Advertisement

ಪುರಾತನ ಕೆರೆಗಳಿಗೆ ಕಾಯಕಲ್ಪ ನೀಡಿದ ಗ್ರಾಮಸ್ಥರು

08:20 AM May 29, 2020 | Suhan S |

ಶಿವಮೊಗ್ಗ: ಹೊಸನಗರ ತಾಲೂಕಿನ ಮುತ್ತಲ ಗ್ರಾಮಸ್ಥರು ಸರ್ಕಾರದ ಯಾವುದೇ ನೆರವಿಲ್ಲದೇ ಗ್ರಾಮದ ಮೂರು ಪುರಾತನ ಕೆರೆಗಳನ್ನು ಹೂಳೆತ್ತಿ, ಅವುಗಳಿಗೆ ಮರುಜೀವ ನೀಡುವ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.

Advertisement

ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಕೈಗೊಂಡಿರುವ ಮುತ್ತಲ ಗ್ರಾಮಸ್ಥರಿಗೆ “ಸಾರಾ’ ಎಂಬ ಸಂಸ್ಥೆ ಮಾರ್ಗದರ್ಶನ ನೀಡುತ್ತಿದೆ. ಗ್ರಾಮದಲ್ಲಿ 82 ಮನೆಗಳಿದ್ದು, ಎಲ್ಲರೂ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಕೆರೆ ಹೂಳೆತ್ತುವ ಮೂಲಕ ಗ್ರಾಮದಲ್ಲಿನ ಕೃಷಿ ಚಟುವಟಿಕೆಗಳಿಗೆ ಸ್ಥಳೀಯವಾಗಿ ನೀರಿನ ಮೂಲ ಕಂಡುಕೊಳ್ಳುವ ಹಾದಿಯಲ್ಲಿ ಗ್ರಾಮಸ್ಥರು ಯಶಸ್ಸನ್ನು ಕಂಡುಕೊಂಡಿದ್ದಾರೆ. ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ನಿರ್ಣಯ ಕೈಗೊಂಡ ಬಳಿಕ, ಗ್ರಾಮದಲ್ಲಿನ 3 ಪುರಾತನ ಕೆರೆಗಳನ್ನು ಈ ಕಾರ್ಯಕ್ಕಾಗಿ ಗುರುತಿಸಲಾಯಿತು. ಪ್ರಥಮವಾಗಿ ಮಾಕೋಡು ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿ, ಸರ್ಕಾರದ ನೆರವಿಗಾಗಿ ಕಾಯದೇ, ಗ್ರಾಮಸ್ಥರೇ ಈ ಕಾರ್ಯದಲ್ಲಿ ತೊಡಗಲು ನಿರ್ಧರಿಸಿದೆವು. ಇದೇ ಸಂದರ್ಭದಲ್ಲಿ ಸಾರಾ ಎಂಬ ಸರ್ಕಾರೇತರ ಸಂಸ್ಥೆಯ ನೆರವು ದೊರೆಯಿತು.  ಸಂಸ್ಥೆಯವರು ಜೆಸಿಬಿ ಒದಗಿಸಿದರು. ಊರಿನ ಪ್ರತಿಯೊಂದು ಮನೆಯವರ ತನು-ಮನ-ಧನದ ಸಹಕಾರದೊಂದಿಗೆ ಕೆರೆಯ ಹೂಳು ತೆಗೆದು ಮರುಜೀವ ನೀಡಲು ಸಾಧ್ಯವಾಗಿದೆ’ ಎಂದು ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ ತಿಳಿಸಿದ್ದಾರೆ.

ಮೊದಲ ಪ್ರಯತ್ನದ ಯಶಸ್ಸಿನಿಂದ ಉತ್ತೇಜಿತರಾಗಿ ಇದೀಗ ಊರಿನ ಇನ್ನೊಂದು ಹಳೆಯ ವರ್ತೆ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೇ.60ರಷ್ಟು ಕೆಲಸ ಮುಗಿದಿದೆ. ಇನ್ನೊಂದು ವಾರದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ಮಾಕೋಡು ಕೆರೆ ಅಭಿವೃದ್ಧಿಯಿಂದ 22ಎಕರೆ ಜಮೀನಿಗೆ ನೀರಾವರಿ ಸಾಧ್ಯವಾಗಲಿದೆ. ಇದೇ ರೀತಿ ವರ್ತೆ ಕೆರೆ ಅಭಿವೃದ್ಧಿಯಿಂದ 60 ಎಕರೆ ಜಮೀನಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. ಮಾಕೋಡು ಕೆರೆ ಅಭಿವೃದ್ಧಿಗೆ 2.40 ಲಕ್ಷ ರೂ. ವೆಚ್ಚವಾಗಿದ್ದು, ವರ್ತೆ ಕೆರೆ ಅಭಿವೃದ್ಧಿಗೆ 3.80 ಲಕ್ಷ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಇನ್ನೊಂದು ಕೆರೆ ಅಭಿವೃದ್ಧಿ ಕಾರ್ಯವನ್ನು ಮಳೆಗಾಲ ಮುಗಿದ ಬಳಿಕ ಜನವರಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಗ್ರಾಮದಲ್ಲಿ ಇನ್ನೊಂದು ಇಂಗು ಗುಂಡಿ ಕಾಮಗಾರಿಯನ್ನು ಸಹ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವರ ಮೆಚ್ಚುಗೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಬುಧವಾರ ಮುತ್ತಲ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಂತರ್ಜಲ ಚೇತನ ಯೋಜನೆಯಡಿ ಜಿಲ್ಲಾದ್ಯಂತ ಕೆರೆಗಳ ಪುನಃಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಜನರ ಸಹಭಾಗಿತ್ವದಿಂದ ಮಾತ್ರ ಇಂತಹ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂಬುವುದನ್ನು ಮುತ್ತಲ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next