೇ ಅಲ್ವಾ?
ಸಾಮಾನ್ಯವಾಗಿ ನಾನಿದ್ದೇನೆ ಅಂದರೆ ಅದು ವಿಲನ್‌ ಪಾತ್ರ ಅಂದುಕೊಳ್ತಾರೆ. ನಾನು ವಿಲನ್‌ ಪಾತ್ರಕ್ಕೂ ಸೈ, ನಾಯಕ, ನಾಯಕಿಯ ತಂದೆ ಪಾತ್ರಕ್ಕೂ ಸೈ. ಆದರೆ, “ಅನುಕ್ತ’ ಚಿತ್ರದಲ್ಲಿರುವ ಪಾತ್ರ ವಿಭಿನ್ನ. ಇಲ್ಲಿ ಎಮೋಷನ್ಸ್‌ ಜಾಸ್ತಿ ಇದೆ. ನನ್ನನ್ನು ಆ ಪಾತ್ರದಲ್ಲಿ ಈವರೆಗೆ ನೋಡಿಲ್ಲ. ನೋಡಿದವರಿಗೆ ಸಂಪತ್‌ರಾಜ್‌ ಬೇರೆ ಕಾಣಾ¤ರೆ. 

* ನಿಮ್ಮನ್ನ ಬರೀ ವಿಲನ್‌ ಪಾತ್ರಕ್ಕೇ ಫಿಕ್ಸ್‌ ಮಾಡ್ತಾರಲ್ಲ?
ಹಾಗೇನೂ ಇಲ್ಲ. ನೀವು ಟಾಲಿವುಡ್‌ನ‌ಲ್ಲಿ ಗಮನಿಸಿದರೆ, ನಾನು ರಾಕುಲ್‌ ಪ್ರೀತ್‌ಸಿಂಗ್‌ಗೆ ಫಾದರ್‌ ಆಗಿಯೂ ಕಾಣಿಸಿಕೊಂಡಿದ್ದೇನೆ. ಅದೇ ಇನ್ನೊಂದು ಚಿತ್ರ ನೋಡಿದರೆ, ಅದೇ ರಾಕುಲ್‌ ಪ್ರೀತ್‌ಸಿಂಗ್‌ ಎದುರು ವಿಲನ್‌  ಆಗಿಯೂ ನಟಿಸಿದ್ದೇನೆ. ನನಗೆ ಪಾಸಿಟಿವ್‌, ನೆಗೆಟಿವ್‌ ಅನ್ನೋದು ಗೊತ್ತಿಲ್ಲ. ಸಂಪತ್‌‌ರಾಜ್‌ ಅಂದರೆ, ಒಳ್ಳೆಯ ಕಲಾವಿದ ಎನಿಸಿಕೊಳ್ಳಬೇಕಷ್ಟೆ. ಅದಕ್ಕಾಗಿಯೇ ನಾನು ಸಿನ್ಮಾಗೆ ಬಂದಿದ್ದೇನೆ.

* ನೀವು ಕಂಡಂತೆ ಈಗ ಕನ್ನಡ ಚಿತ್ರರಂಗ ಹೇಗಿದೆ?
ನಿಜ ಹೇಳುವುದಾದರೆ, ಇಲ್ಲೀಗ ಸದಭಿರುಚಿಯ ಚಿತ್ರಗಳು ಬರುತ್ತಿವೆ. ಮಲಯಾಳಂ ಚಿತ್ರರಂಗದ ನಿರ್ಮಾಪಕರು ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿವೆ. ಅಲ್ಲಿನ ಕನ್ನಡ ಚಿತ್ರವನ್ನು ಮಲಯಾಳಂಗೆ ಮಾಡಬೇಕು ಎನ್ನುತ್ತಿದ್ದಾರೆ. ಕನ್ನಡ ಚಿತ್ರಗಳು ಬೇರೆ ಕಡೆಯೂ ಸುದ್ದಿಯಾಗುತ್ತಿವೆ. ಕನ್ನಡ ಸಿನಿಮಾ ಬಗ್ಗೆ ಬೇರೆ ಭಾಷಿಗರು ಮಾತಾಡಿದರೆ ನನಗೆ ಹೆಮ್ಮೆ.

