Advertisement

ನೆರೆ ವಾಕ್ಸಮರ; ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

10:28 AM Oct 04, 2019 | mahesh |

ಬೆಂಗಳೂರು: ರಾಜ್ಯದ ಜನತೆ ಭೀಕರ ಪ್ರವಾಹಕ್ಕೆ ಸಿಲುಕಿ 2 ತಿಂಗಳು ಕಳೆದಿದ್ದರೂ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Advertisement

ವಿಪಕ್ಷ ನಾಯಕರು ಕೇಂದ್ರ ಸರಕಾರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮುಗಿಬಿದ್ದಿದ್ದರೆ, ಇದಕ್ಕೆ ತಿರುಗೇಟು ನೀಡಲು ಹೋದ ಕೆಲವು ಬಿಜೆಪಿ ನಾಯಕರು ವಿವಾದವನ್ನೇ ಸೃಷ್ಟಿಸುತ್ತಿದ್ದಾರೆ. ನೆರೆ ಸಂತ್ರಸ್ತರ ಸ್ಪಂದನೆಗಿಂತ ರಾಜಕೀಯ ಕೆಸರೆರಚಾಟದ ಅಬ್ಬರ ತೀವ್ರವಾಗಿದೆ.

ದಿನ ಕಳೆದಂತೆ ನೆರೆ ವಿಚಾರದಲ್ಲಿ ಜನಾಕ್ರೋಶ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು, ಗುರುವಾರ ನಡೆಯುವ ಕೇಂದ್ರ ಸಂಪುಟ ಸಭೆ ಯಲ್ಲಿ ಈ ವಿಚಾರ ಪ್ರಸ್ತಾವಿಸುತ್ತೇವೆ ಎಂದಿದ್ದಾರೆ. ಜತೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಜತೆಗೂಡಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಳಿಯೂ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ರಾಜ್ಯದ 22 ಜಿಲ್ಲೆಗಳಲ್ಲಿ ನೆರೆಯಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿ ಸಂಕಷ್ಟಕ್ಕೆ ಸಿಲುಕಿ ಎರಡು ತಿಂಗಳಾದರೂ ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತ್ರಸ್ತರಿಗೆ ಸಾಂತ್ವನ ಸಂದೇಶವಾಗಲಿ, ಪುನರ್ವಸತಿ ಕಾರ್ಯಗಳಿಗೆ ಸಹಾಯ ಧನ, ಪರಿಹಾರವಾಗಲಿ ನೀಡದಿರುವ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿದೆ.

ಪ್ರತಾಪ್‌ ಸಿಂಹ ಹೇಳಿಕೆ ವಿವಾದ
ನೆರೆ ಪರಿಹಾರದ ಬಗ್ಗೆ ವಿಪಕ್ಷ ನಾಯಕರು ನೀಡು ತ್ತಿರುವ ಹೇಳಿಕೆಗಳಿಗೆ ತಿರುಗೇಟು ನೀಡಲು ಹೋದ ಸಂಸದ ಪ್ರತಾಪ್‌ ಸಿಂಹ ವಿವಾದ ಸೃಷ್ಟಿಸಿಕೊಂಡಿದ್ದಾರೆ. “ಆಕಾಶಕ್ಕೆ ಉಗುಳಿದರೆ ಅದು ನಿಮ್ಮ ಮೇಲೆಯೇ ಬೀಳುತ್ತದೆ’ ಎಂದು ಪ್ರತಾಪ್‌ ಸಿಂಹ ಪ್ರಧಾನಿ ಟೀಕಾಕಾರರ ವಿರುದ್ಧ ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

Advertisement

ಕಾಂಗ್ರೆಸ್‌ ನಾಯಕರ ಕಿಡಿ
ಪ್ರತಾಪ್‌ಸಿಂಹ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ಕಿಡಿ ಕಾರಿದ್ದಾರೆ. ಪ್ರತಾಪ್‌ ಸಿಂಹ ಅವರಿಗೆ ಮೋದಿಯವರು ದೇವರಿರಬಹುದು. ಆದರೆ ಆ ದೇವರು ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಎಡವಿದ್ದಾರೆ ಎಂದು ಮಾಜಿ ಡಿಸಿಎಂ ಡಾ| ಜಿ. ಪರಮೇಶ್ವರ್‌ ಹೇಳಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರು ಪ್ರತಾಪ್‌ ಸಿಂಹ ರಾಜಕೀಯ ಭಟ್ಟಂಗಿತನ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

ಡಿ.ವಿ.- ಸೂಲಿಬೆಲೆ ಜಟಾಪಟಿ
ನೆರೆ ಪರಿಹಾರಕ್ಕೆ ರಾಜ್ಯದ ಕೇಂದ್ರ ಸಚಿವರು, ಸಂಸದರು ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಚಕ್ರವರ್ತಿ ಸೂಲಿಬೆಲೆ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಅವರ ಟ್ವೀಟ್‌ ಸಮರ ಬುಧವಾರ ವೈಯಕ್ತಿಕ ಟೀಕೆಗೆ ತಿರುಗಿತು. ಒಂದು ಹಂತದಲ್ಲಿ ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳೆಂದು ಗಾಂಧೀಜಿ ಹೇಳಿದ್ದಾರೆ. ಇವರೆಲ್ಲ ಅದೇ ಬ್ರ್ಯಾಂಡ್‌ಗೆ ಬರುತ್ತಾರೆ ಎಂದು ಸದಾನಂದ ಗೌಡ ತೀಕ್ಷ್ಣವಾಗಿ ಹೇಳಿದ್ದು ವಿವಾದ ತಾರಕಕ್ಕೇರುವಂತೆ ಮಾಡಿತು.

ವಿವಾದಾತ್ಮಕ ಹೇಳಿಕೆ
ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಪ್ರಧಾನಿ ಮೋದಿಯವರು ಕಾರ್ಯದೊತ್ತಡದಲ್ಲಿದ್ದ ಕಾರಣ ಟ್ವೀಟ್‌ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರಧಾನಿ ಮೋದಿಯವರಿಗೆ ಇದೊಂದೇ ಕೆಲಸವಲ್ಲ ಎಂದು ಬುಧವಾರ ಹೇಳಿಕೆ ನೀಡಿದ್ದಾರೆ. ಕೇಂದ್ರದ ಮಾಜಿ ಸಚಿವ ರಮೇಶ್‌ ಜಿಗಜಿಣಗಿ, ಸಂಸದರೇನು ಭಿಕಾರಿಗಳೇ ಎಂದು ಪ್ರಶ್ನಿಸಿದರು. ಹೀಗೆ ಹಲವು ಬಿಜೆಪಿ ನಾಯಕರು ನೀಡಿರುವ ಹೇಳಿಕೆ ವಿವಾದ ಸ್ವರೂಪ ಪಡೆದಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂಬಂಧ ಪಕ್ಷ ಈವರೆಗೆ ಯಾವುದೇ ಅಧಿಕೃತ ಅಭಿಪ್ರಾಯ ನೀಡಿಲ್ಲ. ಈವರೆಗೆ ಪಕ್ಷದ ಕೆಲವು ನಾಯಕರು ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು, ಪಕ್ಷದ ಅಧಿಕೃತ ಅಭಿಪ್ರಾಯವಲ್ಲ.
– ಗೋ. ಮಧುಸೂದನ್‌, ರಾಜ್ಯ ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next