Advertisement

ಕುಲಪತಿ ಇಲ್ಲದೇ ಬೀದರ ಪಶು ವಿವಿ ಅನಾಥ!

10:32 AM Dec 26, 2017 | Team Udayavani |

ಬೀದರ: ಸರ್ಕಾರದ ನಿಷ್ಕಾಳಜಿತನದ ಪರಿಣಾಮ ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಹುದ್ದೆ ಒಂದೂವರೆ ವರ್ಷದಿಂದ ಖಾಲಿ ಉಳಿದಿದೆ. ಹಿಂದೆ ನೇಮಕಾತಿ ಅಕ್ರಮ, ಅವ್ಯವಹಾರಗಳಿಂದ ಚರ್ಚೆಗೆ ಒಳಗಾಗುತ್ತಿದ್ದ ವಿವಿ ಈಗ ಕಾಯಂ ಕುಲಪತಿ ಇಲ್ಲದೇ ಮತ್ತೆ ಸುದ್ದಿಯಲ್ಲಿದೆ.

Advertisement

ಜಾನುವಾರುಗಳ ಆರೋಗ್ಯ ಸಂಶೋಧನೆ ಚಟುವಟಿಕೆಗಳು ನಡೆಯುವುದರಿಂದ ಪಶು ವಿಶ್ವವಿದ್ಯಾಲಯ ಅತಿ ಮಹತ್ವದ್ದಾಗಿದ್ದರೂ ಅದರ ಮುಖ್ಯ ಹುದ್ದೆಯಾಗಿರುವ ಕುಲಪತಿ ಸ್ಥಾನ ತುಂಬುವಲ್ಲಿ ಸರ್ಕಾರ ನಿಷ್ಕಾಳಜಿ ತೋರುತ್ತಿದೆ. 2016ರ ಸೆ.22ರಂದು ಕುಲಪತಿ ಪ್ರೊ| ರೇಣುಕಾಪ್ರಸಾದ ನಿವೃತ್ತಿ ನಂತರ ಈ ಸ್ಥಾನಕ್ಕೆ ಯಾರೊಬ್ಬರನ್ನು ಇದೂವರೆಗೆ ನೇಮಿಸಿಲ್ಲ.

ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಡೀನ್‌ ಡಾ| ಆರ್‌.ವಿ. ಪ್ರಸಾದ ಅವರನ್ನು ಪ್ರಭಾರಿ ಕುಲಪತಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ. ರಾಜ್ಯದ ಏಕೈಕ ಪಶು ವಿವಿ ವ್ಯಾಪ್ತಿಯಲ್ಲಿ ಒಟ್ಟು 7 ಮಹಾವಿದ್ಯಾಲಯಗಳು ಮತ್ತು 2 ಪಾಲಿಟೆಕ್ನಿಕ್‌ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ನಿರ್ವಹಣೆ ಜವಾಬ್ದಾರಿ ಕುಲಪತಿಗಳ ಮೇಲಿದೆ.
 
ಆದರೆ, ಮಹತ್ವದ ಹುದ್ದೆಯನ್ನೇ ಸರ್ಕಾರ ಖಾಲಿ ಇರಿಸಿರುವ ವಿಷಯ ಗಂಭೀರವಾಗಿದೆ. ಇದರಿಂದ ಶಿಕ್ಷಣದ ಗುಣಮಟ್ಟದ ಜತೆಗೆ ಹುದ್ದೆಗಳ ಭರ್ತಿ ಸೇರಿದಂತೆ ಕಾನೂನಾತ್ಮಕ ವಿಷಯಗಳ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಆಡಳಿತ ಕಾರ್ಯವೈಖರಿ ಮೇಲೂ ಹೊಡೆತ ಬಿದ್ದಿದೆ.