Advertisement

* ನಿರ್ದೇಶನದ ಯೋಚನೆ ಏನಾದರೂ ಇದೆಯೇ?
ಸದ್ಯಕ್ಕೆ ಆ ಯೋಚನೆ ಇಲ್ಲ. ಇತ್ತೀಚೆಗೆ ತಮಿಳು ಭಾಷೆಯಲ್ಲಿ ಐದು ನಿಮಿಷದ ಒಂದು ಕಿರುಚಿತ್ರ ನಿರ್ದೇಶಿಸಿದ್ದೇನೆ. ಅದು ಬಿಟ್ಟರೆ, ತಮಿಳಿನಲ್ಲಿ “ಮಾಷ್‌ ಅಲ್ಲಾ ಗಣೇಶ’ ಎಂಬ 16 ನಿಮಿಷದ ಕಿರುಚಿತ್ರ ನಿರ್ಮಿಸಿದ್ದೇನೆ. ಅದು ಗಲಾಟೆಯೊಂದರಲ್ಲಿ ಮುಸ್ಲಿಂ ಫ್ಯಾಮಿಲಿಯೊಂದು ಗಣೇಶನ ದೇವಾಲಯದ ಒಳಗೆ ಹೋಗಿ ಬಚ್ಚಿಟ್ಟುಕೊಳ್ಳುತ್ತದೆ. ಆ ದೇಗುಲದ ಒಳಗೆ ಹೋದಾಗ ಅವರ ಮನಸ್ಸಲ್ಲಿ ಏನೆಲ್ಲಾ ಪರಿವರ್ತನೆಯಾಗುತ್ತೆ ಎಂಬುದು ಕಥೆ. ಅದು ಯುಟ್ಯೂಬ್‌ನಲ್ಲಿ ಸಿಗಲ್ಲ. ಬದಲಾಗಿ “ವೀವ್‌’ ಎಂಬ ಹೊಸ ಆ್ಯಪ್‌ನಲ್ಲಿ ಲಾಂಚ್‌ ಆಗಿದೆ. ಇನ್ನು, ಎರಡು ಸ್ಕ್ರಿಪ್ಟ್ ಬರೆಯುತ್ತಿದ್ದೇನೆ. ಎಲ್ಲಾ ಭಾಷೆಗೂ ಸಲ್ಲುವ ಕಥೆ ಅದು. ಅದರಲ್ಲಿ ಫೈಟ್ಸ್‌ ಇರಲ್ಲ, ಧೂಳು ಎದ್ದೇಳಲ್ಲ, ಟಾಟಾ ಸುಮೋಗಳು ಎಗರುವುದಿಲ್ಲ. ರೌಡಿಗಳು ತೇಲಾಡುವುದಿಲ್ಲ. ವಿಲನ್‌ ಶೇಡ್‌ ಇರೋದಿಲ್ಲ. ಒಂದು ಸ್ಟ್ರಾಂಗ್‌ ಕಂಟೆಂಟ್‌ ಇರುವ ಕಥೆ ಅದು.

