ಚಿಕ್ಕಮಗಳೂರು: ಕಳಸ ತಾಲೂಕು ಕಾರ್ಲೆ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ನಿತ್ಯ ನರಕ ವೇದನೆ ಅನುಭವಿಸುವಂತಾಗಿದೆ. ರಾಜ್ಯ ಸರ್ಕಾರ ಕಳಸ ತಾಲೂಕು ಕೇಂದ್ರವಾಗಿ ನಿರ್ಮಿಸಿದ್ದು, ಕಳಸದಿಂದ 20 ಕಿ.ಮೀ. ದೂರದಲ್ಲಿರುವ ಸಂಸೆ ಗ್ರಾಪಂ ವ್ಯಾಪ್ತಿಗೆ ಸೇರಿದ ಕಾರ್ಲೆ ಗ್ರಾಮ ಕುಗ್ರಾಮವಾಗಿದ್ದು, ಸಂಪರ್ಕ ಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ. ಗ್ರಾಮದಲ್ಲಿ 20 ಕುಟುಂಬಗಳು ವಾಸವಾಗಿದ್ದು, ಸರ್ಕಾರಿ ಕಚೇರಿ, ಆಸ್ಪತ್ರೆ, ದಿನಸಿ, ಕೃಷಿಗೆ ಅಗತ್ಯವಾದ ವಸ್ತುಗಳ
ಖರೀದಿ, ಶಾಲಾ ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲಾ ಅಗತ್ಯತೆಗಳಿಗೆ ಕಳಸ ಪಟ್ಟಣವನ್ನೇ ಅವಲಂಬಿಸಿದ್ದಾರೆ.
ಗ್ರಾಮದ ನಿವಾಸಿಗಳು, ಕೃಷಿಕರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಕಳಸ ಪಟ್ಟಣಕ್ಕೆ ಬರಲು ಗ್ರಾಮದ ಸಮೀಪದಲ್ಲಿ ಹರಿಯುವ ಭದ್ರಾನದಿ ಉಪನದಿ ದಾಟಿ ಬರಬೇಕಿದ್ದು, ನದಿ ದಾಟಲು ಹರಸಾಹಸ ಪಡಬೇಕಿದೆ.
ನದಿ ದಾಟಲು ಸೇತುವೆ ಇಲ್ಲದೆ ಗ್ರಾಮಸ್ಥರು ತೂಗುಸೇತುವೆಯನ್ನು ನಿರ್ಮಿಸಿಕೊಂಡಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಪೋಷಕರು ಬೆಳಗ್ಗೆ ಮತ್ತು ಸಂಜೆ ನದಿ ದಾಟಿಸಿ ಹೋಗಬೇಕಾದ ಪರಿಸ್ಥಿತಿ ಇದೆ.
ಈ ಸಂಬಂಧ ಗ್ರಾಮಸ್ಥರು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು, ಸರ್ಕಾರದಿಂದ ನದಿಗೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, 2019ರಲ್ಲಿ ಸಂಭವಿಸಿದ ಭಾರೀ ಅತಿವೃಷ್ಟಿಯಿಂದ ಸೇತುವೆ ನದಿನೀರಿನಲ್ಲಿ ಕೊಚ್ಚಿ ಹೋಗಿದೆ. ಸೇತುವೆ ಕೊಚ್ಚಿ ಹೋಗಿ 2 ವರ್ಷ ಕಳೆದರೂ ಸೇತುವೆ ಮರು ನಿರ್ಮಾಣ ಕಾರ್ಯ ನಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸೇತುವೆ ಇಲ್ಲದಿರುವುದರಿಂದ ಯಾವುದೇ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ. ಜನರು ಅನಾರೋಗ್ಯಕ್ಕೆ ತುತ್ತಾದಾಗ ಕಂಬಳಿಯಲ್ಲಿ ಕಟ್ಟಿ ಹೊತ್ತು ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿ ಇದೆ. ಅಗತ್ಯ ವಸ್ತುಗಳನ್ನು ತಲೆ ಮೇಲೆ ಹೊತ್ತು ಹೋಗಬೇಕಾದ ಪರಿಸ್ಥಿತಿ ಇದ್ದು ನಿತ್ಯ ಸಂಕಟ ಅನುಭವಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಸಕರು ಗಮನ ಹರಿಸಿ ಸುಸಜ್ಜಿತ ಸೇತುವೆ ನಿರ್ಮಿಸಿಕೊಡಬೇಕು. ಇಲ್ಲವಾದಲ್ಲಿ ನದಿಗೆ ಅಡ್ಡಲಾಗಿ ಸುಸಜ್ಜಿತ ಆಧುನಿಕ ಮಾದರಿಯ ತೂಗು ಸೇತುವೆಯನ್ನಾದರೂ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸೇತುವೆ ಇಲ್ಲದೇ ಗ್ರಾಮಸ್ಥರು ಸಂಕಷ್ಟ ಎದುರಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ತಲೆ ಮೇಲೆ ಹೊತ್ತು ಶಿಥಿಲಗೊಂಡಿರುವ ತೂಗು ಸೇತೆಯಲ್ಲೇ ಗ್ರಾಮಕ್ಕೆ ಹೋಗಬೇಕು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಜೀವಭಯದಲ್ಲಿ ನಿತ್ಯ ಓಡಾಡಬೇಕಾದ ಪರಿಸ್ಥಿತಿ ಇ ದ್ದು ಗ್ರಾಮಕ್ಕೆ ಶೀಘ್ರವೇ ಸೇತುವೆ ನಿರ್ಮಾಣ ಮಾಡಬೇಕು.
ಮಹೇಶ್ ಬಸ್ರಿಕಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ
ಸಂಘದ ವಿಪತ್ತು ನಿರ್ವಹಣಾ ತಂಡದ ಸದಸ್ಯ