ಜೆಡಿಎಸ್ ಕಟ್ಟಾಳು ಕಾಂಗ್ರೆಸ್‌ನಿಂದ, ಕಾಂಗ್ರೆಸ್ ಹುರಿಯಾಳು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಚಾಮರಾಜಪೇಟೆ ಈ ಬಾರಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರವಾದರೆ, ಕೃಷ್ಣರಾಜಪುರದಲ್ಲಿ ಸಿಎಂ ಆಪ್ತ ಕಣದಲ್ಲಿದ್ದಾರೆ. ಕಳೆದ ಬಾರಿ ಕೈತಪ್ಪಿ ಹೋಗಿರುವ ಕೆ.ಆರ್.ಪುರದಲ್ಲಿ ಜಯಕ್ಕಾಗಿ ತಂತ್ರ ರೂಪಿಸುತ್ತಿರುವ ಬಿಜೆಪಿ, ಕೃಷಿ ಸಚಿವರ ಕ್ಷೇತ್ರ ಬ್ಯಾಟರಾಯನಪುರದಲ್ಲೂ ವಿಜಯಕ್ಕಾಗಿ ಹವಣಿಸುತ್ತಿದೆ. ಇನ್ನು ಪಾಲಿಕೆಯ ಗಡಿ ಕ್ಷೇತ್ರ ದಾಸರಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿಗಳ ಮಾಜಿ ಗನ್‌ಮ್ಯಾನ್ ಕಣದಲ್ಲಿರುವುದು ವಿಶೇಷ.
ಚಾಮರಾಜಪೇಟೆ: ರಾಜಧಾನಿಯಲ್ಲಿ ರಾಜಕೀಯವಾಗಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಕ್ಷೇತ್ರ ಚಾಮರಾಜಪೇಟೆ. ಇಲ್ಲಿ ಅಭ್ಯರ್ಥಿಗಳ ಮರಕೋತಿ ಆಟ ನಡೆದಿದೆ. ಒಂದೊಮ್ಮೆ ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಪರ್ಧೆ ಮಾಡಿ ಜಯಗಳಿಸಿದ್ದರು. ಈ ಬಾರಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಜಮೀರ್ ಅಹಮದ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಅಲ್ತಾಫ್ಖಾನ್ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲವಾದರೂ ಪ್ರಚಾರ ಆರಂಭಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಕ್ಷೇತ್ರವಾಗಿರುವ ಚಾಮರಾಜಪೇಟೆಯಲ್ಲಿ ಅಭ್ಯರ್ಥಿಗಳ ನಡುವಿನ ಹೋರಾಟಕ್ಕಿಂದ ಎಚ್.ಡಿ.ದೇವೇಗೌಡ- ಸಿದ್ದರಾಮಯ್ಯ ನಡುವಿನ ಹೋರಾಟ ಎಂಬಂತಾಗಿದೆ.
ಕೆ.ಆರ್.ಪುರ: ಬೆಂಗಳೂರು ನಗರಕ್ಕೆ ಗಡಿ ಕ್ಷೇತ್ರವಾಗಿರುವ ಕೃಷ್ಣರಾಜಪುರ, ರಾಜಕೀಯವಾಗಿಯೂ ಹೆಚ್ಚು ಮಹತ್ವ ಪಡೆದುಕೊಂಡಿರುವ ವಿಧಾನಸಭಾ ಕ್ಷೇತ್ರ. ಅದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಿ.ಎ.ಬಸವರಾಜು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ನಂದೀಶ್ ರೆಡ್ಡಿ ಬಿಜೆಪಿ ಹಾಗೂ ಮಾಜಿ ಸಚಿವ ಎ.ಕೃಷ್ಣಪ್ಪ ಸಹೋದರ ಡಿ.ಎ.ಗೋಪಾಲ್ ಜೆಡಿಎಸ್ ಅಭ್ಯರ್ಥಿ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದು ವರ್ಷ ಹಿಂದಿನಿಂದಲೇ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿರುವುದು ಹೋರಾಟದ ತೀವ್ರತೆ ತೋರುತ್ತದೆ. ಇಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವುದು ಅಭಿವೃದ್ಧಿ ವಿಚಾರ. ಮತ್ತೂಂದೆಡೆ ವೈಯಕ್ತಿಕ ಪ್ರತಿಷ್ಠೆಯನ್ನೂ ಪಣಕ್ಕಿಡಲಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಬಿಎಂಪಿಯ 9 ವಾರ್ಡ್‌ಗಳ ಪೈಕಿ 6 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರಿದ್ದು, ಉಳಿದ ಮೂರು ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ.
