ಆನೇಕಲ್: ತಾನು ಈ ಹಿಂದೆ ಕೆಲಸ ಮಾಡಿದ ಕಂಪನಿಯ ಮಾಲೀಕರು, ಹಿರಿಯ ಸಿಬ್ಬಂದಿ ಕಿರುಕುಳ ನೀಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ರಾಮನಗರಜಿಲ್ಲೆ, ಚನ್ನಪಟ್ಟಣ ತಾಲೂಕಿನ ಅಲ್ಲಾಳಸಂದ್ರ ಗ್ರಾಮದ ತೇಜಸ್‌ಕುಮಾರ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಹಾರಗದ್ದೆ ಆನೇಕಲ್ ಮುಖ್ಯ ರಸ್ತೆಯಲ್ಲಿರುವ ಹೆವಿಡೆಂಟ್ ಲೇಸರ್ ಆಟೋ ಪ್ರçವೆಟ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಜಿಗಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ತೇಜಸ್ ಶುಕ್ರವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಕಂಪನಿಯವರು ಕೆಲಸ ಬಿಟ್ಟ ಬಳಿಕ ರಿಲೀವ್ ಲೇಟರ್ ವಿಚಾರವಾಗಿ ತೇಜಸ್ ಮತ್ತು ಕಂಪನಿಯ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಷಯವಾಗಿ ಸ್ಥಳೀಯ ಮುಖಂಡರನ್ನು ಕರೆದುಕೊಂಡು ಕಂಪನಿಯ ಬಳಿ ಹೋಗಿದ್ದರೂ ರಿಲೀವ್ ಲೆಟರ್ ಸಿಕ್ಕಿರದ ಕಾರಣ ಮನನೊಂದು ತೇಜಸ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಎಂ ಪರಿಹಾರ ಕೊಡಿಸಲಿ: ನನ್ನ ಸಾವಿಗೆ ಹೆವಿಟೆಂಡ್ ಕಂಪನಿಯ ಮಾಲೀಕರಾದ ಮೋಹನ್‌ರಾಜ್, ರಘುರಾಜ್, ಸುಭಾಷ್‌ಕುಮಾರ್ ಅವರೇ ಕಾರಣ, ನಾನು ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದೆ. ಕಳೆದ 15 ದಿನಗಳಿಂದ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಈ ವಿಷಯ ತಿಳಿದ ಹೆವಿಡೆಂಟ್ ಕಂಪನಿಯವರು ಇ-ಮೇಲ್ ಮಾಡಿ ಕೆಲಸದಿಂದ ತೆಗೆದು ಹಾಕುವಂತೆ ಮಾಡಿದ್ದಾರೆ.
ಅಲ್ಲದೆ ಕಂಪನಿಯಿಂದ ರಿಲೀವ್ ಲೆಟರ್‌ಗಾಗಿ ಅಲೆದರೂ ನೀಡಲಿಲ್ಲ. ಇದರಿಂದ ಬೇರೆಲ್ಲೂ ಕೆಲಸ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆ. ನನ್ನ ಸಾವಿನಿಂದ ನಮ್ಮ ಮನೆಯವರು ಕೊರಗ ಬೇಡಿ. ಚನ್ನಪಟ್ಟಣ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳು ನನ್ನ ಕುಟುಂಬಕ್ಕೆ ಹೆವಿಟೆಂಡ್ ಕಂಪನಿಯಿಂದ 20 ಲಕ್ಷ ರೂ. ಪರಿಹಾರ ಕೊಡಿಸ ಬೇಕು ಹಾಗೆ ಕಂಪನಿಯ ಪರವಾನಗಿ ರದ್ದು ಮಾಡ ಬೇಕು,
ನನ್ನ ದೇಹವನ್ನು ಯಾವುದಾದರೂ ಮೆಡಿಕಲ್ ಕಾಲೇಜಿಗೆ ದಾನ ಮಾಡಿ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲು: ತೇಜಸ್ ಆತ್ಮಹತ್ಯೆ ಹಿನ್ನೆಲೆ ಪೋಷಕರು ಕಂಪನಿ ಮಾಲೀಕರ ವಿರುದ್ಧ ದೂರು ನೀಡಿ 20 ಲಕ್ಷ ರೂ. ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಕಂಪನಿಗೆ ಬೀಗ ಹಾಕಲಾಗಿದೆ.