Advertisement

ಹಳ್ಳಿ ಸೊಗಡು ನೆನಪಿಸಿದ ಸುಗ್ಗಿ ಸಂಭ್ರಮ

06:26 AM Jan 16, 2019 | |

ಬೆಂಗಳೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಹಳ್ಳಿ ಸೊಗಡು ಮೇಳೈಸಿತ್ತು. ದೇವಸ್ಥಾನಗಳಲ್ಲಿ ಭಕ್ತರ ದಂಡು, ವಿಶೇಷ ಪೂಜೆ, ಮನೆಗಳ ಮುಂದೆ ಚಿತ್ತಾರದ ರಂಗೋಲಿ “ಸುಗ್ಗಿ ಹಿಗ್ಗಿ’ಗೆ ಮತ್ತಷ್ಟು ಕಳೆ ತಂದಿತ್ತು. ಸಂಕ್ರಾಂತಿ ಶುಭಾಶಯ ಎಂಬ ಅಡಿ ಬರಹ, ಕಬ್ಬು ಎಳ್ಳು -ಬೆಲ್ಲಗಳ ವಿನಿಮಯದ ಸಂಭ್ರಮ ಜೋರಾಗಿತ್ತು.

Advertisement

ಪೊಂಗಲ್‌ನ ಘಮಲಿನ ನಡುವೆ ಹೊಸ, ಬಟ್ಟೆ ತೊಟ್ಟಿದ್ದ ಮಕ್ಕಳ ಖುಷಿಗೆ ಪಾರವೇ ಇಲ್ಲದಾಗಿತ್ತು. ಸಂಜೆ ಆಗುತ್ತಿದ್ದಂತೆ ನಾನಾ ಭಾಗಗಳಲ್ಲಿ ನಡೆದ ರಾಸುಗಳ ಮೆರವಣಿಗೆ ಸೇರಿದಂತೆ ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ನಗರದ ಜನತೆಯನ್ನು ಹಳ್ಳಿಗಾಡಿನ ಸಂಸ್ಕೃತಿಗೆ ಕೊಂಡೊಯ್ದವು. ಇದೇ ವೇಳೆ ನಡೆದ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಸೇರಿದಂತೆ ಹಲವು ಆಟಗಳು ರಂಜಿಸಿದವು.

ದೇವಾಲಯಗಳಲ್ಲಿ ವಿಶೇಷ ಪೂಜೆ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇಗುಲ, ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ದೇವಸ್ಥಾನ, ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯ, ಕೆ.ಆರ್‌. ಮಾರುಕಟ್ಟೆಯ ಕೋಟೆ ಪ್ರಸನ್ನ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ, ಜೆಪಿ ನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನ, ಬನಶಂಕರಿಯ ದೇವಗಿರಿ ವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದವು. 

ಬನಶಂಕರಿ, ಮಲ್ಲೇಶ್ವರ, ಜಯನಗರ, ಗಾಂಧಿಬಜಾರ್‌, ಕೆ.ಆರ್‌. ಮಾರುಕಟ್ಟೆಯಲ್ಲಿ ಬೆಳಗ್ಗೆ ಕಬ್ಬು, ಹೂವು- ಹಣ್ಣಿನ ವ್ಯಾಪಾರ ಭರ್ಜರಿಯಾಗಿತ್ತು. ಮತ್ತೂಂದು ಕಡೆ ನಾನಾ ಸಂಘ -ಸಂಸ್ಥೆಗಳ ಆಶ್ರಯದಲ್ಲಿ ಸಂಕ್ರಾಂತಿ ವಿಶೇಷವಾಗಿ ಆಚರಿಸಲಾಯಿತು.

ಕಡಲೆಕಾಯಿ ಪರಿಷೆ: ಸೋಂಪುರ ಬಳಿಯ ಚನ್ನವೀರಪಾಳ್ಯದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಕ್ರಾಂತಿ ಅಂಗವಾಗಿ ಕಡಲೆಕಾಯಿ ಪರಿಷೆ ನಡೆಯಿತು. ಬೆಳಗ್ಗೆಯಿಂದ ಸಂಜೆವರೆಗೂ ಪರಿಷೆ ಜತೆಗೆ ಸುಗ್ಗಿ ಸಂಭ್ರಮದ ವಿವಿಧ ಸ್ಪರ್ಧೆಗಳು ನಡೆದವು.

Advertisement

ಮೊಸರು ಗಡಿಗೆ ಒಡೆವ ಸ್ಪರ್ಧೆ: ಬನಶಂಕರಿಯ 3ನೇ ಹಂತದಲ್ಲಿನ ಭುವನೇಶ್ವರಿ ನಗರದಲ್ಲಿ ಆಯೋಜಿಸಲಾಗಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಬೆಳಗ್ಗೆ ನಡೆದ ಚಿತ್ರಕಲೆ ಸ್ಪರ್ಧೆ ಹಾಗೂ ಮಧ್ಯಾಹ್ನ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಯುವತಿಯರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು. ಮಹಾಲಕ್ಷಿ ದೇವಸ್ಥಾನ ಹಾಗೂ ಶ್ರೀನಗರದಲ್ಲಿ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಕಿಚ್ಚು ಹಾಯಿಸುವುದನ್ನು ನೋಡಲು ಅಪಾರ ಜನರು ಜಮಾಯಿಸಿದ್ದರು.

