ಎಚ್.ಡಿ.ಕೋಟೆ: ಹತ್ತಾರು ಹಳ್ಳಿಗಳ ಜನರಿಗೆ ಸೂರು, ನಿವೇಶನ ಮಂಜೂರು ಮಾಡುವ ಗ್ರಾಮ ಪಂಚಾಯ್ತಿ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಎಚ್.ಡಿ.ಕೋಟೆ-ಸರಗೂರು ತಾಲೂಕಿನ ಹಾದನೂರು ಗ್ರಾಮ ಪಂಚಾಯ್ತಿಯು ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ಈ ಗ್ರಾಮ ಪಂಚಾಯ್ತಿಗೆ ನೂತನ ಸ್ವಂತ ಕಟ್ಟಡ ನಿರ್ಮಾಣಕ್ಕೆ 2018-19ನೇ ಸಾಲಿನಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರದ ಯೋಜನೆಯಡಿ 42 ಲಕ್ಷ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಮಂಜೂರಾತಿ ಲಭಿಸಿತ್ತು. ಕಟ್ಟಡದ ಕಾಮಗಾರಿ ಅರಂಭಗೊಂಡು 12 ಲಕ್ಷ ರೂ. ಅನುದಾನ ಕೂಡ ಬಿಡುಗಡೆಯಗಿತ್ತು.
ತಾಂತ್ರಿಕ ದೋಷ: ಈ ಅನುದಾನ ಖರ್ಚಾಗುತ್ತಿದ್ದಂತೆಯೇ ಮುಂದಿನ ಕಂತಿನ ಹಣಕ್ಕಾಗಿ ಗ್ರಾಮ ಪಂಚಾಯ್ತಿ ಪ್ರಸ್ತಾವನೆ ಸಲ್ಲಿಸಲಾಯಿತು. ಆದರೆ, ತಾಂತ್ರಿಕ ದೋಷದಿಂದ ಮಂಜೂರಾತಿ ಅನುದಾನಕ್ಕಿಂತ ಹೆಚ್ಚಿನ ಹಣ ಮಂಜೂರಾಗಿರುವುದಾಗಿ ದಾಖಲಾತಿಯಲ್ಲಿ ತೋರಿಸುತ್ತಿತ್ತು. ಹೀಗಾಗಿ ಅನುದಾನ ಬಿಡುಗಡೆಗೆ ತಡೆಯಾಗಿದೆ. ಅನುದಾನ ಸ್ಥಗಿತಗೊಳ್ಳುತ್ತಿದ್ದಂತೆಯೇ ಗ್ರಾಮ ಪಂಚಾಯ್ತಿ ಕಟ್ಟಡದ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದ್ದು, ವರ್ಷ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಗ್ರಾಮಗಳ ಅಭಿವೃದ್ಧಿಯ ಹೊಣೆ ಹೊತ್ತ ಗ್ರಾಮ ಪಂಚಾಯ್ತಿ ಸದಸ್ಯರು, ಆಡಳಿತ ಮಂಡಳಿ ಸೇರಿದಂತೆ ಅಧಿಕಾರಿಗಳಿಗೆ ಆಶ್ರಯ ತಾಣವಾಗಬೇಕಾದ ಗ್ರಾಮ ಪಂಚಾಯ್ತಿ ನೂತನ ಕಟ್ಟಡ ಈಗ ಹಾವು ಚೇಳುಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಪಾಳು ಬಿದ್ದಂತೆ ಕಾಣುತ್ತಿದೆ.