ಆನೇಕಲ್: ತಮಿಳುನಾಡಿನ ಗಡಿ ಭಾಗದಲ್ಲಿರುವ ಆನೇಕಲ್ ಕ್ಷೇತ್ರ ರಾಜಕೀಯವಾಗಿ ಈ ಬಾರಿ ಹೆಚ್ಚು ಮಹತ್ವ ಪಡೆದಿದೆ. ರಾಜಕೀಯವಾಗಿ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಈ ಕ್ಷೇತ್ರ ಹದಿನೆಂಟು ವರ್ಷದ ನಂತರ 2013ರಲ್ಲಿ ಕಾಂಗ್ರೆಸ್ ತೆಕ್ಕೆಗೆ ಬಂದಿತ್ತು. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶಿವಣ್ಣ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಟಿಕೆಟ್ ದೊರೆತಿದೆ. ಜೆಡಿಎಸ್ ಈ ಕ್ಷೇತ್ರವನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದು, ಕೃಷ್ಣಮೂರ್ತಿ ಅಭ್ಯರ್ಥಿಯಾಗಿದ್ದಾರೆ. ಬಿಬಿಎಂಪಿ ವಾರ್ಡ್ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕ್ಷೇತ್ರ ಸೇರಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಹೊಂದಿರುವ ಈ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯವೇ ನಿರ್ಣಾಯಕ.
ಬ್ಯಾಟರಾಯನಪುರ: ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಪ್ರತಿನಿಧಿಸುವ ಬ್ಯಾಟರಾಯನಪುರ ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ವೇಮಗಲ್‌ನ ಮಾಜಿ ಸಚಿವ ಸಿ.ಭೈರೇಗೌಡರ ಪುತ್ರ ಕೃಷ್ಣ ಭೈರೇಗೌಡ ಅವರು ಕ್ಷೇತ್ರ ಪುನರ್‌ವಿಂಗಡಣೆ ನಂತರ ವೇಮಗಲ್ ಕ್ಷೇತ್ರದಿಂದ ಬ್ಯಾಟರಾಯನಪುರಕ್ಕೆ ಬಂದವರು. ಇಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿರುವ ಸಚಿವ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಎರಡು ಬಾರಿ ಸೋಲು ಅನುಭವಿಸಿರುವ ಎ.ರವಿ ಬಿಜೆಪಿ ಅಭ್ಯರ್ಥಿ. ಇವರು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ಸಹೋದರ ಕೂಡ ಹೌದು. ಇದೇ ಕಾರಣಕ್ಕಾಗಿ ಕ್ಷೇತ್ರದ ರಾಜಕೀಯವೂ ಜಿದ್ದಾಜಿದ್ದಿನಿಂದ ಕೂಡಿದೆ. ಈ ಕ್ಷೇತ್ರ ನಗರ ಹಾಗೂ ಗ್ರಾಮೀಣ ಪ್ರದೇಶದ ಭಾಗಗಳನ್ನು ಒಳಗೊಂಡಿದೆ.
ದಾಸರಹಳ್ಳಿ: ಬಿಬಿಎಂಪಿ ಗಡಿಯಲ್ಲಿರುವ ದಾಸರಹಳ್ಳಿ ಅತ್ಯಂದ ದೊಡ್ಡ ವಿಸ್ತಾರದ ಕ್ಷೇತ್ರ. ವಲಸಿಗರು ಅದರಲ್ಲೂ ಶ್ರಮಿಕರು ಹೆಚ್ಚಾಗಿರುವ ಕ್ಷೇತ್ರ. ಬಿಜೆಪಿಯಿಂದ ಹಾಲಿ ಶಾಸಕ ಮುನಿರಾಜು, ಕಾಂಗ್ರೆಸ್‌ನಿಂದ ಪಿ.ಎನ್.ಕೃಷ್ಣಮೂರ್ತಿ, ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಗನ್‌ಮ್ಯಾನ್ ಆಗಿದ್ದ ಮಂಜುನಾಥ್ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಎಲ್.ಶಂಕರ್‌ಗೆ ಈ ಬಾರಿ ಚಿಕ್ಕಮಗಳೂರು ಟಿಕೆಟ್ ಸಿಕ್ಕಿದೆ. ಹೀಗಾಗಿ, ಮೂವರು ಸ್ಥಳೀಯ ಅಭ್ಯರ್ಥಿಗಳ ನಡುವೆ ತ್ರಿಕೋನ ಹಣಾಹಣಿಗೆ ಕ್ಷೇತ್ರ ಸಜ್ಜಾಗಿದೆ. ಮೂರೂ ಪಕ್ಷಗಳು ಸಮಬಲದ ಸಾಮರ್ಥ್ಯ ಹೊಂದಿವೆ.