ಎಳ್ಳು ಬೆಲ್ಲ ಹಂಚಿದ ವಾಟಾಳ್‌: ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಕೂಡ ವಿಭಿನ್ನ ರೀತಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಗಮನ ಸೆಳೆದರು. ತೆರೆದ ವಾಹನದಲ್ಲಿ ಭುವನೇಶ್ವರಿ ದೇವಿಯ ಭಾವ ಚಿತ್ರ ಇರಿಸಿ ಮೈಸೂರು ಬ್ಯಾಂಕಿನಿಂದ ಮಲ್ಲೇಶ್ವರ, ಕೃಷ್ಣಯ್ಯರ್‌ ರಸ್ತೆ, ಚಿಕ್ಕಪೇಟೆ, ಕಬ್ಬನ್‌ ಪೇಟೆ, ಬಾಳೆ ಪೇಟೆ ಸೇರಿದಂತೆ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ದಾರಿಯುದ್ದಕ್ಕೂ ಜನರಿಗೆ ಕಬ್ಬು, ಎಳ್ಳು-ಬೆಲ್ಲ ಹಂಚಿ ಶುಭಾಶಯ ಕೋರಿದರು.

ಸಂಕ್ರಾಂತಿ ಸಂಗೀತ ಹಬ್ಬ: ಮಲ್ಲೇಶ್ವರದ ಸೇವಾ ಸದನದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಲಾವಿದರ ಸಂಗೀತ ಕಾರ್ಯಕ್ರಮ ನೆರೆದ ಸಂಗೀತ ರಸಿಕರ ಮನಸೆಳೆಯಿತು. ಶ್ರೀವಿದ್ಯಾ ರಾಮನಾಥ್‌ ಅವರ ಗಾಯನ, ವಿದ್ವಾನ್‌ ಅದಮ್ಯ ರಮಾನಂದ್‌ ಅವರ ಮೃದಂಗ ಮತ್ತು ವಿದ್ವಾನ್‌ ಬಿ.ಎಸ್‌. ರಘುನಂದನ್‌ ಅವರ ಘಟಂಗೆ ಅಂಸಖ್ಯಾತ ಸಂಗೀತ ಪ್ರಿಯರು ಮನಸೋತರು. ಅರಳ ಪೇಟೆಯ ಶ್ರೀಕೋದಂಡರಾಮ ಭಜನಾ ಮಂಡಳಿ ಸುಗ್ಗಿ ಸಂಭ್ರಮದ ಹಿನ್ನೆಲೆಯಲ್ಲಿ ವಿದ್ವಾನ್‌ ರಾಮದಾಸ್‌ ಮತ್ತು ವಿದ್ವಾನ್‌ ಚಲುವರಾಜು ಮತ್ತವರ ತಂಡದಿಂದ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿತ್ತು.

ಶಿವನಿಗೆ ಸೂರ್ಯ ಕಿರಣ ಜಳಕ: ನಗರದ ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಸೂರ್ಯನ ರಶ್ಮಿಯು ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸುವ ಘಳಿಗೆಯನ್ನು ಭಕ್ತರು ಕಣ್ಮುಂಬಿಕೊಂಡರು. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುವ ಸಮಯದಲ್ಲಾಗುವ ಈ ಅಪರೂಪದ ದೃಶ್ಯವನ್ನು ದೇಗುಲದ ಹೊರಗೆ ಎಲ್‌ಇಡಿ ಪರದೆ ಮೇಲೆ ಬಿತ್ತರಿಸಲಾಯಿತು.

ಸಂಜೆ 5.25ಕ್ಕೆ ಆರಂಭವಾದ ಪ್ರಕೃತಿಯ ಈ ಕೌತುಕವು ದೇವಾಲಯದಲ್ಲಿರುವ ನಂದಿಯ ಕೋಡಿನ ಮೂಲಕ ಮೊದಲಿಗೆ ಶಿವಲಿಂಗದ ಪಾದವನ್ನು ಸ್ಪರ್ಶಿಸಿದ ಕಿರಣಗಳು 5.29ರವರೆಗೆ ಶಿವಲಿಂಗವನ್ನು ಅಪ್ಪಿಕೊಂಡಿದ್ದವು. ಈ ವೇಳೆ ಶಿವಲಿಂಗಕ್ಕೆ ನೀರು ಹಾಗೂ ಹಾಲಿನ ಅಭಿಷೇಕ ಮಾಡಲಾಯಿತು. ಬಳಿಕ ಸಂಜೆ 6.30ರಿಂದ ರಾತ್ರಿ 10 ಗಂಟೆವರೆಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next