* “ಅನುಕ್ತ’ ಕ್ಲೈಮ್ಯಾಕ್ಸ್‌ ಸೀನ್‌ ರೀ ಶೂಟ್‌ ಆಯ್ತಂತೆ?
ಹೌದು, “ಅನುಕ್ತ’ ಚಿತ್ರದ ಕ್ಲೈಮ್ಯಾಕ್ಸ್‌ ಮುಗಿಸಿದಾಗ, ಯಾಕೋ ಅದು ನನಗೆ ಕನ್ವೆನ್ಸ್‌ ಆಗಲಿಲ್ಲ. ನಾನು ಹಿರಿಯ ನಟ ಎಂಬ ಕಾರಣಕ್ಕೆ ನಿರ್ದೇಶಕರು ಮತ್ತೂಮ್ಮೆ ಮಾಡೋಣ ಅಂತ ಹೇಳಲಿಲ್ಲವೇನೋ ಎಂಬ ಅನುಮಾನವಿತ್ತು. ಆದರೂ, ಸೀನ್‌ ಮುಗಿಸಿ, ರೂಮ್‌ಗೆ ಬಂದೆ. ಅದೇಕೋ ಆ ಸೀನ್‌ ನನಗೆ ತೃಪ್ತಿ ಎನಿಸಲಿಲ್ಲ. ರೂಮ್‌ನಲ್ಲಿ ಆ ಸೀನ್‌ ನೆನಪಿಸಿಕೊಂಡೆ. ಅದೊಂದು ಮುಖ್ಯವಾದ ದೃಶ್ಯ. ತಪ್ಪಾಗಿದೆ ಅನಿಸಿತು. ಮರುದಿನ ನಿರ್ದೇಶಕರ ಬಳಿ ಬಂದು, ನಿಮಗೆ ಟೈಮ್‌ ಇದ್ದರೆ, ಕ್ಲೈಮ್ಯಾಕ್ಸ್‌ ರೀ ಶೂಟ್‌ ಮಾಡೋಣ. ಇಲ್ಲದಿದ್ದರೆ, ನಾನೇ ಇನ್ನೊಮ್ಮೆ ಡೇಟ್‌ ಕೊಡ್ತೀನಿ. ಆಗ ರೀ ಶೂಟ್‌ ಮಾಡಿ, ಯಾಕೋ ಆ ಸೀನ್‌ ಸರಿ ಬಂದಿಲ್ಲ ಅಂದೆ. ಎಲ್ಲರೂ ಓಕೆ ಅಂದರು. ರೀ ಶೂಟ್‌ ಆಯ್ತು. ಈಗ ಔಟ್‌ ಪುಟ್‌ ನೋಡಿದಾಗ ಖುಷಿಯಾಗುತ್ತೆ. ನನಗನ್ನಿಸಿದ್ದನ್ನು ಹೇಳಿದೆ. ನಿರ್ದೇಶಕರು ಕೇಳಿದರು. ಎಲ್ಲವೂ ಸಿನಿಮಾಗಾಗಿ ಅಷ್ಟೇ.

* ನಿರ್ದೇಶಕರಿಗೆ ಸಲಹೆ ಕೊಡುವುದುಂಟಾ?
ನಾನು ಎಲ್ಲಾ ಬಗೆಯ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. “ಸರ್‌ ನಿಮ್ಮ ಎಡಗಾಲು ಇಷ್ಟೇ ಇಡಬೇಕು, ಈ ಡೈಲಾಗ್‌ ಬರುವಾಗ, ಕಾಲು ಇಡಬೇಕು’ ಎಂದು ಹೇಳುವ ನಿರ್ದೇಶಕರ ಬಳಿ ಕೆಲಸ ಮಾಡಿದ್ದು ಇದೆ. ಅಂಥವರಿಗೆ ನಾನು ಸಲಹೆ ಕೊಡುವುದಿಲ್ಲ. ಅವರು ಹೇಳಿದಂತೆ ಮಾಡಿ ಬರ್ತೀನಿ. ನಟನಾದವನು ನಿರ್ದೇಶಕರ ವೇವ್‌ಲೆಂಥ್‌ ಅರ್ಥಮಾಡಿಕೊಂಡು, ಅವರ ಜೊತೆಗೆ ಇಳಿದರೆ, ಎಲ್ಲವೂ ಸುಲಭ. ಒಂದು ವೇಳೆ ಅವರ ವೇವ್‌ಲೆಂಥ್‌ಗೆ ನಾನೇಕೆ ಅಡ್ಜೆಸ್ಟ್‌ ಆಗಬೇಕು ಅಂದುಕೊಂಡರೆ, ಸಮಸ್ಯೆ ಜಾಸ್ತಿ. ಸಾಧ್ಯವಾದಷ್ಟು ನಾನೇ ನಿರ್ದೇಶಕರಿಗೆ ಶರಣಾಗಿಬಿಡ್ತೀನಿ.

Advertisement

Udayavani is now on Telegram. Click here to join our channel and stay updated with the latest news.

Next