ಬೆಂಗಳೂರು: ಥಣಿಸಂದ್ರ ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಇತರರು ಆರೋಪಮುಕ್ತಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆ.27ಕ್ಕೆ ಆದೇಶ ಕಾಯ್ದಿರಿಸಿದೆ.
ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಹೀಗಾಗಿ ತಮ್ಮ ಕಕ್ಷಿದಾರರನ್ನು ಆರೋಪಮುಕ್ತ ಗೊಳಿಸಬೇಕೆಂದು ಕುಮಾರಸ್ವಾಮಿ ಹಾಗೂ ಇತರೆ ಆರೋಪಿಗಳ ಪರ ವಕೀಲರು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ಪ್ರಕರಣದಲ್ಲಿ ಕುಮಾರಸ್ವಾಮಿ ಸೇರಿ ಎಲ್ಲರ ವಿರುದ್ಧ ಗಂಭೀರ ಆರೋಪ ಇದೆ. ಹೀಗಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ವಿಚಾರಣೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಆ.27ಕ್ಕೆ ಆದೇಶ ಕಾಯ್ದಿರಿಸಿದೆ.
ಏನಿದು ಪ್ರಕರಣ?: 2007ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ತಾಲೂಕು ಥಣಿಸಂದ್ರ ಗ್ರಾಮದ ಸರ್ವೇ ನಂಬರ್ 87/4ಬಿ ನಲ್ಲಿರುವ 3 ಎಕರೆ 8 ಗುಂಟೆ ಜಮೀನನ್ನು ನೋಟಿಫಿಕೇಷನ್ ಮಾಡಿಕೊಟ್ಟಿದ್ದರೆಂದು ಆರೋಪಿಸಿ ಚಾಮರಾಜನಗರದ ಮಹಾದೇವಸ್ವಾಮಿ ಎಂಬುವರು 2012ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸುವಂತೆ ಲೋಕಾ ಪೊಲೀಸರಿಗೆ ಸೂಚಿಸಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರಲ್ಲಿ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚೆನ್ನಿಗಪ್ಪ, ಭೂ ಮಾಲೀಕರಾದ ಎ.ವಿ ರವಿ ಪ್ರಕಾಶ್ ಹಾಗೂ ಎ.ವಿ ಶ್ರೀರಾಮ್ ಸೇರಿ ಕೆಲ ಶಾಸಕರು ಹಾಗೂ ಸಂಸದರ ಹೆಸರನ್ನು ಉಲ್ಲೇಖೀಸಲಾಗಿತ್ತು. ಹೀಗಾಗಿ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿದ್ದು, ವಿಚಾರಣೆ ಆರಂಭವಾಗಿದೆ.