Advertisement
ಒಕ್ಕಲಿಗ ನಾಯಕತ್ವದ ಸಮ್ಮಿಶ್ರ ಸರ್ಕಾರ ಪತನ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಬಂಧನ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಳಿಬಂದ ದೂರವಾಣಿ ಕದ್ದಾಲಿಕೆ ಆರೋಪ ಪ್ರಕರಣ ಸಿಬಿಐಗೆ ವಹಿಸಿದ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಜೆಪಿ, ಇತರ ಪಕ್ಷಗಳ ಒಕ್ಕಲಿಗ ನಾಯಕತ್ವವನ್ನು ಹಣಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಹೊತ್ತಿನಲ್ಲೇ ಉಪಚುನಾವಣೆ ಎದುರಾಗಿದ್ದು, ಆರೋಪಗಳನ್ನು ಸುಳ್ಳಾಗಿಸಲು ಬಿಜೆಪಿ ನಾಯಕರು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
Related Articles
Advertisement
ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟದಡಿ ಸಾವಿರಾರು ಮಂದಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಬಿಜೆಪಿಯನ್ನೇ ಗುರಿಯಾಗಿಸಿಕೊಂಡು ವಾಗ್ಧಾಳಿ ಮಾಡಿರುವುದು ಸಹ ನಡೆದಿದೆ. ಜತೆಗೆ ಬಿಜೆಪಿಯ ಹಲವು ನಾಯಕರು ಡಿ.ಕೆ.ಶಿವಕುಮಾರ್ ಬಂಧನ ವಿಚಾರದಲ್ಲಿ ನೀಡಿದ ಹೇಳಿಕೆ, ತಿರುಗೇಟು, ವ್ಯಂಗ್ಯದ ಮಾತುಗಳು ಸಮುದಾಯದ ನಾನಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಉಭಯ ಪಕ್ಷಗಳ ಸಂಘಟನೆಗೆ ಹೊಡೆತ ಕೊಡುವ ಪ್ರಯತ್ನವನ್ನು ಬಿಜೆಪಿ ನಡೆಸಿರುವುದು. ಬಂಡೆದ್ದ ಕೆಲ ಒಕ್ಕಲಿಗ ನಾಯಕರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಕುಟುಂಬದವರ ವಿರುದ್ಧ ಆರೋಪ ಮಾಡುತ್ತಿರುವುದು ಸಹ ಸಮುದಾಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಆರೇಳು ಕ್ಷೇತ್ರದಲ್ಲಿ ನಿರ್ಣಾಯಕ: ಈ ಎಲ್ಲ ಅಂಶಗಳ ಆಧಾರದ ಮೇಲೆ ಬಿಜೆಪಿಯು ಒಕ್ಕಲಿಗ ನಾಯಕತ್ವವನ್ನು ಹಣಿಯುತ್ತಿದೆ ಎಂಬುದಾಗಿ ಬಿಂಬಿಸುವ ಕಾರ್ಯವನ್ನು ಕೆಲವರು ಸದ್ದಿಲ್ಲದೆ ತೆರೆಮರೆಯಲ್ಲೇ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಉಪಚುನಾವಣೆ ಎದುರಾಗಿರುವ 15 ಕ್ಷೇತ್ರಗಳ ಪೈಕಿ ಹುಣಸೂರು, ಕೆ.ಆರ್.ಪೇಟೆ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕ ಎನ್ನುವಷ್ಟರ ಮಟ್ಟಿಗೆ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಬಿಜೆಪಿ ಒಕ್ಕಲಿಗ ಸಮುದಾಯವನ್ನು ವಿಶ್ವಾಸದಲ್ಲಿಟ್ಟುಕೊಂಡು ಚುನಾವಣೆಗೆ ಹೇಗೆ ಸಿದ್ದವಾಗಲಿದೆ ಎಂಬ ಕುತೂಹಲ ಮೂಡಿದೆ.
ತೆರೆಮರೆಯಲ್ಲೇ ನಾನಾ ಕಸರತ್ತು: ಬಿಜೆಪಿಗೆ ಒಕ್ಕಲಿಗ ಸಮುದಾಯ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ನಡೆದಿರುವ ಪ್ರಯತ್ನಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ರಾಜ್ಯ ಬಿಜೆಪಿ ನಾಯಕರು ಅದನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ತೆರೆಮರೆಯಲ್ಲೇ ನಾನಾ ಕಸರತ್ತು ನಡೆಸಿದ್ದಾರೆ. ಒಕ್ಕಲಿಗ ಸಮುದಾಯ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಜತೆಗೆ ಪ್ರಭಾವಿ ಖಾತೆ ನೀಡಲಾಗಿದೆ.
ಮತ್ತೂಬ್ಬ ನಾಯಕ ಆರ್.ಅಶೋಕ್ ಅವರಿಗೆ ಪ್ರಭಾವಿ ಕಂದಾಯ ಖಾತೆ ವಹಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಿಸುವುದಾಗಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲೂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ ಪ್ರಯತ್ನ ನಡೆದರೂ ಅಚ್ಚರಿ ಇಲ್ಲ ಎಂಬ ಮಾತುಗಳಿವೆ.
ನಿರಾಧಾರ ಆರೋಪಕ್ಕೆ ಆದ್ಯತೆ ಬೇಕಿಲ್ಲ: ಬಿಜೆಪಿ ವಿರುದ್ಧ ಒಂದು ಸಮುದಾಯವನ್ನು ಎತ್ತಿ ಕಟ್ಟುವ ಉದ್ದೇಶದಿಂದ ನಿರಾಧಾರ ಆರೋಪ ಮಾಡಿದರೆ ಅದಕ್ಕೆ ಆದ್ಯತೆ ನೀಡುವ ಅಗತ್ಯವಿಲ್ಲ. ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಇಡಿ ಪ್ರಕರಣ ದಾಖಲಿಸಿಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೊಳಪಡಿಸಿರುವುದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಅನಗತ್ಯವಾಗಿ ಬಿಜೆಪಿ ನಾಯಕರ ಹೆಸರನ್ನು ಎಳೆದು ತಂದರೂ ರಾಜ್ಯದ ಜನತೆಗೆ ವಾಸ್ತವ ತಿಳಿದಿದೆ.
ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಆದಿಚುಂಚನಗಿರಿ ಮಠದ ಶ್ರೀಗಳ ದೂರವಾಣಿಯೂ ಕದ್ದಾಲಿಕೆಯಾಗಿದೆ ಎಂಬ ಮಾಹಿತಿ ತನಿಖೆಯಿಂದ ಸದ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದು ನಿಜವಾಗಿದ್ದರೆ ಸಮುದಾಯ ಸಮರ್ಥನೆ ಮಾಡಿಕೊಳ್ಳುವುದಾದರೂ ಹೇಗೆ? ಬಿಜೆಪಿಯು ಯಾವುದೇ ಸಮುದಾಯ, ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿಲ್ಲ. ಇದೆಲ್ಲಾ ಜನರಿಗೆ ತಿಳಿಯಲಿದೆ ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
* ಎಂ. ಕೀರ್ತಿಪ್ರಸಾದ್