ನಂಜನಗೂಡು: ಕಪಿಲೆ ನದಿ ಪ್ರವಾಹಕ್ಕೆ ತುತ್ತಾಗಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಶುಕ್ರವಾರ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಸಂಪೂರ್ಣವಾಗಿ ಮನೆ, ಆಸ್ತಿ ಕಳೆದುಕೊಂಡವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಉಳಿದವರಿಗೆ ಸರ್ಕಾರದ ವತಿಯಿಂದ ತುರ್ತು 10 ಸಾವಿರ ರೂ. ನೆರೆ ಪರಿಹಾರ ಹಾಗೂ ದಿನಬಳಕೆ ವಸ್ತುಗಳ ಕಿಟ್ ವಿತರಿಸಿ, ಮನೆಗೆ ತೆರಳಲು ಅವಕಾಶ ಕಲ್ಪಿಸಲಾಯಿತು.
ಕಳೆದ ಒಂದು ವಾರದಿಂದ ವಿವಿಧ ಪ್ರವಾಹ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರನ್ನು ಪ್ರಥಮ ಹಂತದ ಪರಿಹಾರದೊಂದಿಗೆ ಅವರವರ ನಿವಾಸಗಳಿಗೆ ಬೀಳ್ಕೊಡುವ ಕಾರ್ಯಕ್ರಮಕ್ಕೆ ಶಾಸಕ ಬಿ. ಹರ್ಷವರ್ಧನ ಶುಕ್ರವಾರ ಚಾಲನೆ ನೀಡಿದರು.
ಕಿಟ್ ವ್ಯವಸ್ಥೆ: ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗಿರುವ ತಲಾ 10 ಸಾವಿರ ರೂ.ಗಳ ಚೆಕ್ ಹಾಗೂ ಜೊತೆಗೆ ಪ್ರತಿಯೊಬ್ಬರಿಗೂ ತಲಾ 15 ಕೇಜಿ ಅಕ್ಕಿ , 1 ಕೇಜಿ ತೊಗರಿ ಬೇಳೆ , 1 ಕೇಜಿ ಉಪ್ಪು, ಸಕ್ಕರೆ, 1ಲೀಟರ್ ಅಡುಗೆ ಎಣ್ಣೆ, ಕಾಫಿ ಟೀ ಪುಡಿ, 2 ಪ್ಯಾಕೇಟ್ ಮ್ಯಾಗಿ, ಸೋಪು, ಟೂತ್‌ಪೇಸ್ಟ್, ಫೆನಾಯಿಲ್ ಹಾಗೂ ಒಂದೊಂದು ಪಂಚೆ, ಸೀರೆ, ಶರ್ಟ್, ಟವೆಲ್‌ಗಳಿದ್ದ ಕಿಟ್ ನೀಡಲಾಯಿತು.
ಬದಲಿ ವ್ಯವಸ್ಥೆ: ಕಪಲೆ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ತರಾಗಿದ್ದ ನಿವಾಸಿಗಳನ್ನು ಅವರವರ ಮನೆಗಳಿಗೆ ಕಳುಹಿಸಲಾಗಿದೆ. ಸಂಪೂರ್ಣ ಮನೆ ಹಾನಿಯಾಗಿ ನಿರಾಶ್ರಿತರಾದವರನ್ನು ಬದಲಿ ವ್ಯವಸ್ಥೆ ಮಾಡುವವರೆಗೂ ನಗರದ ಅಂಬೇಡ್ಕರ್ ಭವನದಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಉಳಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರ್ ಮಹೇಶ್‌ಕುಮಾರ್ ತಿಳಿಸಿದ್ದಾರೆ.
15 ಕೋಟಿ ನಷ್ಟ: ತಾಲೂಕಿನಲ್ಲಿ 823 ಕುಟುಂಬಗಳು ನೆರೆ ಹಾವಳಿಗೆ ಸಿಲುಕಿದ್ದು, ಈ ಸಂತ್ರಸ್ತರಿಗೆ ಸರ್ಕಾರ 75 ಲಕ್ಷ ರೂ. ಬಿಡುಗಡೆ ಮಾಡಿದೆ. 1,132 ಮನೆಗಳಿಗೆ ನೆರೆ ನೀರು ನುಗ್ಗಿದ್ದು, 48 ಮನೆಗಳು ಸಂಪೂರ್ಣ ನಾಶವಾಗಿವೆ. ಮಳೆ ಹಾಗೂ ಪ್ರವಾಹದಿಂದ ತಾಲೂಕಿನಲ್ಲಿ 15 ಕೋಟಿ ರೂ. ನಷ್ಟ ಸಂಭವಿಸಿದೆ. ಈ ಕುರಿತು ಅಂತಿಮ ಹಂತದ ವರದಿ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.