ಕುಲಪತಿಗಳ ಹುದ್ದೆಗಾಗಿ ಪಶು ವೈದ್ಯಕೀಯ ಮತ್ತು ಸಂಗೋಪಾಲನಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರನ್ನೊಳಗೊಂಡ ಶೋಧನಾ ಸಮಿತಿಗೆ ಪ್ರೋಫೆಸರ್‌ಗಳಿಂದ 20ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಶೋಧನಾ ಸಮಿತಿಯು ಸಮಯಕ್ಕೆ ಸಭೆಗಳನ್ನು ನಡೆಸದೇ ಮುಂದೂಡುತ್ತ ಬಂದಿದ್ದೇ ಕುಲಪತಿಗಳ ಹುದ್ದೆ ನೇಮಕಾತಿ ವಿಳಂಬಕ್ಕೆ ಕಾರಣವಾಗಿತ್ತು.

ಮೂಲಗಳ ಪ್ರಕಾರ ಶೋಧನಾ ಸಮಿತಿ ನ.29ರಂದು ಸಭೆ ನಡೆಸಿ ಅರ್ಜಿಗಳ ಪರಿಶೀಲನೆ ನಡೆಸಿದ್ದು, ಐದು ಜನರ ಹೆಸರನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಕಳುಹಿಸಿದೆ. ಈ ಪಟ್ಟಿಯಲ್ಲಿ ಡಾ|ಎಚ್‌. ಎಂ ಜಯಪ್ರಕಾಶ, ಪ್ರೊ| ಶಿವಾನಂದ ಮೂರ್ತಿ, ಡಾ|ಎಸ್‌.ಯತಿರಾಜ್‌, ಪ್ರೊ| ಶಿವಶಂಕರ ಉತ್ತರಗಿ, ಎಚ್‌.ಟಿ. ನಾರಾಯಣಸ್ವಾಮಿ ಅವರ ಹೆಸರು ಸೇರಿವೆ ಎನ್ನಲಾಗುತ್ತಿದೆ. ಆದರೆ, ಸರ್ಕಾರ ಈ ಪೈಕಿ ಮೂವರು ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕಿದ್ದು, ಈ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ.

Advertisement

ಸತ್ಯಶೋಧನಾ ಸಮಿತಿಯ ವಿಳಂಬ ಧೋರಣೆ ಬಳಿಕ ಈಗ ಸರ್ಕಾರದ ಮಟ್ಟದಲ್ಲಿ ತಡ ಆಗುತ್ತಿದೆ. ಮಹತ್ವದ ಹುದ್ದೆಗಾಗಿ ಪ್ರಬಲ ಪೈಪೋಯೂ ನಡೆಯುತ್ತಿರುವುದು ಸಹ ಮೂವರ ಹೆಸರು ಅಂತಿಮಗೊಳ್ಳುವಲ್ಲಿ ವಿಳಂಬ ಆಗುತ್ತಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಶೀಘ್ರ ನೇಮಕಾತಿ ಪ್ರಕ್ರಿಯೆ ಮುಗಿಸಬೇಕಿದೆ.
 
ವಾರದಲ್ಲಿ ಪ್ರಕ್ರಿಯೆ ಪೂರ್ಣ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿಯಲ್ಲಿ ಸಾಕಷ್ಟು ವಿಳಂಬ ಆಗಿದ್ದು, ಇದರಿಂದ ವಿವಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸತ್ಯಶೋಧನಾ ಸಮಿತಿಯು ಐದು ಜನರ ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಪೈಕಿ ಅಂತಿಮವಾಗಿ ಮೂವರ ಹೆಸರು ರಾಜ್ಯಪಾಲರಿಗೆ ಶಿಫಾರಸು ಆಗಬೇಕಿದೆ. ಒಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.  ಮಲ್ಲಿಕಾರ್ಜುನ ಬಿರಾದಾರ, ಆಡಳಿತ ಮಂಡಳಿ ಸದಸ್ಯ, ಪಶು ವಿವಿ, ಬೀದರ

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next