Advertisement

ಕುಂದಗೋಳ ಉಪಚುನಾವಣೆಯಲ್ಲಿ ಸತ್ಯಕ್ಕೆ ಜಯ

12:59 PM May 02, 2019 | Team Udayavani |

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಧರ್ಮ ಯುದ್ಧವಾಗಿದೆ. ಸತ್ಯ-ಮಿಥ್ಯಗಳ ನಡುವಿನ ಸೆಣಸಾಟವಾಗಿದ್ದು, ಅಂತಿಮವಾಗಿ ಸಿ.ಎಸ್‌. ಶಿವಳ್ಳಿಯವರ ಧರ್ಮಪತ್ನಿ ಕುಸುಮಾವತಿ ಶಿವಳ್ಳಿ ಅವರು ಗೆಲ್ಲುವ ಮೂಲಕ ಸತ್ಯಕ್ಕೆ ಜಯ ದೊರೆಯಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ| ಪುಷ್ಪಾ ಅಮರನಾಥ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಸ್‌. ಶಿವಳ್ಳಿ ಅವರ ಅಕಾಲಿಕ ನಿಧನ ಪಕ್ಷಕ್ಕೆ ದೊಡ್ಡ ನಷ್ಟ ತಂದಿದೆ. ಶಿವಳ್ಳಿ ಅವರ ಅಭಿವೃದ್ಧಿ ಚಿಂತನೆ, ಕ್ಷೇತ್ರ ಹಾಗೂ ಬಡವರ ಬಗ್ಗೆ ಹೊಂದಿದ ಕಾಳಜಿ, ಸರಳತೆಯೇ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಲಿದೆ ಎಂದರು.

ಸುಳ್ಳು ಭರವಸೆಗಳನ್ನು ನೀಡಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕುಂದಗೋಳ ಮತದಾರರು ಅದರಲ್ಲೂ ವಿಶೇಷವಾಗಿ ಮಹಿಳಾ ಮತದಾರರು ಬಿಜೆಪಿಗೆ ತೋರಿಸಿಕೊಡಲಿದ್ದಾರೆ. 2014ರ ಲೋಕಸಭೆ ಚುನಾವಣೆ ವೇಳೆ ಸ್ವರ್ಗವನ್ನೇ ತಂದು ನಿಮ್ಮ ಕೈಗಿಡುವೆ ಎಂಬಂತಹ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, 2019ರ ಲೋಕಸಭೆ ಚುನಾವಣೆಯಲ್ಲೂ ಮತ್ತದೇ ಹಳೇ ಭರವಸೆಗಳ ಪ್ರಣಾಳಿಕೆ ಹಿಡಿದುಕೊಂಡು ಬಂದಿದ್ದು, ಜನ ಇವರನ್ನು ನಂಬಲಾರರು ಎಂದರು.

ಬಿಜೆಪಿ ಕೊಡುಗೆ ಏನು?: ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಬಿಜೆಪಿಯವರ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಲಿ. ಯುಪಿಎ ಸರಕಾರದಲ್ಲಿ ಅಡುಗೆ ಅನಿಲ, ತೈಲ ಬೆಲೆ ಹಚ್ಚಾದಾಗ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು, ಇದೀಗ ಅಡುಗೆ ಅನಿಲ ಬೆಲೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ. ರೂಪಾಯಿ ಮೌಲ್ಯ ಕುಸಿದಿದೆ. ರೈತರ ಕಷ್ಟ ಗೊತ್ತಿರದ ಪ್ರಧಾನಿ ವಿದೇಶ ಪ್ರವಾಸದಲ್ಲೇ ಐದು ವರ್ಷ ಕಳೆದರು. ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ, ರೈತರ ಆದಾಯ ದುಪ್ಪಟ್ಟು ಎಲ್ಲವೂ ಭಾಷಣಕ್ಕೆ ಸೀಮಿತವಾಗಿವೆ ಎಂದು ವಾಗ್ಧಾಳಿ ನಡೆಸಿದರು.

ಕುಂದಗೋಳ-ಚಿಂಚೊಳ್ಳಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲುವ ಅನಿವಾರ್ಯತೆ ಇದ್ದು, ಎರಡು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಗೆಲ್ಲುವ ಉದ್ದೇಶದಿಂದ ಸಚಿವರು, ಶಾಸಕರ ನಿಯೋಜನೆ ತಪ್ಪಲ್ಲ ಎಂದು ಸಮರ್ಥಿಸಿಕೊಂಡರಲ್ಲದೆ, ಕುಸುಮಾವತಿ ಶಿವಳ್ಳಿಯವರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದರು.

ಸುಮಲತಾಗೆ ಬಿಜೆಪಿಯಂತೆ ಕಾಂಗ್ರೆಸ್‌ ಅನ್ಯಾಯ ಮಾಡಿಲ್ಲ

ಸುಮಲತಾ ಅವರು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ದು ನಿಜ. ಆದರೆ, ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಹಿನ್ನೆಲೆ ಹಾಗೂ ಮಂಡ್ಯದಲ್ಲಿ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದದ್ದು, ಹಾಲಿ ಸಂಸದರು ಜೆಡಿಎಸ್‌ನವರೇ ಇದ್ದಿದ್ದರಿಂದಾಗಿ ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಅನಿವಾರ್ಯತೆ ಇತ್ತು ಎಂದು ಡಾ| ಪುಷ್ಪಾ ಅಮರನಾಥ ತಿಳಿಸಿದರು. ಸುಮಲತಾ ಅವರಿಗೆ ಮಂಡ್ಯ ಬದಲು ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧಿಸುವಂತೆ ಕೇಳಲಾಗಿತ್ತು. ಮಂಡ್ಯದಿಂದಲೇ ಸ್ಪರ್ಧೆಗೆ ಒಲವು ತೋರಿದ್ದರು. ವಿಧಾನ ಪರಿಷತ್ತುಗೆ ನೇಮಕ ಮಾಡುವ ಭರವಸೆ ನೀಡಲಾಗಿತ್ತು. ಅದನ್ನೂ ನಿರಾಕರಿಸಿ ಅವರು ಪಕ್ಷೇತರರಾಗಿ ಸ್ಪರ್ಧಿಸಿದರು. ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೆಟ್ ನಿಮಗೆ ಎಂದು ನಂಬಿಸಿ, ಕೊನೆ ಘಳಿಗೆಯಲ್ಲಿ ಬೇರೊಬ್ಬರಿಗೆ ಟಿಕೆಟ್ ನೀಡಿ, ತೇಜಸ್ವಿನಿಯವರಿಗೆ ಬಿಜೆಪಿ ತೋರಿದ ಅನ್ಯಾಯದ ರೀತಿಯಲ್ಲಿ, ಕಾಂಗ್ರೆಸ್‌ ಸುಮಲತಾ ಅವರಿಗೆ ಅನ್ಯಾಯ ಮಾಡಿಲ್ಲ ಎಂದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next