ಪತ್ರಕ್ಕೆ ಪ್ರತಿಕ್ರಿಯೆ ಇಲ್ಲ: ತಾಂತ್ರಿಕ ದೋಷ ಸರಿದೂಗಿಸಿ ಅನುದಾನ ಬಿಡುಗಡೆಗೊಳಿಸಿದರೆ ಗ್ರಾಪಂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುತ್ತದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಂಬಂಧ ಪಟ್ಟ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರಬರೆದು ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ಮಾನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಅಧಿಕಾರಿಗಳೇ, ದೋಷ ಸರಿಪಡಿಸಿ: ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಪಂಚಾಯ್ತಿ ಕಟ್ಟಡದ ಕಾಮಗಾರಿ ನೆನಗುದಿಗೆ ಬಿದ್ದಿದ್ದು, ಅಪೂರ್ಣಗೊಂಡ ಕಟ್ಟಡ ಇದೀಗ ಜಂತುಗಳ ಮತ್ತು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನೂತನ ಕಟ್ಟಡದ ಒಳ ಹಾಗೂ ಹೊರಗೆ ಗಿಡಗಂಟಿಗಳು ಬೆಳೆದು ನಿಂತು ಪುಟ್ಟ ಕಾಡಿನಂತೆ ಕಾಣುತ್ತಿದೆ. ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನ ಹರಿಸಿ ತಾಂತ್ರಿಕ ದೋಷವನ್ನು ಪರಿಹರಿಸಿ ಅನುದಾನ ತ್ವರಿತಗತಿಯಲ್ಲಿ ಬಿಡುಗಡೆಗೊಳಿಸಿದರೆ ಗ್ರಾಪಂ ಕಟ್ಟಡ ಪೂರ್ಣಗೊಂಡು ಕಚೇರಿ ಆರಂಭಕ್ಕೆ ಚಾಲನೆ ದೊರೆತಂತಾಗಲಿದೆ.
ಇಲ್ಲದಿದ್ದರೆ ಈಗಾಗಲೇ ಸುಮಾರು 12 ಲಕ್ಷ ರೂ. ವ್ಯಯಿಸಿ ನಿರ್ಮಾಣಗೊಂಡು ಅಪೂರ್ಣಗೊಂಡು ಮಳೆ ಗಾಳಿಗೆ ಸಿಲುಕಿ ಗುಣಮಟ್ಟ ಕಳೆದುಕೊಂಡು ಪಾಳು ಬೀಳಲಿದೆ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲಾಗಲಿದೆ. ಹೀಗಾಗದಂತೆ ಕ್ರಮ ಕೈಗೊಳ್ಳಬೇಕಿದೆ.
ತಾಂತ್ರಿಕ ದೋಷ ಸರಿಪಡಿಸಿ ಗ್ರಾಪಂ ಕಟ್ಟಡ ಪೂರ್ಣಗೊಳಿಸಿ: ಹಾದನೂರು ಗ್ರಾಮ ಪಂಚಾಯ್ತಿ ಕಟ್ಟಡ ಕಾಮಗಾರಿ ತಾಂತ್ರಿಕ ದೋಷದಿಂದ ಅನುದಾನ ಬಿಡುಗಡೆಯಾಗಿಲ್ಲ. ವರ್ಷದಿಂದ ಕಟ್ಟಡ ಕಾಮಗಾರಿ ನೆನಗುದಿಗೆ ಬಿದ್ದಿದೆ. ಆದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಸರಿಪಡಿಸಲು ಕಾಳಜಿ ತೋರುತ್ತಿಲ್ಲ. ಗಾಳಿ ಮಳೆಗೆ ಸಿಲುಕಿ ಅಪೂರ್ಣಗೊಂಡ ಗ್ರಾಪಂ ಕಟ್ಟಡ ಗುಣಮಟ್ಟ ಕಳೆದುಕೊಂಡು ಪಾಳು ಬೀಳುವ ಮುನ್ನ ಅನುದಾನ ಬಿಡುಗಡೆ ಮಾಡಿ ಕಟ್ಟಡ ಪೂರ್ಣಗೊಳಿಸಬೇಕಾಗಿದೆ ಎಂದು ಗ್ರಾಪಂ ಸದಸ್ಯ ಹಾದನೂರು ಪ್ರಕಾಶ್ ಆಗ್ರಹಿಸಿದ್ದಾರೆ.
* ಎಚ್.ಬಿ.ಬಸವರಾಜು